ಬೆಳ್ತಂಗಡಿ: ವ್ಯಾವಹಾರಿಕವಾಗಿ ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವ ಕೊಯ್ಯೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2023-24ನೇ ಸಾಲಿನ ವಾರ್ಷಿಕ ಮಹಾಸಭೆಯು ಆಗಸ್ಟ್ 31ರಂದು ಕೊಯ್ಯೂರು ಶ್ರೀ ಪಂಚದುರ್ಗಾ ಸಭಾಭವನದಲ್ಲಿ ಸಂಘದ ಅಧ್ಯಕ್ಷ ನವೀನ್ ಕುಮಾರ್‌ರ ಅಧ್ಯಕ್ಷತೆಯಲ್ಲಿ ಜರಗಿತು.ಮಹಾಸಭೆಯನ್ನು ಉದ್ಧೇಶಿಸಿ ಮಾತನಾಡಿ ಸಂಘದ ವಾರ್ಷಿಕ ವ್ಯವಹಾರದ ಬಗ್ಗೆ ಸವಿವರವಾದ ಮಾಹಿತಿ ನೀಡಿದ ಅಧ್ಯಕ್ಷ ನವೀನ್ ಕುಮಾರ್; ಸಂಘವು ವರದಿ ಸಾಲಿನಲ್ಲಿ 157 ಕೋಟಿ ರೂಪಾಯಿ ವ್ಯವಹಾರ ನಡೆಸಿ, 61.70ಲಕ್ಷ ರೂಪಾಯಿ ನಿವ್ವಳ ಲಾಭ ಗಳಿಸಿದೆ ಎಂದರಲ್ಲದೇ; ಸದಸ್ಯರಿಗೆ 10.25% ಡಿವಿಡೆಂಡ್ ಘೋಷಿಸಿದರು. ಮಹಾಸಭೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘದ ಆಡಳಿತ ಮಂಡಳಿಯ ಹಿರಿಯ ಸದಸ್ಯ ಅಶೋಕ್ ಭಟ್; ಸಂಘದ ಸರ್ವಸದಸ್ಯರ ಸಹಕಾರದಿಂದ ಸಂಘವು ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ಒಂದು ಊರಿನ ಶೈಕ್ಷಣಿಕ, ಆರೋಗ್ಯ, ಧಾರ್ಮಿಕ ಕ್ಷೇತ್ರಗಳೊಂದಿಗೆ ಅಲ್ಲಿನ ಆರ್ಥಿಕ ಸಂಸ್ಥೆಯೂ ಯೋಗ್ಯ ರೀತಿಯಲ್ಲಿ ಕಾರ್ಯಾಚರಿಸಿದರೆ ಈ ಊರು ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ ಎಂದೇ ಅರ್ಥ ಎಂದು ಅಭಿಪ್ರಾಯಿಸಿದರಲ್ಲದೇ; ಈ ನಿಟ್ಟಿನಲ್ಲಿ ಕೊಯ್ಯೂರು ಗ್ರಾಮವು ಎಲ್ಲ ದೃಷ್ಟಿಯಿಂದಲೂ ಬೆಳೆಯುತ್ತಿದೆ ಎನ್ನುತ್ತಾ ಸಂಘದ ಬೆಳವಣಿಗೆಯ ಮೇಲೂ ಬೆಳಕು ಚೆಲ್ಲಿದರು.ಮಹಾಸಭೆಯಲ್ಲಿ ಸಾಂಪ್ರದಾಯಿಕ ವಿಧಾನದಿಂದ ಅಡಿಕೆ ಮರಗಳಿಗೆ ಬೋರ್ಡೋ ದ್ರಾವಣ ಸಿಂಪಡಿಸುವ 18ಮಂದಿ ಸಿಂಪಡಣಕಾರರನ್ನು ಸಮ್ಮಾನಿಸಲಾಯಿತು. ಸಂಘದ ಉಪಾಧ್ಯಕ್ಷ ಎಂ.ಕೆ. ಸಂಜೀವ, ಆಡಳಿತ ಮಂಡಳಿಯ ಸದಸ್ಯರಾದ ಎನ್. ಪರಮೇಶ್ವರ ಗೌಡ, ಡೀಕಯ್ಯ ಪೂಜಾರಿ, ಪುರುಷೋತ್ತಮ, ರವೀಂದ್ರನಾಥ್ ಪಿ., ಉಜ್ವಲ್ ಕುಮಾರ್, ಹೊನ್ನಪ್ಪ ಪೂಜಾರಿ, ಯತೀಶ್, ಗುಲಾಬಿ, ರೇವತಿ, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಪ್ರತಿನಿಧಿ ಸುದರ್ಶನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಂತಕೃಷ್ಣ ಭಟ್ ಕಾರ್ಯಕ್ರಮ ನಿರೂಪಿಸಿದರು. ಆಡಳಿತ ಮಂಡಳಿಯ ಸದಸ್ಯರಾದ ಪಿ. ರವೀಂದ್ರನಾಥ ಸ್ವಾಗತಿಸಿ, ಉಜ್ವಲ್ ಕುಮಾರ್ ವಂದಿಸಿದರು.







