ಬೆಳ್ತಂಗಡಿ: ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪಾಲಿಟೆಕ್ನಿಕ್ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭವು ಅಕ್ಟೋಬರ್ 8ರಂದು ಕಾಲೇಜಿನ ಸೆಮಿನಾರ್ ಹಾಲ್‌ನಲ್ಲಿ ನಡೆಯಿತು. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಿ. ಹರ್ಷೇಂದ್ರ ಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ; ವಾರ್ಷಿಕೋತ್ಸವ ವಿದ್ಯಾರ್ಥಿಗಳು ಮಾಡಿದ ಸಾಧನೆಯನ್ನು ಗುರುತಿಸುವುದಕ್ಕೆ ಇರುವ ವೇದಿಕೆ. ಈ ಸಾಲಿನ ವಿದ್ಯಾರ್ಥಿಗಳು ಅದ್ಭುತವಾದ ಸಾಧನೆಯನ್ನು ಮಾಡಿ ಕಾಲೇಜಿಗೆ ಹೆಸರು ಹಾಗೂ ಕೀರ್ತಿ ತಂದಿದ್ದಾರೆ. ವಿದ್ಯಾರ್ಥಿಗಳ ಅನುಕೂಲತೆ ದೃಷ್ಟಿಯಿಂದ ಕಾಲೇಜಿಗೆ ಬೇಕಾಗುವ ಅಗತ್ಯ ವ್ಯವಸ್ಥೆಗಳನ್ನು ಆಡಳಿತ ಮಂಡಳಿಯಿಂದ ಕಲ್ಪಿಸಿದ್ದೇವೆ. ಜ್ಞಾನವನ್ನು ಯಾರಿಂದಲೂ ಕದಿಯುವುದಕ್ಕೆ ಸಾಧ್ಯವಿಲ್ಲ. ಮೊಬೈಲ್ ಫೋನ್ ನಲ್ಲಿರುವಂತಹ ಇಂಟೆಲಿಜೆನ್ಸ್ ಕೂಡ ಕೂಡ ನಾವು ಅಳವಡಿಸಿಕೊಳ್ಳಬೇಕು. ಸಾಧನೆ ವೇಳೆ ಮಾನಸಿಕವಾಗಿ ಕುಗ್ಗದೆ ಹಿಗ್ಗದೇ ಮುಂದುವರಿಯಬೇಕು. ಸಾಧಕರನ್ನು ಗುರುತಿಸಿ ಪ್ರೋತ್ಸಾಹಿಸುವ ಮನೋಭಾವ ನಮ್ಮಲ್ಲಿ ಬೆಳೆಯಬೇಕು ಎಂದು ನುಡಿದು ಶುಭ ಹಾರೈಸಿದರು.ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಬೆಂಗಳೂರಿನ ಟ್ಯಾಲೆಂಟ್ರಿ ಇಂಡಿಯಾದ ಸಿಇಒ ಜಗದೀಶ್ ಶೇಖರ್ ನಾಯ್ಕ್ ಮಾತನಾಡಿ; ಒಬ್ಬ ಉದ್ಯೋಗಿ ಉದ್ಯಮವನ್ನು ಪ್ರಾರಂಭ ಮಾಡಬೇಕಾದರೆ ಛಲ, ಬಲ ಹಾಗೂ ದೂರದೃಷ್ಟಿಗಳು ಇರಬೇಕು. ಸತ್ಯತೆ, ಧನ್ಯತಾ ಮನೋಭಾವ, ಕ್ಷಮಾಪಣೆ ಹಾಗೂ ಸಮಾಜಕ್ಕೆ ಕೊಡುಗೆ ಈ ನಾಲ್ಕು ವಿಷಯವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಕೇವಲ ಉದ್ಯೋಗದತ್ತ ಮಾತ್ರ ಚಿಂತಿಸದೆ ಉದ್ಯಮ ಆರಂಭಿಸುವ ದೃಷ್ಟಿಕೋನದೊಂದಿಗೆ ಯುವ ಸಮುದಾಯಕ್ಕೆ ಉತ್ತಮ ಅವಕಾಶ ಸೃಷ್ಟಿಸುವಂತಾಗಬೇಕು ಎಂದು ನುಡಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಸಾಧಕ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಇತ್ತೀಚೆಗೆ ನಡೆದ ಜಿಲ್ಲಾ ಇಂಟರ್ ಪಾಲಿಟೆಕ್ನಿಕ್ ಪುರುಷರ ಮ್ಯಾಟ್ ಕಬಡ್ಡಿ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಪಡೆದ ಕಾಲೇಜಿನ ತಂಡಕ್ಕೆ ಗಣ್ಯರ ಉಪಸ್ಥಿತಿಯಲ್ಲಿ ಪ್ರಶಸ್ತಿಯನ್ನು ವಿತರಿಸಲಾಯಿತು. ವೇದಿಕೆಯಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್. ಉಪಸ್ಥಿತರಿದ್ದರು.ಕಾಲೇಜು ಪ್ರಾಂಶುಪಾಲ ಸಂತೋಷ್ ಅಧ್ಯಕ್ಷತೆ ವಹಿಸಿ ವಾರ್ಷಿಕ ವರದಿ ವಾಚಿಸಿದರು. ಉಪನ್ಯಾಸಕ ಶಂಕರ್ ಭಟ್ ಅತಿಥಿಗಳನ್ನು ಪರಿಚಯಿಸಿದರು. ಸಂಪತ್ ಕುಮಾರ್ ಜೈನ್ ಕಾರ್ಯಕ್ರಮ ನಿರೂಪಿಸಿದರು. ಪ್ರವೀಣ್ ಬಿ.ಜಿ. ಸ್ವಾಗತಿಸಿ, ದೈಹಿಕ ಶಿಕ್ಷಣ ನಿರ್ದೇಶಕ ನಿತಿನ್ ವಂದಿಸಿದರು.







