ಬೆಳ್ತಂಗಡಿ: ಎಪ್ರಿಲ್ ತಿಂಗಳ 15 ಮತ್ತು 16ನೇ ತಾರೀಕಿನಂದು ಮಡಂತ್ಯಾರಿನ ಸೇಕ್ರೆಡ್ ಹಾರ್ಟ್ ಕಾಲೇಜಿನ ಕ್ರೀಡಾಂಗಣದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಅಂತರ್ ಕಾಲೇಜು ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟ ನಡೆಯಲಿದೆ ಎಂದು ಕಾಲೇಜಿನ ಪ್ರಾಂಶುಪಾಲ ಅಲೆಕ್ಸ್ ಐವನ್ ಸಿಕ್ವೇರಾ ತಿಳಿಸಿದರು.ಅವರು ಎಪ್ರಿಲ್ 13ರಂದು ಬೆಳ್ತಂಗಡಿಯ ಪ್ರೆಸ್‌ಕ್ಲಬ್‌ನಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ಪಂದ್ಯಾಟದ ಬಗ್ಗೆ ವಿವರಣೆ ನೀಡುತ್ತಿದ್ದರು. ಪಂದ್ಯಾಟಕ್ಕೆ ಈಗಾಗಲೇ ವಿದ್ಯಾರ್ಥಿಗಳ ವಿಭಾಗದಲ್ಲಿ ಹತ್ತು ತಂಡಗಳು ಮತ್ತು ವಿದ್ಯಾರ್ಥಿನಿಯರ ವಿಭಾಗದಲ್ಲಿ ಹತ್ತು ತಂಡಗಳು ನೋಂದಾವಣೆ ಮಾಡಿಕೊಂಡಿದೆ. ಪಂದ್ಯಾಟದಲ್ಲಿ ಗೆದ್ದ ವಿದ್ಯಾರ್ಥಿಗಳ ತಂಡಕ್ಕೆ ‘ಶ್ರೀ ಎಂ.ಕೆ. ಅನಂತರಾಜ್ ಸ್ಮರಣಾರ್ಥ ಟ್ರೋಫಿ’ ಮತ್ತು ವಿದ್ಯಾರ್ಥಿನಿಯರ ವಿಭಾಗಕ್ಕೆ ‘ಫ್ಯಾಬಿಯನ್ ಬಿ.ಎನ್. ಕುಲಾಸೋ ಸ್ಮರಣಾರ್ಥ ಟ್ರೋಫಿ’ ಯನ್ನು ಪರ್ಯಾಯ ಫಲಕವಾಗಿ ನೀಡಲಾಗುವುದು. ಮತ್ತು ನಮ್ಮ ಕಾಲೇಜಿನಿಂದ ವಿಜೇತ ತಂಡಗಳಿಗೆ ಶಾಶ್ವತ ಫಲಕ ನೀಡಿ ಪುರಸ್ಕರಿಸಲಾಗುವುದು ಎಂದು ವಿವರಿಸಿದ ಅಲೆಕ್ಸ್ ಐವನ್ ಸಿಕ್ವೇರಾ; ವಿದ್ಯಾರ್ಥಿಗಳಲ್ಲಿ ಕ್ರೀಡಾ ಮನೋಭಾವ, ಸಾಂಘಿಕ ಚಟುವಟಿಕೆ ಮತ್ತು ಸ್ಪರ್ಧಾತ್ಮಕ ಮನೋಭಾವವನ್ನು ಉತ್ತೇಜಿಸುವುದು ಈ ಕ್ರೀಡಾಕೂಟದ ಪ್ರಮುಖ ಉದ್ಧೇಶವಾಗಿದೆ ಎಂದರು.ಎಪ್ರಿಲ್ 15ರ ಬೆಳಿಗ್ಗೆ ಗಂಟೆ 10-00ಕ್ಕೆ ಪಂದ್ಯಾಟದ ಉದ್ಘಾಟನಾ ಸಮಾರಂಭ ನಡೆಯಲಿದ್ದು; ನಮ್ಮ ಕಾಲೇಜಿನ ಹಿರಿಯ ವಿದ್ಯಾರ್ಥಿಗಳೂ ಬೆಳ್ತಂಗಡಿಯ ಶಾಸಕರೂ ಆದ ಹರೀಶ್ ಪೂಂಜ ಕ್ರೀಡಾಕೂಟವನ್ನು ಉದ್ಘಾಟಿಸಲಿದ್ದಾರೆ. ಸೇಕ್ರೆಡ್ ಹಾರ್ಟ್ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ವಂದನೀಯ ಸ್ಟ್ಯಾನಿ ಗೋವಿಯಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ದೇರಳಕಟ್ಟೆ ಕೆ.ಎಸ್.ಹೆಗ್ಡೆ ಮೆಡಿಕಲ್ ಅಕಾಡೆಮಿಯ ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ| ಕರುಣಾಕರ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವ ಈ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕರಾಗಿರುವ ಡಾ. ಜೆರಾಲ್ಡ್ ಸಂತೋಷ್ ಡಿ’ಸೋಜಾ ಮತ್ತು ಕ್ರೀಡಾ ಕ್ಷೇತ್ರದ ಗಣ್ಯರು ಗೌರವ ಅತಿಥಿಗಳಾಗಿ ಉಪಸ್ಥಿತರಿರುತ್ತಾರೆ. ಎಪ್ರಿಲ್ 16ರ ಸಂಜೆ ನಡೆಯಲಿರುವ ಕ್ರೀಡಾ ಕೂಟದ ಸಮಾರೋಪ ಸಮಾರಂಭವು ಸೇಕ್ರೆಡ್ ಹಾರ್ಟ್ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ವಂದನೀಯ ಸ್ಟ್ಯಾನಿ ಗೋವಿಯಸ್‌ರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಕಾಲೇಜಿನ ವಿಶ್ರಾಂತ ಪ್ರಾಂಶುಪಾಲರಾದ ಡಾ. ಎಂ.ಎನ್. ಜೋಸೆಫ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಪ್ರಾಂಶುಪಾಲ ಅಲೆಕ್ಸ್ ಐವನ್ ಡಿ’ಸೋಜಾ ಕಾರ್ಯಕ್ರಮದ ವಿವರ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಡಾ. ಪ್ರಕಾಶ್ ಡಿ’ಸೋಜಾ, ಉಪನ್ಯಾಸಕರಾದ ಡಾ. ಈಶ್ವರ ಗೌಡ ಹಾಗೂ ರಾಜೇಶ್ವರಿ ಉಪಸ್ಥಿತರಿದ್ದರು.






