ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಸಂಭ್ರಮದ ವಿಷು ಜಾತ್ರೆ

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಸಂಭ್ರಮದ ವಿಷು ಜಾತ್ರೆ
Facebook
Twitter
LinkedIn
WhatsApp

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ವಾರ್ಷಿಕ ವಿಷು ಜಾತ್ರಾ ಮಹೋತ್ಸವವು ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗಡೆಯವರ ನೇತೃತ್ವದಲ್ಲಿ ಎಪ್ರಿಲ್ 14ರಿಂದ ಮೊದಲ್ಗೊಂಡು ಎಪ್ರಿಲ್ 21ರಂದು ಮಂಗಳವಾರ ಬ್ರಹ್ಮರಥೋತ್ಸವ ಸಂಭ್ರಮದಿಂದ ವಿದ್ಯುಕ್ತವಾಗಿ ನಡೆಯಿತು. ರಾತ್ರಿ ಒಳಾಂಗಣದಲ್ಲಿ ಶ್ರೀ ದೇವರ ಉತ್ಸವ ಮೂರ್ತಿಯ ಸುತ್ತುಬಲಿ ನಡೆದು ದೇವಸ್ಥಾನ ಹಾಗೂ ರಥಕ್ಕೆ ಪ್ರದಕ್ಷಿಣೆ ಬಂದು ರಥಾರೋಹಣ ನಡೆಯಿತು. ಕ್ಷೇತ್ರದ ಸಕಲ ಬಿರುದುಬಾವಲಿಗಳೊಂದಿಗೆ ಆನೆಗಳು, ಬಸವ, ಚೆಂಡೆ ಬಳಗ, ಸ್ಯಾಕ್ಸೋಫೋನ್ ವಾದ್ಯಮೇಳ ವಾದನ ಸಹಿತ ಸಹಸ್ರಾರು ಭಕ್ತಾದಿಗಳು ಗೋವಿಂದಾ ನಾಮಸ್ಮರಣೆಯೊಂದಿಗೆ ಬ್ರಹ್ಮರಥವನ್ನು ಅಣ್ಣಪ್ಪಗುಡಿಯ ಮುಂಭಾಗದವರೆಗೆ ಎಳೆದು ಮತ್ತೆ ಮರಳಿ ಸ್ವಸ್ಥಾನಕ್ಕೆ ಎಳೆದುತಂದರು. ಭಕ್ತರು ರಥಕ್ಕೆ ಬಾಳೆಹಣ್ಣು ಎಸೆದು ಸ್ವಾಮಿಗೆ ಭಕ್ತಿಯಿಂದ ಸಮರ್ಪಿಸಿದರು. ನಂತರ ವಸಂತಮಂಟಪದಲ್ಲಿ ಶ್ರೀ ದೇವರಿಗೆ ವಸಂತಪೂಜೆ, ಅಷ್ಟಾವಧಾನ ಸೇವೆ ನಡೆದು ಬ್ರಹ್ಮರಥೋತ್ಸವ ಸಂಪನ್ನಗೊಂಡಿತು. ಎಪ್ರಿಲ್ 22ರಂದು ಬುಧವಾರ ಸಂಜೆ ಶ್ರೀ ದೇವರು ನೇತ್ರಾವತಿ ನದಿಗೆ ಅವಭೃತ ಸ್ನಾನಕ್ಕೆ ತೆರಳಿ ಮರಳಿ ಬಂದು ದರ್ಶನ ಬಲಿ ನಡೆದು ಧ್ವಜಾವರೋಹಣದೊಂದಿಗೆ ವರ್ಷಾವಧಿ ವಿಷು ಜಾತ್ರಾ ಮಹೋತ್ಸವ ಸಂಭ್ರಮದಿಂದ ಸಂಪನ್ನಗೊಂಡಿತು. ಡಾ. ಹೇಮಾವತಿ ಹೆಗ್ಗಡೆ, ಡಿ. ಸುರೇಂದ್ರ ಕುಮಾರ್,ಡಿ. ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಹೆಗ್ಗಡೆ ಕುಟುಂಬಸ್ಥರು ಮತ್ತು ಊರ ಪರವೂರ ಸಹಸ್ರಾರು ಭಕ್ತಾದಿಗಳು ಹಾಗೂ ಕ್ಷೇತ್ರದ ಸಿಬಂದಿವರ್ಗ ಮಹೋತ್ಸವದಲ್ಲಿ ಭಾಗವಹಿಸಿದ್ದರು.

Latest News

Related Posts