ಅಲ್ಲಿ ತಲವಾರೂ ಇರಲಿಲ್ಲ; ಚಾಕು-ಚೂರಿಯೂ ಇರಲಿಲ್ಲ; ಇದ್ದದ್ದು ಒಂದು ಸ್ಪೇನರ್ ಮಾತ್ರ. ಇಬ್ಬರೂ ಒಂದಷ್ಟು ಮದ್ಯ ಸೇವಿಸಿ ಅಮಲಿನಲ್ಲಿದ್ದರು. ಯಾವುದೋ ಹಳೆಯ ವಿಚಾರ ಕೆದಕಿ ಇಬ್ಬರೊಳಗೆ ನಡೆದ ಮಾತಿನ ಜಗಳ ಕ್ರಮೇಣ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿ, ಓರ್ವ ಕೈಗೆ ಸಿಕ್ಕ ಸ್ಪೇನರೊಂದರಿಂದ ಮತ್ತೊಬ್ಬನ ತಲೆಗೆ ಹೊಡೆದಿದ್ದಾನೆ. ರಕ್ತ ಸೋರಿದೆ. ಸ್ಥಳೀಯರು ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಹೊಡೆದಾತ ಪರಾರಿಯಾಗಿದ್ದಾನೆ. ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಇದು ಮೇ 6ರ ರಾತ್ರಿ ಧರ್ಮಸ್ಥಳದ ನಾರ್ಯದಲ್ಲಿ ನಡೆದ ಘಟನೆಯ ನೈಜ ಚಿತ್ರಣ. ಸ್ಥಳೀಯ ಯುವಕ ಲೋಕೇಶ್ ಪರಿಸರದಲ್ಲಿ ಅಕ್ರಮ ಮದ್ಯ ಮಾರಾಟದಲ್ಲಿ ಪರಿಚಿತ ಹೆಸರು. ಆತನ ಸ್ನೇಹಿತ ಸುರೇಶ್ ಜನಜಾಗೃತಿ ವೇದಿಕೆಯಲ್ಲಿ ಸಕ್ರಿಯನಾದರೂ ಸೋಶಿಯಲ್ ಡ್ರಿಂಕರ್ ಎನ್ನಲಾಗಿದೆ. ಲಾಕ್ ಔಟಿನಿಂದಾಗಿ ಸುಮಾರು 40ದಿನಗಳ ಕಾಲ ಬಂದ್ ಆಗಿದ್ದ ಮದ್ಯದ ಅಂಗಡಿ ಮೇ 5ರಿಂದ ಮತ್ತೆ ತೆರೆದದ್ದೇ, ಇವರೀರ್ವರು ಮದ್ಯ ಕುಡಿದು ಜಗಳವಾಡಲು ಕಾರಣವಾಯಿತು. ಮೇ 6ರ ರಾತ್ರಿ ಕುಡಿತದ ಅಮಲಿನಲ್ಲಿ ಕ್ಷುಲ್ಲಕ ಕಾರಣಗಳಿಗಾಗಿ ಈ ಸ್ನೇಹಿತರ ನಡುವಿನ ಜಗಳ ಸುರೇಶನಿಗೆ ತಲೆಗೆ ಪೆಟ್ಟಾಗುವ ಮೂಲಕ ಮುಕ್ತಾಯ ಕಂಡಿತು. ರಕ್ತ ಕಂಡ ಭಯದಿಂದ ಆರೋಪಿ ಲೋಕೇಶ್ ಪರಾರಿಯಾದರೆ, ಗಾಯಾಳು ಸುರೇಶನನ್ನು ಸ್ಥಳೀಯರು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಅಲ್ಲಿ ತಲೆಗಾದ ಗಾಯಕ್ಕೆ ಹೊಲಿಗೆ ಹಾಕಿ ಸೂಕ್ತ ಚಿಕಿತ್ಸೆ ನೀಡಲಾಗಿದೆ.
ಇಷ್ಟೇ ನಡೆದದ್ದು. ಆದರೆ ಈ ಘಟನೆಯ ಸತ್ಯಾಸತ್ಯತೆಯನ್ನು ವಿಮರ್ಶಿಸದೇ ಮಾಧ್ಯಮಗಳು ‘ನಮ್ಮಲ್ಲೇ ಮೊದಲು’ ಭ್ರಮೆಗೆ ಬಿದ್ದು ವರದಿ ನಡೆಸಲು ಪೈಪೋಟಿ ನಡೆಸಿ ‘ ಧರ್ಮಸ್ಥಳದ ನಾರ್ಯದಲ್ಲಿ ಕುಡಿತದ ಮತ್ತಿನಲ್ಲಿ ತಲವಾರಿನಿಂದ ಹಲ್ಲೆ-ಕೊಲೆಗೆ ಯತ್ನ’ ಎಂದು ಬ್ರೇಕಿಂಗ್ ನ್ಯೂಸ್ ಪ್ರಕಟಿಸಿಯೇ ಬಿಟ್ಟಿತು. ಬೆಳಿಗ್ಗೆ ಸ್ಥಳೀಯರಲ್ಲಿ ಪ್ರಕರಣದ ಬಗ್ಗೆ ವಿಚಾರಿಸಿದಾಗ ‘ಇದು ಕುಡುಕರ ಜಗಳ, ಯಾವ ತಲವಾರೂ ಇಲ್ಲ-ಕೊಲೆ ಯತ್ನವೂ ಇಲ್ಲ’ ಎಂಬ ಸತ್ಯ ವಿಚಾರ ತಿಳಿಯಿತು. ಇದೀಗ ಪ್ರಕರಣ ದಾಖಲಿಸಿಕೊಂಡ ಧರ್ಮಸ್ಥಳ ಪೊಲೀಸರು ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದಾರೆ.







