ಬೆಳ್ತಂಗಡಿ ಬಸ್ ನಿಲ್ದಾಣದಲ್ಲಿ ಅಕ್ಷರಸ್ಥರ ಅನಾಗರಿಕ ವರ್ತನೆ

Facebook
Twitter
LinkedIn
WhatsApp

ಮಾಸ್ಕ್ ಬಗ್ಗೆ ಪರಿಜ್ಞಾನವಿಲ್ಲದೇ-ವೈಯಕ್ತಿಕ ಅಂತರದ ಪರಿವೇ ಇಲ್ಲದೇ ಕಾನೂನಿಗೇ ಸವಾಲಾದರು

ಮೇ 9ರ ರಾತ್ರಿ ಬೆಳ್ತಂಗಡಿ ಬಸ್ ನಿಲ್ದಾಣದಲ್ಲಿ ಜಿಲ್ಲೆಯಲ್ಲಿ ಹೇರಲಾಗಿರುವ 144ಸೆಕ್ಷನ್ನಿಗೇ ಸವಾಲು‌ ಹಾಕುವಂತೆ ಜಮಾಯಿಸಿದ ಅಕ್ಷರಸ್ಥ ಅನಾಗರಿಕರ ಸಮೂಹ. ಕೊರೋನಾ ಸೋಂಕು ಹರಡದಂತೆ ಸರಕಾರ ಸೂಚಿಸಿದ ಮುಂಜಾಗ್ರತಾ ಕ್ರಮಗಳಿಗೆ ಸವಾಲಾಗುವಂತಿದ್ದ ಇವರ ನಡವಳಿಕೆ ಸಭ್ಯ ನಾಗರಿಕರಲ್ಲಿ ಭಯ ಹಾಗೂ ಆತಂಕ ಮೂಡಿಸಿತ್ತು. ಬಹುತೇಕರು ಮಾಸ್ಕ್ ಧರಿಸಿದ್ದರಾದರೂ ಮಾಸ್ಕ್ ಮಾತ್ರ ಮುಖ ಮುಚ್ಚಿಕೊಳ್ಳದೇ ಕುತ್ತಿಗೆಯಲ್ಲಿ ಮಾಲಾಕಾರವಾಗಿತ್ತು. ಇನ್ನು ವೈಯಕ್ತಿಕ ಅಂತರದ ಪರಿವೇ ಇಲ್ಲದೇ; ಪರಸ್ಪರ ಅಪ್ಪಿಕೊಳ್ಳುವ, ಶೇಕ್ ಹ್ಯಾಂಡ್ ಮಾಡಿಕೊಳ್ಳುವ ದೃಶ್ಯ ಈ ಮಂದಿಗೆ ಕೊರೋನಾ ಸೋಂಕಿನ ಬಗ್ಗೆ ಪ್ರಾಥಮಿಕ ಜ್ಞಾನ ಅಥವಾ ಭಯವೂ ಇಲ್ಲವೇ ಎಂಬ ಸಂದೇಹ ಮೂಡಿಸುತ್ತಿತ್ತು. ಇವರೆಲ್ಲಾ ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜಾರ ಕೃಪಾಶ್ರಯದಲ್ಲಿ ಬೆಳ್ತಂಗಡಿಯಿಂದ ಬೆಂಗಳೂರಿಗೆ ಕೆ.ಎಸ್.ಆರ್.ಟಿ.ಸಿ. ಬಸ್ಸಿನಲ್ಲಿ ಧರ್ಮಾರ್ಥವಾಗಿ ಪ್ರಯಾಣಿಸಲು ಸಿದ್ಧವಾಗಿ ಬಂದ ಬೆಂಗಳೂರಿನ ವಿವಿಧ ಕಂಪೆನಿಗಳಲ್ಲಿ ಉದ್ಯೋಗದಲ್ಲಿರುವ ಸಾಕಷ್ಟು ಸಂಬಳ ಪಡೆಯುವ ಸ್ಥಿತಿವಂತ ಬಡವರು.


ಧರ್ಮಾರ್ಥವಾದರೆ ನನಗೊಂದಿರಲಿ, ನಮ್ಮ ಅಪ್ಪನಿಗೊಂದಿರಲಿ ಎಂಬ ಸಿದ್ಧಾಂತ ಹೊಂದಿದಂತಿರುವ ಈ ಬಹುತೇಕ ಸ್ಥಿತಿವಂತ ಬಡವರು ಯಾವಾಗ ದೇಶದಲ್ಲಿ ಕೊರೋನಾ ಸೋಂಕಿನ ಹರಡುವಿಕೆಯ ತಡೆಗಾಗಿ ಲಾಕ್ ಡೌನ್ ಆಯಿತೋ, ಆಗ ರಾತೋರಾತ್ರಿ ಬೆಂಗಳೂರಿಂದ ಬೆಳ್ತಂಗಡಿಗೆ ಬಸ್ ಹಾಗೂ ಇತರ ವಾಹನಗಳಲ್ಲಿ ದುಪ್ಪಟ್ಟಿಗಿಂತಲೂ ಅಧಿಕ ಹಣ ತೆತ್ತು ಬಂದ ಸ್ಥಿತಿವಂತ ಬಡವರು. ಇದೀಗ ಸರಕಾರ ಲಾಕ್ ಡೌನ್ ನಿಯಮ ಸಡಿಲಿಸಿದಾಗ ಸುಮಾರು 45ದಿನಗಳ ಬಳಿಕ ಮತ್ತೆ ಉದ್ಯೋಗಾರ್ಥ ಬೆಂಗಳೂರಿನತ್ತ ಮುಖ ಮಾಡಿದವರು. ಈ ಸ್ಥಿತಿವಂತ ಬಡವರಿಗೆ ಶಾಸಕ ಹರೀಶ್ ಪೂಂಜಾ ತಾನು ಹಣ ಪಾವತಿಸಿ, ಯಾಕಾಗಿ ಉಚಿತ ಪ್ರಯಾಣಕ್ಕೆ ವ್ಯವಸ್ಥೆ ಕಲ್ಪಿಸಿದರು ಎಂಬುವುದಕ್ಕೆ ಅವರೇ ಉತ್ತರಿಸಬೇಕು. ಇವರ ಪಯಣಕ್ಕೆ ವ್ಯವಸ್ಥೆ ಕಲ್ಪಿಸಬೇಕಾದ್ದು ಸರಕಾರದ ಜವಾಬ್ದಾರಿ. ಕೊರೋನಾ ಸೋಂಕು ಹರಡುವಿಕೆ ತಡೆಯಲು ಸರಕಾರ ರೂಪಿಸಿದ ಎಲ್ಲ ನಿಯಮಗಳ ಪಾಲನೆಯಾದ ಬಳಿಕ ಇವರಿಗೆ ಸರಕಾರಿ ಬಸ್ಸಿನಲ್ಲಿ ಟಿಕೇಟ್ ದರ ಪಾವತಿಸಿ, ಪಯಣಿಸಲು ಅವಕಾಶ ಕಲ್ಪಿಸಬೇಕಿತ್ತು. ಅದು ಕೂಡಾ ತಾಲೂಕಿನ ವಿವಿಧ ಆಯ್ದ ಕೇಂದ್ರಗಳಿಂದ ಬಸ್ಸಿನ ವ್ಯವಸ್ಥೆ ಮಾಡಬೇಕಾಗಿತ್ತು. ಉದಾಹರಣೆಗೆ ವೇಣೂರು, ಧರ್ಮಸ್ಥಳ, ಉಜಿರೆ, ಮಡಂತ್ಯಾರು, ನಾರಾವಿ…ಹೀಗೆ.
ಆದರೆ ಇವರೆಲ್ಲರನ್ನೂ ಬೆಳ್ತಂಗಡಿ ತಾಲೂಕು ಕೇಂದ್ರಕ್ಕೆ ಕರೆಯಿಸಿ, ಉಚಿತ ಪಯಣದ ವ್ಯವಸ್ಥೆ ಹೆಸರಲ್ಲಿ ಕಿರುಜಾತ್ರೆ ನಡೆಸಿ, ಕೊರೋನಾ ಸೋಂಕಿನ ವಿರುದ್ಧದ ಎಲ್ಲ ಮುಂಜಾಗ್ರತಾ ಕ್ರಮಗಳಿಗೆ ಎಳ್ಳುನೀರು ಬಿಟ್ಟದ್ದು‌ ಮಾತ್ರ ತಾಲೂಕಿನಲ್ಲಿ ಕಾನೂನಿಗೆ ಗೌರವ ನೀಡಿ, ಕೊರೋನಾ ಸೋಂಕು ಹರಡದಂತೆ ವಹಿಸಬೇಕಾದ ಮುಂಜಾಗ್ರತೆಯಲ್ಲಿ ಸರಕಾರ ಹೇಳಿದ ನಿಯಮಗಳನ್ನು‌ ಪ್ರಾಮಾಣಿಕವಾಗಿ ಪಾಲಿಸಿದ 95%ನಾಗರಿಕರಿಗೆ ಆತಂಕ ಹುಟ್ಟಿಸಿದೆ.
ಬೆಂಗಳೂರಿಗೆ ಹೊರಟ ಈ ಅಕ್ಷರಸ್ಥ ಅನಾಗರಿಕರನ್ನು ಬಸ್ ಏರುವ ಮುನ್ನ ಥರ್ಮಲ್ ಟೆಸ್ಟಿಗೆ ಒಳಪಡಿಸಲೂ ಹರಸಾಹಸ ಪಟ್ಟ ತಾಲೂಕು ಆಡಳಿತ ತಹಶೀಲ್ದಾರ್ ಗಣಪತಿ ಶಾಸ್ತ್ರಿಯವರ ನೇತೃತ್ವದಲ್ಲಿ ನಿಯಮ ಪಾಲಿಸುವಂತೆ ವಿನಂತಿಸಯತ್ತಲೇ ಇತ್ತು. ಶಾಸಕ ಹರೀಶ್ ಪೂಂಜಾರೇ ಜೊತೆಗಿರುವಾಗ 144ಸೆಕ್ಷನ್ ನಮಗೆ ಲಗಾವಿಲ್ಲ ಎಂಬಂತೆ ವರ್ತಿಸುತ್ತಿದ್ದ ಅನೇಕರು ಗುಂಪಾಗಿ ಸೇರಿ ತಮ್ಮ ಲಾಕ್ ಡೌನ್ ದಿನಗಳ ದಿನಚರಿಯನ್ನು ಹಂಚಿಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಅದೂ ಮಾಸ್ಕನ್ನು‌ ಕುತ್ತಿಗೆಗೆ ಮಾಲಾಕಾರವಾಗಿ ಹಾಕಿ, ವೈಯಕ್ತಿಕ ಅಂತರ ಮರೆತು. ಕಾನೂನು ಹಾಗೂ ನಿಯಮ‌ ಮರೆತು ವರ್ತಿಸುತ್ತಿದ್ದ ಬೆಂಗಳೂರಿನ ಉದ್ಯೋಗಸ್ಥ ಈ ಅಕ್ಷರಸ್ಥ ಅನಾಗರಿಕರ ಗುಂಪಿನ ವಿರುದ್ಧ ಕಾನೂನು ಕ್ರಮ ಜರಗಿಸಲಾಗದ ಒತ್ತಡಕ್ಕೆ ಸಿಲುಕಿದ್ದ ತಾಲೂಕು ಆಡಳಿತ ಎಲ್ಲದರ ಮೌನ ಪ್ರೇಕ್ಷಕವಾದದ್ದು ಮಾತ್ರ ದುರಂತ.

Latest News

Related Posts