ರಕ್ಷಣೆಗೆ ಧಾವಿಸಿದ ಕಾಂಗ್ರೇಸಿಗರಿಂದ ಧರಣಿ
ಮೇ 10ರ ರಾತ್ರಿ ಬೆಳ್ತಂಗಡಿಯ ಪಟ್ಟಣ ಪಂಚಾಯತು ಅಧಿಕಾರಿಗಳು ತಮ್ಮ ಸಿಬ್ಬಂದಿಗಳನ್ನು ಬಳಸಿ, ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಹೆದ್ದಾರಿ ಬದಿಯಲ್ಲಿರುವ ಬೀದಿಬದಿಯ ಹಣ್ಣು-ತರಕಾರಿ ವ್ಯಾಪಾರಿಗಳ ತಾತ್ಕಾಲಿಕ ಶೆಡ್ ಗಳನ್ನು ಕೆಡವಿ, ಬೀದಿಬದಿಯ ವ್ಯಾಪಾರಿಗಳನ್ನು ಬೀದಿಪಾಲು ಮಾಡಿದ್ದಾರೆ ಎಂದು ಆರೋಪಿಸಿರುವ ಬೆಳ್ತಂಗಡಿ ತಾಲೂಕು ಕಾಂಗ್ರೇಸ್ ನಾಯಕರು ಪಕ್ಷದ ಕಾರ್ಯಕರ್ತರು ಹಾಗೂ ಬೆಳ್ತಂಗಡಿಯ ಬೀದಿಬದಿ ವ್ಯಾಪಾರಸ್ಥರೊಂದಿಗೆ ಸೇರಿ ಮೇ 11ರಂದು ಬೆಳ್ತಂಗಡಿ ಪಟ್ಟಣ ಪಂಚಾಯತ್ ಎದುರು ಧರಣಿ ನಡೆಸಿದರು.
ವಿಧಾನ ಪರಿಷತ್ ಶಾಸಕ ಹರೀಶ್ ಕುಮಾರ್, ಮಾಜಿ ಶಾಸಕ ವಸಂತ ಬಂಗೇರ, ನಗರ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಕುರ್ತೋಡಿ ಶೈಲೇಶ್ ಕುಮಾರ್, ಗ್ರಾಮೀಣ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ರಂಜನ್ ಜಿ. ಗೌಡ, ಪಕ್ಷ ಪ್ರಮುಖರಾದ ರಾಮಚಂದ್ರ ಗೌಡ, ವಸಂತ ಬಿ. ಕೆ., ಚಂದು ಎಲ್., ಅಭಿನಂದನ್ ಹರೀಶ್ ಕುಮಾರ್, ಶಂಕರ ಹೆಗ್ಡೆ, ಅಶ್ರಫ್ ನೆರಿಯ, ಪಟ್ಟಣ ಪಂಚಾಯತ್ ಸದಸ್ಯರಾದ ಜಗದೀಶ್ ಡಿ., ಜನಾರ್ದನ, ಮುಸ್ತರ್ ಜಾನ್ ಮೆಹಬೂಬ್ ಹಾಗೂ ಪಕ್ಷದ ಕಾರ್ಯಕರ್ತರು ಮತ್ತು ನೆಲೆ ಕಳೆದುಕೊಂಡ ಬೀದಿಬದಿಯ ವ್ಯಾಪಾರಸ್ಥರು ಧರಣಿಯಲ್ಲಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಡಿ. ಸುಧಾಕರರೊಂದಿಗೆ ಧರಣಿನಿರತ ಸ್ಥಳದಲ್ಲೇ ಮಾತುಕತೆ ನಡೆಸಿದ ವಿಧಾನ ಪರಿಷತ್ ಶಾಸಕ ಹರೀಶ್ ಕುಮಾರ್ ಹಾಗೂ ಮಾಜಿ ಶಾಸಕ ವಸಂತ ಬಂಗೇರ, ಕೊರೋನಾ ಸೋಂಕಿನ ಭೀತಿಯ ಸಂದರ್ಭದಲ್ಲಿ ಜನತೆ ಜೀವನ ಸಾಗಿಸಲು ಸಂಕಷ್ಟ ಪಡುತ್ತಿರುವಾಗ ಬೀದಿಬದಿಯ ಬಡ ವ್ಯಾಪಾರಿಗಳನ್ನು ಬೀದಿಪಾಲು ಮಾಡಿದ ಪಟ್ಟಣ ಪಂಚಾಯತಿನ ಕೃತ್ಯವನ್ನು ಖಂಡಿಸಿದರಲ್ಲದೇ, ಈ ಎಲ್ಲ ವ್ಯಾಪಾರಿಗಳಿಗೆ ಈ ಹಿಂದಿನಂತೆಯೇ ವ್ಯಾಪಾರ ನಡೆಸಲು ಮಾನವೀಯ ನೆಲೆಯಲ್ಲಿ ಅವಕಾಶ ಕಲ್ಪಿಸಬೇಕೆಂದು ಆಗ್ರಹಿಸಿದರು. ಬಳಿಕ ಪ್ರತೀದಿನ ಸಂಜೆಯಾಗುತ್ತಲೇ ಅಂದಿನ ವ್ಯಾಪಾರ ಮುಗಿದ ತಕ್ಷಣ ವ್ಯಾಪಾರ ಸ್ಥಳವನ್ನು ತೆರವುಗೊಳಿಸಬೇಕು ಎಂಬ ನಿಬಂದನೆಯೊಂದಿಗೆ ಬೀದಿಬದಿ ವ್ಯಾಪಾರ ನಡೆಸಲು ಅವಕಾಶ ನೀಡಲು ಮುಖ್ಯಾಧಿಕಾರಿ ಸುಧಾಕರ್ ಸಹಮತ ವ್ಯಕ್ತಪಡಿಸಿದರು. ಲಾಕ್ ಡೌನ್ ಸಂಕಟ ಹಾಗೂ ಕೊರೋನಾ ಭೀತಿ ತೊಲಗಿದ ಬಳಿಕ ಕಾನೂನುಬದ್ಧವಾಗಿ ತಳ್ಳುವ ಗಾಡಿಯಲ್ಲಿ ಪಟ್ಟಣ ಪಂಚಾಯತಿನಿಂದ ಪರವಾನಿಗೆ ಪಡೆದು ವ್ಯಾಪಾರ ನಡೆಸಬೇಕು ಎಂದು ತೀರ್ಮಾನಿಸಲಾಯಿತು.







