ಪ್ರಧಾನಿ ಮೋದಿಯ 20ಲಕ್ಷ ಕೋಟಿ ಪ್ಯಾಕೇಜ್ ವರ್ಷದ ದೊಡ್ಡ ನಾಟಕ-ಹರೀಶ್ ಕುಮಾರ್

Facebook
Twitter
LinkedIn
WhatsApp

ಬೆಳ್ತಂಗಡಿ : ‘ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿರುವ 20 ಲಕ್ಷ ಕೋಟಿ ಪ್ಯಾಕೇಜ್ ಈ ವರ್ಷದ ದೊಡ್ಡ ನಾಟಕ ವಾಗಿದೆ. ಅದೊಂದು ವೇಳೆ ಜನರಿಗೆ ನಿಜವಾಗಿಯೂ ಸಿಕ್ಕಿದ್ದೇ ಆದರೆ ಅದು ದೇಶದ ಪ್ರಜೆಗಳ ದೊಡ್ಡ ಭಾಗ್ಯ’ ಎಂದು ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಹೇಳಿದರು.
ಅವರು ಮೇ 13ರಂದು ಬೆಳ್ತಂಗಡಿ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘135 ಕೋಟಿ ಜನಸಂಖ್ಯೆಯಲ್ಲಿ 50% ಶ್ರಮಿಕ ವರ್ಗ ಮತ್ತು ಬಡವರಿರಬಹುದು. ಈ 20 ಲಕ್ಷ ಕೋಟಿಯನ್ನು ನಿಜವಾಗಿಯೂ ಅವರಿಗೆ ಹಂಚಿದ್ದೇ ಆದರೆ ಅದು ದೊಡ್ಡ ಮೊತ್ತವೇ ಆಗಬಹುದು. ಈ ಹಿಂದೆ ಚುನಾವಣಾ ಸಂದರ್ಭ ಪ್ರತಿಯೊಬ್ಬರ ಖಾತೆಗೆ 15 ಲಕ್ಷ ಘೋಷಣೆ ಚುನಾವಣಾ ಆಮಿಷದಂತೆ ಇದೂ ಕೂಡಾ ಕೊರೊನಾ ಆಮಿಷವಾಗದೇ ಇರಲಿ’ ಎಂದರು.
ಜಿಎಸ್‍ಟಿ ಮತ್ತು 15 ಪೈನಾನ್ಸ್ ಕಮಿಷನ್ ಇದರ ಬಾಕಿ ಹಣ ರೂ.11,215 ಕೋಟಿ ಕೇಂದ್ರದಿಂದ ರಾಜ್ಯ ಸರ್ಕಾರಕ್ಕೆ ಬರಬೇಕಾಗಿದೆ. ರಾಜ್ಯಕ್ಕೆ ಘೋಷಣೆ ಮಾಡಿರುವ 1815 ಕೋಟಿ ನೆರೆ ಪರಿಹಾರ ಇನ್ನೂ ಸರಿಯಾಗಿ ರಾಜ್ಯಕ್ಕೆ ಬಂದಿಲ್ಲ. ನರೇಗಾದ ಹಣವೂ ಬಂದಿಲ್ಲ. ರಾಜ್ಯಕ್ಕೆ ಬರಬೇಕಾದ ಬಾಕಿಯನ್ನೇ ಕೇಂದ್ರಕ್ಕೆ ಇನ್ನೂ ಕೊಡಲಿಕ್ಕೆ ಆಗದವರು ಇನ್ನು 20 ಲಕ್ಷ ಕೋಟಿಯಲ್ಲಿ ಈ ರಾಜ್ಯಕ್ಕೆ ಎಷ್ಟು ಕೊಟ್ಟಾರು ಎಂದು ಪ್ರಶ್ನಿಸಿದರು.
ಇಪ್ಪತ್ತೈದುವರೆ ಸಂಸದರು ಬಿಜೆಪಿ ಯಿಂದ ರಾಜ್ಯದಲ್ಲಿ ಆಯ್ಕೆಯಾಗಿದ್ದರೂ ಯಾವೊಬ್ಬ ಸಂಸದನಿಗೂ ರಾಜ್ಯದ ಕುರಿತಾಗಿ ಪ್ರಧಾನಿ ಬಳಿಗೆ ಹೋಗಿ ಮಾತನಾಡಲು ಧೈರ್ಯವಿಲ್ಲ. ಕೊರೊನಾದಿಂದಾಗಿ ದೇಶದ ಶ್ರಮಿಕ ವರ್ಗ ಸಂಕಷ್ಟದಲ್ಲಿದ್ದಾರೆ. ಕೊರೊನಾ ಸಂದರ್ಭದಲ್ಲಿ ರೈತರಿಗೆ ಇನ್ನಷ್ಟು ನೆರವು ನೀಡಬೇಕಾಗಿದೆ. ಆದರೆ ರೈತರಿಗೆ ರಸಗೊಬ್ಬರಕ್ಕೆ ನೀಡುತ್ತಿದ್ದ ಸಬ್ಸಿಡಿಯನ್ನು 22186 ಕೋಟಿ ಕಡಿತ ಮಾಡಿದ್ದಾರೆ. ರೈತರಿಗೆ ಸರಿಯಾದ ಬಿತ್ತನೇ ಬೀಜವೂ ಸಿಗುತ್ತಿಲ್ಲ. ಅವರಿಗೆ ವಿಶೇಷ ಪ್ಯಾಕೇಜ್ ನೀಡುವ ಬದಲು ಸಬ್ಸಿಡಿಯನ್ನೇ ಕಸಿದುಕೊಂಡಿದೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಏಕಾಏಕಿಯಾಗಿ ರೈತರಿಗೆ ಮಾರಕವಾದ ಎಪಿಎಂಸಿ ನೀತಿಯನ್ನು ಸುಗ್ರಿವಾಜ್ಞೆಯ ಮೂಲಕ ಸರ್ಕಾರ ತಂದಿದೆ. ಅಧಿವೇಶನ ಸಂದರ್ಭ ಅಲ್ಲಿ ಚರ್ಚಿಸಿ ರೈತರಿಗೆ ಅನುಕೂಲವಾಗುವ ನೀತಿಯನ್ನು ತರಬೇಕು. ಬಂಡವಾಳ ಶಾಹಿಗಳಿಗೆ, ದೊಡ್ಡ ವರ್ತಕರಿಗೆ ಪ್ರಯೋಜನ ಮಾಡುವ ನಿಟ್ಟಿನಲ್ಲಿ ಸರ್ಕಾರ ತೊಡಗಿರುವುದು ಸ್ಪಷ್ಟವಾಗಿದೆ ಎಂದರು.
ಕೇಂದ್ರ ಸರ್ಕಾರ ಕೊರೊನಾ ನಿಯಂತ್ರಣದಲ್ಲಿ ಸಂಪೂರ್ಣ ವಿಫಲವಾಗಿದೆ.. ಇಂದು ಪ್ರಧಾನಿ ಹೇಳುತ್ತಿದ್ದಾರೆ ಕೊರೊನಾ ನಮ್ಮನ್ನು ಬಿಟ್ಟು ಹೋಗುವುದಿಲ್ಲ; ನಾವು ಕೊರೊನಾದೊಂದಿಗೆ ಜೀವನ ಮಾಡಲು ಅಭ್ಯಾಸ ಮಾಡಬೇಕು ಎಂದು. ಇವತ್ತು ಕೊರೋನಾ ದೇಶದಲ್ಲಿ ಸ್ವಲ್ಪ ಮಟ್ಟಿಗಾದರೂ ನಿಯಂತ್ರಣದಲ್ಲಿದ್ದರೆ ಅದಕ್ಕೆ ಕಾರಣ ಎಲ್ಲಾ ರಾಜ್ಯದ ಮುಖ್ಯಮಂತ್ರಿಗಳು, ಆಡಳಿತ ವರ್ಗ ಮತ್ತು ಆರೋಗ್ಯ ಸಿಬ್ಬಂದಿಗಳಾಗಿದ್ದಾರೆ. ದೇಶದಲ್ಲಿ ಕೊರೊನಾ ಬೆಳೆಯಲು ಕಾರಣ ಫೆ.24ರಂದು ನಡೆದ ನಮಸ್ತೆ ಟ್ರಂಪ್ ಕಾರ್ಯಕ್ರಮ. ಅದಕ್ಕಿಂತ ಹಿಂದೆಯೇ ದೇಶಕ್ಕೆ ಕೊರೊನಾ ಪ್ರವೇಶವಾಗಿತ್ತು. ಆ ಕಾರ್ಯಕ್ರಮದಲ್ಲಿ ವಿದೇಶದಿಂದ ಬಂದ ಸುಮಾರು 20 ಸಾವಿರ ಮಂದಿ ಭಾಗವಹಿಸಿದ್ದರು. ನಮಸ್ತೆ ಟ್ರಂಪ್ ಕಾರ್ಯಕ್ರಮವಾದ ಅಹ್ಮದಾಬಾದ್ ನಗರದಲ್ಲಿರುವಷ್ಟು ಕೊರೊನಾ ದೇಶದ ಬೇರೆ ಎಲ್ಲಿಯೂ ಇಲ್ಲವಾಗಿದೆ. ಆ ಕಾರ್ಯಕ್ರಮವೇ ದೇಶವ್ಯಾಪಿ ಕೊರೊನಾ ಹಬ್ಬಲು ಕಾರಣವಾಗಿದೆ. ತಬ್ಲಿಘಿ ಕಾರ್ಯಕ್ರಮ ದಿಂದಲೂ ಕೊರೋನಾ ಹಬ್ಬಿದೆ. ಅದಕ್ಕೆ ಅನುಮತಿ ಕೊಟ್ಟವರು ಕೇಂದ್ರ ಸರ್ಕಾರವೇ ಆಗಿದೆ. ಐಪಿಎಲ್ ರದ್ದು ಮಾಡಿದ ಹಾಗೆ ಕೇಂದ್ರ ಸರ್ಕಾರಕ್ಕೆ ಆ ಕಾರ್ಯಕ್ರಮ ಕೂಡ ರದ್ದು ಮಾಡಬಹುದಿತ್ತು. ಸತ್ಯ ವಿಚಾರ ಮರೆಮಾಚಿ ಜನರ ಭಾವನೆ ಕೆರಳಿಸುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ. ಇದಕ್ಕೆ ಡಬ್ಲೂಹೆಚ್‍ಒ ಪ್ರವೇಶ ಮಾಡಿ ಸರಿಯಾದ ತನಿಖೆ ಮಾಡಬೇಕು ಎಂದು ಆಗ್ರಹಿಸಿದರು.
ಪಿಪಿಇ ಕಿಟ್ ಆಮದಿನಲ್ಲೂ ದೊಡ್ಡ ಭ್ರಷ್ಟಾಚಾರ ಆಗಿದೆ. ಸುಮಾರು 3 ಲಕ್ಷ ಕಿಟ್ ಕಳಪೆಯಾಗಿದ್ದು ಅದಕ್ಕೆ 22 ಕೋಟಿ ಪಾವತಿ ಮಾಡಿದ್ದಾರೆ. ಕರ್ನಾಟಕ ರಾಜ್ಯದಲ್ಲೂ ಕೊರೊನಾಕ್ಕೆ ಬಳಸುವ ಅಕ್ಕಿಯನ್ನು ಬೇರೆ ಬೇರೆ ರಾಜ್ಯಗಳಿಗೆ ಹೆಚ್ಚು ಬೆಲೆಗೆ ಮಾರಿ ಭ್ರಷ್ಟಾಚಾರ ಮಾಡಿದ್ದಾರೆ. ಬಿಜೆಪಿ ಎಂಎಲ್‍ಎ ಗಳು ಪಾರ್ಟಿಯ ಲೇಬಲ್ ಹಾಕಿ ಕೊಡುವ ಕೆಲಸವನ್ನು ಮಾಡಿದ್ದಾರೆ. ಇಂತಹ ನೀಚ ಸರ್ಕಾರ ರಾಜ್ಯದಲ್ಲಿ ಇದುವರೆಗೆ ಬಂದಿಲ್ಲ. ಜನರ ಸೇವೆ ಮಾಡಬೇಕಾದ ಮಂತ್ರಿಗಳು, ಶಾಸಕರು ಈ ಕೊರೊನಾ ಸಂದರ್ಭ ನೀತಿಗೆಟ್ಟ ರಾಜಕೀಯ ಮಾಡುತ್ತಿದ್ದಾರೆ. ಹಿಂದೂ ಹಿಂದೂ ಎಂದು ಹೇಳುವ ಬಿಜೆಪಿಗರು ಹಿಂದೂ ಹೆಣ್ಣು ಮಗಳು ಕೊರೊನಾದಿಂದ ಸತ್ತಾಗ ಅವಳ ಶವ ಸಂಸ್ಕಾರಕ್ಕೆ ಅವಕಾಶ ಮಾಡಿಕೊಡುವುದಿಲ್ಲ. ಇದು ಬಿಜೆಪಿಗರ ನಕಲಿ ಹಿಂದತ್ವವಾಗಿದೆ ಎಂದರು.
ರಾಜ್ಯದಲ್ಲಿ ಗ್ರಾಮ ಪಂಚಾಯಿತಿಯ ಅವಧಿ ಮುಗಿದ ಮೇಲೆ ಬಿಜೆಪಿ ಕಾರ್ಯಕರ್ತರನ್ನು ಸಲಹಾ ಸಮಿತಿಯಾಗಿ ನೇಮಿಸುವ ಹುನ್ನಾರ ನಡೆಯುತ್ತಿದೆ. ಇದನ್ನು ಕಾಂಗ್ರೆಸ್ ವಿರೋಧಿಸುತ್ತಿದ್ದು ಇರುವ ಅಧಿಕಾರವನ್ನೇ 6 ತಿಂಗಳ ಕಾಲ ಮುಂದುವರಿಸಬೇಕು, ಇಲ್ಲವೇ ಆಡಳಿತ ಅಧಿಕಾರಿಯನ್ನು ನೇಮಿಸಬೇಕು ಎಂದರು. ತಾಲೂಕಿನಲ್ಲಿ ಮರಳು ದಂಧೆ ವ್ಯಾಪಕವಾಗಿದೆ. ಆಡಳಿತದ ಕೃಪೆಯಿಂದ ಇದು ನಡೆಯುತ್ತಿದೆ. ನೋಡುವಾಗ ಸಂಭಾವಿತರು, ಆದರೆ ಮಾಡುವುದೆಲ್ಲ ಜನವಿರೋಧಿ ಕಾರ್ಯಗಳಾಗಿವೆ. 357 ಕೋಟಿ ಅನುದಾನದ ಬ್ಯಾನರ್‍ಗಳು ಇನ್ನೂ ರಾರಾಜಿಸುತ್ತಿದ್ದಾವೆ. ಯಾವ ಅಧಿಕಾರಿಗಳು ಅದನ್ನು ತೆರವು ಗೊಳಿಸುತ್ತಿಲ್ಲ. ಹಣ್ಣು ಹಂಪಲು ಮಾರುವವರನ್ನು ಪ್ಯಾಕಪ್ ಮಾಡುತ್ತಿದ್ದಾರೆ ಎಂದರು.
ನಾವು ಪ್ರತಿಯೊಬ್ಬರೂ ಸ್ವದೇಶಿಗಳಾಗಬೇಕು. ಮುಖ್ಯವಾಗಿ ಚೈನಾ ಉತ್ಪನ್ನಗಳನ್ನು ಜನ ಬಹಿಷ್ಕರಿಸಬೇಕು ಎಂದು ಕರೆ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷ ರಂಜನ್ ಜಿ ಗೌಡ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಉಷಾ ಶರತ್, ತಣ್ಣೀರುಪಂತ ಗ್ರಾಮ ಪಂಚಾಯಿತಿ ಅಧ್ಯಕ್ಷ ಜಯವಿಕ್ರಮ್ , ನಗರ ಪಂಚಾಯಿತಿ ಸದಸ್ಯ ಜಗದೀಶ್ ಡಿ, ಮನೋಹರ್ ಇಳಂತಿಲ ಉಪಸ್ಥಿತರಿದ್ದರು.

Latest News

Related Posts