ಬಿಗ್ ಬಿಗ್ ಬ್ರೇಕಿಂಗ್ ನ್ಯೂಸ್

Facebook
Twitter
LinkedIn
WhatsApp

ಬಂದಾರು ವ್ಯಾಪ್ತಿಯಲ್ಲಿ ಮಂಗಗಳ ಅಸಹಜ ಸಾವು ; ಮಂಗನ ಕಾಯಿಲೆ ಭೀತಿಯಲ್ಲಿ ಸ್ಥಳೀಯರು

ಬೆಳ್ತಂಗಡಿ: ಕೋವಿಡ್ ಆತಂಕದ ನಡುವೆಯೇ ಬೆಳ್ತಂಗಡಿ ತಾಲೂಕಿನ ಬಂದಾರು ಗ್ರಾ.ಪಂ. ವ್ಯಾಪ್ತಿಯಲ್ಲಿ ಕೋತಿಗಳ ಅಸಹಜ ಸಾವು ನಡೆದಿರುವ ವಿಚಾರ ಮೇ 15ರಂದು ಬೆಳಕಿಗೆ ಬಂದಿದೆ.


ಬಂದಾರು ಗ್ರಾಮದ ಕುಂಟಾಲಪಲ್ಕೆ- ಪದ್ಮುಂಜ ರಸ್ತೆಯಾಗಿ ಸಾಗುವ ಮಾರ್ಗ ಸಮೀಪ ಸುಮಾರು 50 ಕ್ಕೂ ಅಧಿಕ ಮಂಗಗಳ ಮೃತದೇಹ ಪತ್ತೆಯಾಗಿದೆ.
ಮೇ 14ರ ರಾತ್ರಿ 8.30 ಕ್ಕೆ ಮಂಗಗಳು ಸತ್ತು ಬಿದ್ದಿರುವುದನ್ನು ಸ್ಥಳೀಯರು ಕಂಡಿದ್ದು ಸಂಬಂಧ ಪಟ್ಟ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಕಣಿಯೂರು ಆರೋಗ್ಯ ಕೇಂದ್ರದ ಆರೋಗ್ಯ ಸಹಾಯಕ ಸ್ವತಂತ್ರ ರಾವ್ ಹಾಗೂ ಉಜಿರೆ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ, ಸಿಬಂದಿ, ಅರಣ್ಯ ಇಲಾಖೆ, ಪಶುವೈದ್ಯಕೀಯ ಅಧಿಕಾರಿಗಳು, ಸ್ಥಳೀಯ ಪಂಚಾಯತ್ ಅಧಿಕಾರಿಗಳು ಭೇಟಿ ನೀಡಿದ್ದಾರೆ.
ಮಂಗಗಳ ತಲೆಗೆ ಗಾಯವಾದಂತಿದ್ದು, ಮೇಲ್ನೋಟಕ್ಕೆ ವಿಷ ಪದಾರ್ಥ ನೀಡಿ ಸಾಯಿಸಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ. ಆದರೂ ಮಂಗಗಳ ಸಾವಿನ ಕಾರಣದ ಬಗ್ಗೆ ಖಚಿತತೆ ಇಲ್ಲ.
ಮೇ 14ರಂದು 50ಕ್ಕೂ ಅಧಿಕ ಮಂಗಗಳು ಸತ್ತು ಬಿದ್ದ ಸ್ಥಿತಿಯಲ್ಲಿದ್ದು, ಇಂದು ಮೇ 15ರಂದು ಮತ್ತೆ 15 ಮಂಗಗಳ ಮೃತದೇಹ ಪತ್ತೆ ಯಾಗಿರುವುದು ಮತ್ತಷ್ಟು ಅನುಮಾನಕ್ಕೆ ಹಾಗೂ ಆತಂಕಕ್ಕೆ ಎಡೆಮಾಡಿದೆ.
ಮೃತದೇಹದ ಮಾದರಿಯನ್ನು ಮಂಗಳೂರು ಪಶುವೈದ್ಯಕೀಯ ಆಸ್ಪತ್ರೆಗೆ ರವಾನಿಸಲಾಗಿದೆ. ಮಲೆನಾಡು ಪ್ರದೇಶದಲ್ಲಿ ಮಂಗನ‌ ಕಾಯಿಲೆಯ ಭೀತಿಯಿರುವ ಇಂದಿನ‌ ದಿನಗಳಲ್ಲಿ 80ರ ದಶಕದಲ್ಲಿ ಮಂಗನ ಕಾಯಿಲೆ ಕಂಡ ಬೆಳ್ತಂಗಡಿ ತಾಲೂಕಿನ‌ ಬಂದಾರು ಪರಿಸರದಲ್ಲೇ ಮಂಗಗಳ ಶವ ಪತ್ತೆಯಾಗಿರುವುದು ಈ‌ ಪ್ರದೇಶದ ನಿವಾಸಿಗರ ನಿದ್ದೆ ಕೆಡಿಸಿದೆ. ಸಂಬಂಧಿತ ಇಲಾಖೆಗಳು ಈ ಬಗ್ಗೆ ಆದಷ್ಟು ಶೀಘ್ರ ತನಿಖೆ ನಡೆಸಿ, ಮಂಗಗಳ ಸಾವಿಗೆ ಏನು ಕಾರಣ ಎಂಬುದನ್ನು ಬಹಿರಂಗ ಪಡಿಸಬೇಕಾಗಿದೆ.

Latest News

Related Posts