ಮಾಸ್ಕ್ ಧರಿಸಿ- ವೈಯಕ್ತಿಕ ಅಂತರ ಕಾಪಾಡಿದ ಮಾದರಿ ಕಾರ್ಯಕ್ರಮ
ಮೂಡುಬಿದಿರೆಯ ಜವುಳಿ ವರ್ತಕರ ಸಂಘದ ಆಶ್ರಯದಲ್ಲಿ ಭಾರತೀಯ ರೆಡ್ ಕ್ರಾಸ್ ಸೊಸೈಟಿ ಮಂಗಳೂರು ಮತ್ತು ಸಮಾಜಮಂದಿರ ಸಭಾ ಮೂಡುಬಿದಿರೆ ಇವರ ಸಹಯೋಗದೊಂದಿಗೆ ರೆಡ್ ಕ್ರಾಸ್ ಸೊಸೈಟಿಯವರ ಬೇಡಿಕೆಯ ಮೇರೆಗೆ ಇಲ್ಲಿನ ಸಮಾಜ ಮಂದಿರ ಸಭಾದ ಸ್ವರ್ಣಮಂದಿರದಲ್ಲಿ ತುರ್ತು ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು. ಮಾಸ್ಕ್ ಧರಿಸಿ, ವೈಯಕ್ತಿಕ ಅಂತರ ಕಾಪಾಡಿಕೊಂಡು, ಸ್ಯಾನಿಟೈಸರ್ ಬಳಸಿ ಅತ್ಯಂತ ವ್ಯವಸ್ಥಿತವಾಗಿ ಈ ಶಿಬಿರವನ್ನು ಹಮ್ಮಿಕೊಳ್ಳುವ ಮೂಲಕ ಕೊರೋನಾ ಜಾಗೃತಿಯನ್ನು ಮೂಡಿಸಿದ್ದು ಮಾದರಿಯಾಗಿತ್ತು.
ಇಲ್ಲಿನ ಜವುಳಿ ಮಳಿಗೆಗಳ ಮಾಲಕರ ಕುಟುಂಬಿಕರೂ ಮತ್ತು ನೌಕರ ವರ್ಗ ಸೇರಿ ಸುಮಾರು 100 ಯೂನಿಟ್ ರಕ್ತವನ್ನು ಈ ಶಿಬಿರದಲ್ಲಿ ಸಂಗ್ರಹಿಸಲಾಯಿತು.
ಮುಸ್ಲಿಂ ಬಾಂಧವರು ರಂಜಾನ್ ಉಪವಾಸದ ಅವಧಿಯಲ್ಲಿ ರಕ್ತದಾನ ಮಾಡಲು ಅವಕಾಶವಿಲ್ಲದ ಕಾರಣ ಸಂಘದಲ್ಲಿರುವ ಮುಸ್ಲಿಂ ಸಮಾಜ ಬಾಂಧವ ಸದಸ್ಯರ ಕೋರಿಕೆಯ ಮೇರೆಗೆ ರಂಜಾನ್ ಮಾಸ ಮುಗಿದ ನಂತರ ಜವುಳಿ ವರ್ತಕರ ಸಂಘದ ವತಿಯಿಂದಲೇ ಮತ್ತೊಂದು ಶಿಬಿರವನ್ನು ಆಯೋಜಿಸಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.
ಪ್ರೇಮ್ ಕುಮಾರ್ ಅವರು ಪ್ರಥಮವಾಗಿ ರಕ್ತದಾನ ಮಾಡಿದರು. ಸಂಘದ ಅಧ್ಯಕ್ಷ ರವೀಂದ್ರ ಪೈ, ಗೌರವಾಧ್ಯಕ್ಷ ಪ್ರಭಾಚಂದ್ರ ಜೈನ್, ಕಾರ್ಯದರ್ಶಿ ನೆಲ್ಲಿಮಾರ್ ಸದಾಶಿವ ರಾವ್, ಪದಾಧಿಕಾರಿಗಳಾದ ಪೂರ್ಣಚಂದ್ರ, ನಾಗರಾಜ ಆಚಾರ್ಯ, ಸಲ್ಮಾನ್ ತಮೀಜ್, ಎಸ್. ಎನ್. ಬೋರ್ಕರ್, ಜಮೀರ್ ಮತ್ತಿತರರು ಉಪಸ್ಥಿತರಿದ್ದು ಶಿಬಿರದ ಯಶಸ್ಸಿಗೆ ಸಹಕರಿಸಿದರು.






