ಖಾಸಗಿ ಬಸ್ ಗಳು ರಸ್ತೆಗಿಳಿಯಲ್ಲ-ನಷ್ಟಕ್ಕೆ ಯಾರು ಹೊಣೆ?

Facebook
Twitter
LinkedIn
WhatsApp

6ತಿಂಗಳ ರಸ್ತೆ ತೆರಿಗೆ ಮನ್ನಾ ಮಾಡಿ; ಅಥವಾ ಪ್ರತೀ ಬಸ್ಸಿಗೆ 1ಲಕ್ಷ ರೂಪಾಯಿ ಪರಿಹಾರ ನೀಡಲು ಒತ್ತಾಯ

ಮೇ 19ರಿಂದ ಸರಕಾರಿ ಮತ್ತು ಖಾಸಗಿ ಬಸ್ಸುಗಳ ಓಡಾಟಕ್ಕೆ ರಾಜ್ಯ ಸರಕಾರ ಅವಕಾಶ ಕಲ್ಪಿಸಿದ್ದರೂ ಖಾಸಗಿ ಬಸ್ಸುಗಳು ಮೇ ತಿಂಗಳ ಅಂತ್ಯ ದವರೆಗೂ ರಸ್ತೆಗಿಳಿಯುವುದಿಲ್ಲಎಂದು ಖಾಸಗಿ ಬಸ್ಸು ಮಾಲಕರು ಖಚಿತ ಪಡಿಸಿದ್ದಾರೆ.
ದ.ಕ. ಜಿಲ್ಲೆಯ ಮೂಡುಬಿದಿರೆ ಮತ್ತು ಮಂಗಳೂರು, ಅಂತೆಯೇ ಉಡುಪಿ ಜಿಲ್ಲೆಯ ಬಹುತೇಕ ಎಲ್ಲಾ ಭಾಗ ಮತ್ತು ರಾಜ್ಯದ ಇತರ ಕೆಲವು ಜಿಲ್ಲೆಗಳಲ್ಲಿ ಸಾರ್ವಜನಿಕ ಸಾರಿಗೆ ಸಂಪೂರ್ಣ ಖಾಸಗಿ ಬಸ್ಸುಗಳನ್ನೇ ಅವಲಂಬಿಸಿದೆ. ಖಾಸಗಿ ಬಸ್ಸುಗಳು ಓಡಾಡದಿದ್ದರೆ ಸಾರ್ವಜನಿಕ ಸಾರಿಗೆ ಸಂಪರ್ಕ ಸಂಪೂರ್ಣ ತೆರೆದುಕೊಳ್ಳಲು ಸಾಧ್ಯವೇ ಇಲ್ಲ ಎಂಬ ಅಂಶ ಮುಖ್ಯವಾಗಿ ವ್ಯಾಪಾರ ಮತ್ತು ವ್ಯವಹಾರ ವಲಯವನ್ನು ಚಿಂತೆಗೀಡು ಮಾಡಿದೆ.
ದೇಶದಲ್ಲಿ ಲಾಕ್ ಡೌನ್ ಘೋಷಣೆ ಯಾದ ದಿನವೇ ಖಾಸಗಿ ಬಸ್ ಮಾಲಕರು ಲಾಕ್ ಡೌನ್ ನಿಂದ ರೋಡ್ ಟ್ಯಾಕ್ಸ್ ಕಟ್ಟಲು ಅಸಾಧ್ಯವೆಂದು ಹೇಳಿ ತಮ್ಮ ವಾಹನಗಳ ಪರವಾನಿಗೆಯನ್ನು ಸಾರಿಗೆ ಇಲಾಖೆಗೆ ಸರೆಂಡರ್ ಮಾಡಿದ್ದರು. ಹೀಗೆ ಸರೆಂಡರ್ ಮಾಡುವ ಸಂದರ್ಭದಲ್ಲಿ ಸರೆಂಡರ್ ಪತ್ರದಲ್ಲಿ ಪ್ರಾರಂಭದ ದಿನವನ್ನು ಮಾತ್ರ ನಮೂದಿಸಲಾಗಿತ್ತು ಎಂದು ವಿಶ್ವಸನೀಯ ಮೂಲಗಳಿಂದ ತಿಳಿದುಬಂದಿದೆ.
ಇದೀಗ ಬಸ್ಸುಗಳ ಓಡಾಟಕ್ಕೆ ಸರಕಾರ ಅವಕಾಶ ಕಲ್ಪಿಸಿದರೂ 20-30 ಪ್ರಯಾಣಿಕರನ್ನು ಮಾತ್ರ ಹೊತ್ತುಕೊಂಡು ಬಸ್ಸು ಓಡಿಸು ವುದರಿಂದ ನಷ್ಟವೇ ಹೆಚ್ಚು. ಡೀಸಲ್ ಮತ್ತು ಬಿಡಿಭಾಗಗಳ ಬೆಲೆಯೂ ಏರಿಕೆಯಾಗಿದೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ರಸ್ತೆ ತೆರಿಗೆಯೂ ವಿಪರೀತವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಬಸ್ಸು ಓಡಿಸಿ ನಷ್ಟವನ್ನು ಮೈಮೇಲೆಳೆದುಕೊಳ್ಳಲು ಬಸ್ ಮಾಲಕರು ಸಿದ್ಧರಿಲ್ಲ ಎಂದು ಬಸ್ ಮಾಲಕರೊಬ್ಬರು ಪತ್ರಿಕೆಗೆ ತಿಳಿಸಿದ್ದಾರೆ.
ರಾಜ್ಯ ಖಾಸಗಿ ಬಸ್ ಮಾಲಕರ ಸಂಘದ ಅಧ್ಯಕ್ಷರು 6 ತಿಂಗಳ ರಸ್ತೆ ತೆರಿಗೆಯಲ್ಲಿ ರಿಯಾಯತಿ ನೀಡಬೇಕು ಇಲ್ಲವೇ ಪ್ರತೀ ಬಸ್ ಗೆ ತಲಾ ರೂ. 1ಲಕ್ಷ ಸಹಾಯವನ್ನು ಸರಕಾರ ಘೋಷಿಸ ಬೇಕು ಎಂಬ ಬೇಡಿಕೆಯನ್ನು ರಾಜ್ಯ ಸರಕಾರಕ್ಕೆ ಸಲ್ಲಿಸಿದ್ದಾರೆಂದು ತಿಳಿದುಬಂದಿದ್ದು ಸರಕಾರ ಈ ಬೇಡಿಕೆಗೆ ಒಪ್ಪಿದರೆ ಜೂನ್ ತಿಂಗಳ ಪ್ರಥಮ ವಾರದಿಂದ ಕೆಲವು ಬಸ್ಸುಗಳು ಮುಂದಿನ ಮೂರು ತಿಂಗಳ ರಸ್ತೆ ತೆರಿಗೆ ಮುಂಗಡವಾಗಿ ಕಟ್ಟಿ ರಸ್ತೆಗಿಳಿಯಲಿವೆ. ಇಲ್ಲವಾದಲ್ಲಿ ಇನ್ನೂ ಒಂದೆರಡು ತಿಂಗಳು ಕಾಯಬೇಕಾಗಬಹುದು ಎಂದು ಬಸ್ ಮಾಲಕರು ಪತ್ರಿಕೆಗೆ ತಿಳಿಸಿದ್ದಾರೆ. ಸರಕಾರಿ ಬಸ್ಸುಗಳ ಓಡಾಟದಿಂದ ಕೆ ಎಸ್.ಆರ್.ಟಿ.ಸಿ.ಗೆ ಆಗುವ ನಷ್ಟವನ್ನು ಸರಕಾರವೇ ಭರಿಸಲಿದೆ ಎಂದು ಮುಖ್ಯಮಂತ್ರಿಗಳು ಘೋಷಿಸಿದ್ದಾರೆ. ಖಾಸಗಿ ಬಸ್ಸುಗಳ ನಷ್ಟದ ಬಗ್ಗೆ ಯಾವುದೇ ಉಲ್ಲೇಖ ಮಾಡಿಲ್ಲ. ಖಾಸಗಿ ಬಸ್ಸುಗಳನ್ನೇ ಅವಲಂಬಿಸಿರುವ ಮೂಡುಬಿದಿರೆ, ಮಂಗಳೂರು, ಉಡುಪಿ ಜಿಲ್ಲೆ ಮತ್ತಿತರ ಭಾಗದ ಜನರ ಓಡಾಟಕ್ಕೆ ಬದಲಿ ವ್ಯವಸ್ಥೆ ಏನಾದರೂ ಇದೆಯೇ ಎಂಬುದನ್ನು ಸರಕಾರ ಸ್ಪಷ್ಟಪಡಿಸಬೇಕು.

Latest News

Related Posts