
ಮುಂಬೈಯಿಂದ ಬಂದು ಮರೋಡಿ ಕೂಕ್ರಬೆಟ್ಟು ಶಾಲೆಯಲ್ಲಿ ಕ್ವಾರಂಟೈನಿನಲ್ಲಿರುವ ಒಂದಷ್ಟು ಮಂದಿ ಶಾಲಾ ಕೊಠಡಿಯಲ್ಲಿ ಕುಳಿತು ಕ್ವಾರಂಟೈನ್ ನಿಯಮ ಪಾಲಿಸುವ ಬದಲಾಗಿ, ಶ್ರಮದಾನದ ಹೆಸರಲ್ಲಿ ಶಾಲಾ ಆವರಣದಲ್ಲಿ ಸುತ್ತಾಡುತ್ತಾ ಕ್ವಾರಂಟೈನ್ ನಿಯಮವನ್ನು ಉಲ್ಲಂಘಿಸಿ, ಸ್ಥಳೀಯರಲ್ಲಿ ಭೀತಿಯನ್ನು ಹುಟ್ಟಿಸುತ್ತಿದ್ದಾರೆ. ಮುಂಬೈಯವರ ಈ ವರ್ತನೆಯಿಂದ ಕೂಕ್ರಬೆಟ್ಟು ಶಾಲೆ ಕ್ವಾರಂಟೈನ್ ಕೇಂದ್ರದ ಮಾಹಿತಿ ಬಹಿರಂಗವಾಗಿದೆ.
ಹೇಳಿಕೇಳಿ ಮುಂಬೈ ಹಾಗೂ ಹೊರ ರಾಜ್ಯಗಳಿಂದ ಬಂದವರಿಂದ ರಾಜ್ಯದಲ್ಲಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ. ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗು ತ್ತಿರುವುದನ್ನು ಕಂಡ ರಾಜ್ಯದ ಜನತೆ ಬೆಚ್ಚಿಬಿದ್ದಿದ್ದಾರೆ. ಮುಂಬೈ ಸಹಿತ ಹೊರ ರಾಜ್ಯಗಳಿಂದ ಬಂದವರು ಇನ್ನೆಷ್ಟು ಸೋಂಕು ಹರಡಲಿದ್ದಾರೆ ಎಂಬ ಆತಂಕ ನಮ್ಮ ಜಿಲ್ಲೆಯ ಜನರಲ್ಲೂ ಇದೆ. ಪರಿಸ್ಥಿತಿ ಹೀಗಿರುವಾಗ ಕ್ವಾರಂಟೈನ್ ದಿನಗಳಲ್ಲಿ ನಿಯಮ ಉಲ್ಲಂಘಿಸಿ, ಕ್ವಾರಂಟೈನ್ ಸೆಂಟರಿನ ಹೊರಗೆ ಓಡಾಡಿಕೊಂಡಿದ್ದರೆ ಹಳ್ಳಿಮಂದಿ ಭಯಬೀಳೋದು ಸಹಜ ತಾನೇ? ನಮ್ಮ ಆಡಳಿತ ಇಂತಹ ಘಟನೆಗಳಿಗೆ ಯಾಕೆ ಅವಕಾಶ ನೀಡುತ್ತಿದೆ…ಕ್ವಾರಂಟೈನ್ ಸೆಂಟರಿನ ಉಸ್ತುವಾರಿ ವಹಿಸಿದವರು ಯಾಕೆ ಒತ್ತಡ ಅಥವಾ ಆಮಿಷಕ್ಕೆ ಬಲಿಯಾಗಿ ಊರ ನೆಮ್ಮದಿಗೆ ಕೊಳ್ಳಿ ಇಡಲು ಹೊರಟಿದ್ದಾರೋ ಅರ್ಥವಾಗುತ್ತಿಲ್ಲ.






