ಕೊರೋನಾ ವೈರಸ್ ಲಾಕ್ ಡೌನ್ ನ ಸಂದಿಗ್ಧತೆಯ ನಡುವೆ ನಮ್ಮನಾಳುವ ಸರ್ಕಾರಗಳು ಕಾರ್ಮಿಕ ವಿರೋಧಿ ನೀತಿಗಳನ್ನು ರೂಪಿಸಲು ಹೊರಟಿರುವುದನ್ನು ಕೈಬಿಡಲು ಒತ್ತಾಯಿಸಿ ಕಾರ್ಮಿಕ ಸಂಘಗಳ ಜಂಟಿ ಸಮಿತಿ (ಜೆಸಿಟಿಯು) ನೀಡಿದ ಕರೆಯಂತೆ ಇಂದು ಬೆಳ್ತಂಗಡಿ ತಹಶಿಲ್ದಾರರ ಮೂಲಕ ಸಿಐಟಿಯು ಬೆಳ್ತಂಗಡಿ ತಾಲೂಕು ಸಮಿತಿ ನೇತೃತ್ವದಲ್ಲಿ ರಾಜ್ಯ, ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಕೆಲಸದ ಅವಧಿ ಹೆಚ್ಚಳ ,ಕಾರ್ಖಾನೆ ಪರಿಭಾಷೆಗೆ ತಿದ್ದುಪಡಿ, ಕಾರ್ಮಿಕ ಕಾನೂನುಗಳ ತಿದ್ದುಪಡಿ ಮಸೂದೆ ಯನ್ನು ವಿರೋಧಿಸಿ ಜೆಸಿಟಿಯು ಇಡೀ ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಸಿಐಟಿಯು ಬೆಳ್ತಂಗಡಿ ತಾಲೂಕು ಸಮಿತಿ ನೇತೃತ್ವ ದಲ್ಲಿ ಕೆಲಸದ ಅವಧಿ ವಿಸ್ತರಿಸಬಾರದು , ಲಾಕ್ ಡೌನ್ ಹೆಸರಿನಲ್ಲಿ ಕಾರ್ಮಿಕರ ವೇತನ ಕಡಿತ ಮಾಡಬಾರದು , ಗುತ್ತಿಗೆ ಕಾರ್ಮಿಕರನ್ನು ಒಳಗೊಂಡಂತೆ ಯಾವುದೇ ಕಾರ್ಮಿಕರನ್ನು ಕೆಲಸದಿಂದ ವಜಾ ಮಾಡಬಾರದು , ಕೈಗಾರಿಕಾ ವಿವಾದಗಳ ಕಾಯಿದೆಯ ಅಧ್ಯಾಯ 5(B) ಮಾಲೀಕರಿಗೆ ವಿನಾಯಿತಿ ನೀಡಬಾರದು , 100 ಜನಕ್ಕಿಂತಲೂ ಹೆಚ್ಚು ಕಾರ್ಮಿಕರು ಕೆಲಸ ಮಾಡುವ ಸಂಸ್ಥೆಗಳಲ್ಲಿ ಸರ್ಕಾರದ ಅನುಮತಿ ಇಲ್ಲದೆ ಲೇ-ಆಫ್ , ರಿಟ್ರೆಂಚ್ಮೆಂಟ್ ಹಾಗೂ ಮುಚ್ಚಲು ಅವಕಾಶ ನೀಡಬಾರದು , ಕಾರ್ಮಿಕ ಕಾನೂನು ಗಳನ್ನು ಅಮಾನತುಗೊಳಿಸಲು ನಡೆಯುತ್ತಿರುವ ಎಲ್ಲಾ ಪ್ರಯತ್ನಗಳನ್ನು ಕೈ ಬಿಡಬೇಕು , ಗುರುತಿಸಿರುವ ಅಸಂಘಟಿತ ಕಾರ್ಮಿಕರಿಗೆ ನೇರ ಆರ್ಥಿಕ ನೆರವು ನೀಡಬೇಕು , ಕೊರೋನಾ ಫ್ರಂಟ್ ಲೈನ್ ಕಾರ್ಮಿಕರಿಗೆ ರಕ್ಷಣೆ ಹಾಗೂ ಕೆಲಸದ ಭದ್ರತೆ ನೀಡಬೇಕು , ಕಾರ್ಪೊರೇಟ್ ಮಾಲೀಕರ ಪರವಾದ ಎಪಿಎಂಸಿ ಸುಗ್ರೀವಾಜ್ಞೆ ಯನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿ ಕೇಂದ್ರ, ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಿಐಟಿಯು ಬೆಳ್ತಂಗಡಿ ತಾಲೂಕು ಅಧ್ಯಕ್ಷ , ನ್ಯಾಯ ವಾದಿ ಶಿವಕುಮಾರ್ ಎಸ್, ಎಂ , ಕಾರ್ಯದರ್ಶಿ ವಸಂತ ನಡ , ಉಪಾ ಧ್ಯಕ್ಷ ಶೇಖರ್ ಲಾಯಿಲ , ನ್ಯಾಯವಾದಿ ಸುಕನ್ಯಾ ಹೆಚ್ , ಸುಜೀತ್ ಉಜಿರೆ ಉಪಸ್ಥಿತರಿದ್ದರು.






