ಬಿಗ್ ಬ್ರೇಕಿಂಗ್ ನ್ಯೂಸ್ ಕಡಂದಲೆಯಲ್ಲಿ ಕ್ವಾರಂಟೈನ್ ಗೆ ಒಳಪಟ್ಟ ವ್ಯಕ್ತಿ ಆತ್ಮಹತ್ಯೆ

ಸಾವಿಗೆ ಶರಣು
Facebook
Twitter
LinkedIn
WhatsApp

ಮೂಡುಬಿದಿರೆ : ಮುಂಬೈಯಿಂದ ಮೇ 20ರ ತಡರಾತ್ರಿ ಕಡಂದಲೆಗೆ ಆಗಮಿಸಿ ಕಡಂದಲೆ ಮೈನ್ ಶಾಲೆಯಲ್ಲಿ ಕ್ವಾರಂಟೈನ್ ಗೆ ಒಳಗಾಗಿದ್ದ ವ್ಯಕ್ತಿಯೋರ್ವರ ಶವ ಮೇ 21ರ ಮುಂಜಾನೆ ವರಾಂಡದ ತೊಲೆಗೆ ನೇಣುಹಾಕಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಕಡಂದಲೆ ಕಾಂಗ್ಲಾಯಿಯ ದಯಾನಂದ (52ವ.) ಅವರು ಹಲವು ವರ್ಷಗಳಿಂದ ಮುಂಬಯಿಯಲ್ಲಿ ಹೋಟೆಲ್ ಕಾರ್ಮಿಕರಾಗಿ ದುಡಿಯುತ್ತಿದ್ದು ಕೊರೋನಾ ಸಂಕಷ್ಟದ ಸಮಯದಲ್ಲಿ ಲಾಕ್ ಡೌನ್ ಕೂಡಾ ಇದ್ದುದರಿಂದ ಊರಿಗೆ ಹಿಂತಿರುಗಲು ಹಾತೊರೆಯುತ್ತಿದ್ದರು. ಕೊನೆಗೂ ಊರಿಗೆ ಮರಳಲು ಅವಕಾಶ ಸಿಕ್ಕಿದ್ದು ತನ್ನ ಇತರ 6 ಮಂದಿ ಸಂಬಂಧಿಕರ ಜೊತೆಗೆ ಮೇ 20ರಂದು ಹಗಲಲ್ಲಿ ಮುಂಬೈನಿಂದ ಹೊರಟು ತಡರಾತ್ರಿ 1-30ರ ಸುಮಾರಿಗೆ ಕಡಂದಲೆ ತಲುಪಿದ್ದರು. ಈ ಎಲ್ಲಾ 7 ಮಂದಿಗೆ ಕಡಂದಲೆ ಮೈನ್ ಶಾಲೆಯಲ್ಲಿ ಕ್ವಾರಂಟೈನ್ ವ್ಯವಸ್ಥೆ ಮಾಡಲಾಗಿತ್ತು. ಇಲ್ಲಿ ತಲುಪಿದ ನಂತರ ಪ್ರಯಾಣದ ಆಯಾಸ ಇದ್ದ ಕಾರಣ ಎಲ್ಲರೂ ನಿದ್ದೆಗೆ ಜಾರಿದ್ದರು.
ಮೇ21ರ ಮುಂಜಾನೆ ಕ್ವಾರಂಟೈನ್ ನಲ್ಲಿದ್ದ ಇತರರು ಎದ್ದು ನೋಡಿದಾಗ ದಯಾನಂದ ಅವರ ಶವ ಶಾಲಾ ಕೊಠಡಿಯ ವರಾಂಡದ ತೊಲೆಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಘಟನಾ ಸ್ಥಳಕ್ಕೆ ಮೂಡುಬಿದಿರೆ ತಹಶೀಲ್ದಾರ್, ಪೊಲೀಸರು, ಜಿ.ಪಂ.ಸದಸ್ಯ ಕೆ.ಪಿ. ಸುಚರಿತ ಶೆಟ್ಟಿ, ಪಾಲಡ್ಕ ಗ್ರಾಮ ಪಂಚಾಯತ್ ಪಿ.ಡಿ.ಒ. ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಮೃತ ದಯಾನಂದ ಅವರು ಇದೇ ಶಾಲೆಯ ಹಳೆ ವಿದ್ಯಾರ್ಥಿಯಾಗಿದ್ದು, ಮೃತರ ಪತ್ನಿ ಇದೇ ಶಾಲೆಯಲ್ಲಿ ಅಕ್ಷರ ದಾಸೋಹ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದಾರೆಂದು ತಿಳಿದುಬಂದಿದೆ. ಮೃತರಿಗೆ ಮೂವರು ಪುತ್ರಿಯರಿದ್ದಾರೆ. ಮೃತರ ಸಹೋದರ ದಿನೇಶ್ ಪೂಜಾರಿ ಪಾಲಡ್ಕ ಗ್ರಾಮ ಪಂಚಾಯತದ ಕಡಂದಲೆ ವಾರ್ಡಿನ ಬಿ.ಜೆ.ಪಿ. ಬೆಂಬಲಿತ ಸದಸ್ಯರಾಗಿದ್ದಾರೆ.

Latest News

Related Posts