ಹೆಮ್ಮಾರಿ ಕೊರೋನಾಗೆ ವೇಣೂರಿನ ವ್ಯಕ್ತಿ ಬಲಿ – ವೇಣೂರು ಸೀಲ್ ಡೌನ್ ಸಾಧ್ಯತೆ
ಹೆಮ್ಮಾರಿ ಕೊರೋನಾಗೆ ವೇಣೂರಿನ ವ್ಯಕ್ತಿಯೋರ್ವ ಬಲಿಯಾದ ಘಟನೆ ಮೇ 25ರಂದು ವರದಿಯಾಗಿದೆ.
ಕೊರೋನಾ ಚೀನಾದ ವುಹಾನಿನಲ್ಲಿ ಹುಟ್ಟಿದೆ. ಅಮೇರಿಕಾದಲ್ಲಿದೆ, ಇಟಲಿಯಲ್ಲಿದೆ, ಬ್ರಿಟನಿನಲ್ಲಿದೆ, ಜರ್ಮನಿಯಲ್ಲಿದೆ…..ದೇಶದ ಇತರ ರಾಜ್ಯಗಳಲ್ಲಿದೆ….ಬೆಂಗಳೂರಿನಲ್ಲಿದೆ…ಮಂಗಳೂರಿನಲ್ಲಿದೆ….ನಮ್ಮೂರಿಗೆ ಬಂದಿಲ್ಲ, ನಮಗಾವ ಮುಂಜಾಗ್ರತೆಯೂ ಅಗತ್ಯವಿಲ್ಲ….ಎಂದು ಮಾಸ್ಕ್ ಧರಿಸದೇ-ವೈಯಕ್ತಿಕ ಅಂತರ ಕಾಪಾಡದೇ ಬೇಕಾಬಿಟ್ಟಿ ತಿರುಗಾಡುತ್ತಿದ್ದ ಬೆಳ್ತಂಗಡಿಯ ಜನತೆಯನ್ನು ಕಳೆದ ಶುಕ್ರವಾರ ಮೇ 22ರಂದು ಶಿರ್ಲಾಲಿನ ಕೊರೋನಾ ಪಾಸಿಟಿವ್ ಪ್ರಕರಣ ಎಚ್ಚರಿಸಿತ್ತು. ಇದೀಗ ಮೇ 25ರಂದು ವೇಣೂರಿನ ವ್ಯಕ್ತಿಯೋರ್ವ ಕೊರೋನಾ ಸೋಂಕಿನಿಂದ ಮೃತಪಟ್ಟದ್ದು ತಾಲೂಕಿನ ಜನತೆಯನ್ನು ಬೆಚ್ಚಿಬೀಳಿಸಿದೆ. ಕೊರೋನಾ ನಮ್ಮ ಕಾಲಬುಡದಲ್ಲೇ ಇದೆ; ಸ್ವಲ್ಪ ಎಚ್ಚರ ತಪ್ಪಿದರೂ ವಕ್ಕರಿಸೋದು ಗ್ಯಾರಂಟಿ ಎಂಬ ಆತಂಕ ಪ್ರತಿಯೊಬ್ಬರಲ್ಲೂ ಮನ ಮಾಡಿದೆ.
ಈಗಲೂ ಕಾಲ ಮಿಂಚಿಲ್ಲ. ಪ್ರಧಾನಿ ನರೇಂದ್ರ ಮೋದಿ ಹೇಳಿದ ಆತ್ಮ ನಿರ್ಭರತಾ (ನಮ್ಮ ತಲೆಗೆ ನಮ್ಮ ಕೈ) ವನ್ನು ಸರಿಯಾಗಿ ಅರ್ಥೈಸಿ; ಕೊರೋನಾ ಸೋಂಕಿನ ವಿರುದ್ಧ ಎಲ್ಲ ಮುಂಜಾಗ್ರತೆಯನ್ನು ಕೈಗೊಂಡರೆ ತಾಲೂಕನ್ನು ಕೊರೋನಾ ಸೋಂಕಿನಿಂದ ಮುಕ್ತಗೊಳಿಸಲು ಸಾಧ್ಯ. ಮಾಸ್ಕ್ ಸರಿಯಾಗಿ ಧರಿಸೋಣಾ, ವೈಯಕ್ತಿಕ ಅಂತರ ಕಾಪಾಡೋಣಾ, ಸ್ವಚ್ಛತೆ ಕಾಪಾಡೋಣಾ, ಸಾರ್ವಜನಿಕ ಶೌಚಾಲಯ ಬಳಸದಿರೋಣಾ, ಮನೆಯಿಂದ ಹೊರಟಮೇಲೆ ಮನೆಗೆ ಹಿಂತಿರುಗುವವರೆಗೆ ನಮ್ಮ ದೇಹದ ನವರಂದ್ರಗಳನ್ನೂ ಕೈಯಿಂದ ಮುಟ್ಟದಿರೋಣಾ, ಮಾಸ್ಕನ್ನು ಆಗಾಗ ಮುಟ್ಟದಿರೋಣಾ…ಕೊರೋನಾ ಮುಕ್ತ ಬದುಕು ಕಟ್ಟಿಕೊಳ್ಳೋಣಾ; ಸಮಾಜವನ್ನೂ ಕೊರೋನಾ ಮುಕ್ತಗೊಳಿಸೋಣಾ.
ಹಾ…ಇಂದು ಮೇ 25ರಂದು ಕೊರೋನಾ ಸಾವಿನಿಂದ ಮೃತಪಟ್ಟ ವೇಣೂರು ಮೂಲದ ವ್ಯಕ್ತಿಯ ಟ್ರಾವೆಲ್ ಹಿಸ್ಟರಿ ಆತಂಕಕಾರಿಯಾಗಿದ್ದು ವೇಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯೇ ಸಂಪೂರ್ಣ ಸೀಲ್ ಡೌನ್ ಮಾಡುವ ಚಿಂತನೆ ನಡೆದಿದ್ದು, ಯಾವುದೇ ಕ್ಷಣದಲ್ಲಿ ತಾಲೂಕು ಆಡಳಿತದಿಂದ ಈ ಬಗ್ಗೆ ಆದೇಶ ಹೊರಬೀಳಬಹುದು.







