ಗುರುಗಳೇ ಎಚ್ಚರ ತಪ್ಪಿದರೆ ಎಡವುವವರಿಗಾರು ದಿಕ್ಕು

Facebook
Twitter
LinkedIn
WhatsApp

ಬದ್ಯಾರಿನಲ್ಲಿ ಹೈಮಾಸ್ಕ್ ಲೈಟ್ ವೈಯಕ್ತಿಕ ಅಂತರ ಮರೆತು ಉದ್ಘಾಟನೆ

ಮೇ 27ರಂದು ಬದ್ಯಾರಿನ ಡಾl ಎಲ್. ಎಂ. ಪಿಂಟೊ ಆಸ್ಪತ್ರೆಯ ವಠಾರದಲ್ಲಿರುವ ಬಸ್ ನಿಲ್ದಾಣದ ಬಳಿ ಬೆಳ್ತಂಗಡಿ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಲ್ಲಿ ಅಳವಡಿಸಲಾದ ಹೈಮಾಸ್ಕ್ ದಾರಿದೀಪದ ಉದ್ಘಾಟನಾ ಕಾರ್ಯಕ್ರಮ. ದೀಪವನ್ನು ಸಾಂಪ್ರದಾಯಿಕವಾಗಿ ಶಾಸಕ ಹರೀಶ್ ಪೂಂಜಾ ಉದ್ಘಾಟಿಸಿದರು. ಆದರೆ ಈ ಉದ್ಘಾಟನಾ ಕಾರ್ಯಕ್ರಮದಲ್ಲಿ ಬದ್ಯಾರು ಚರ್ಚಿನ ಧರ್ಮಗುರು ವಂ. ಮೆಲ್ವಿನ್ ಡಿ’ಸೋಜಾ ಉಪಸ್ಥಿತರಿದ್ದೂ, ಕಾರ್ಯಕ್ರಮದಲ್ಲಿ ವೈಯಕ್ತಿಕ ಅಂತರ ಮರೆತು ಕೊರೋನಾ ಸೋಂಕಿನ ಬಗ್ಗೆ ಮುಂಜಾಗ್ರತೆ ವಹಿಸದಿದ್ದುದು ‘ಗುರುಗಳೇ ಎಚ್ಚರ ತಪ್ಪಿದರೆ ಎಡವುವವರಿಗಾರು ದಿಕ್ಕು’ ಎಂಬ ಪ್ರಶ್ನೆ ಮೂಡುವಂತೆ ಮಾಡಿತು.
ಹೇಳಿಕೇಳಿ ಬದ್ಯಾರಿಗೆ ಕೂಗಳತೆ ದೂರದಲ್ಲಿರುವ ಶಿರ್ಲಾಲಿಗೆ ಈಗಾಗಲೇ ಕೊರೋನಾ ಹೆಮ್ಮಾರಿ ವಕ್ಕರಿಸಿದೆ. ಪರಿಸರದ ಜನಸಾಮಾನ್ಯರು ಕೊರೋನಾ ಮಾರಿಯ ಭಯದಲ್ಲಿ ಬದುಕುತ್ತಿದ್ದಾರೆ. ಕೊರೋನಾದಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಇರುವ ಸಧ್ಯದ ಮಾರ್ಗೋಪಾಯ ಮಾಸ್ಕ್ ಧಾರಣೆ ಮತ್ತು ವೈಯಕ್ತಿಕ ಅಂತರ ಕಾಪಾಡಿಕೊಂಡು ಸ್ವಚ್ಛವಾಗಿರೋದು ಮಾತ್ರ. ಈ ಮಾರ್ಗೋಪಾಯಗಳ ಪಾಲನೆಯಲ್ಲಿ ಜನಸಾಮಾನ್ಯರಿಗೆ ಮಾದರಿಯಾಗುವ ಮೂಲಕ ಜಾಗೃತಿ ಮೂಡಿಸಬೇಕಾದ ಧರ್ಮಗುರುಗಳು, ಜನಪ್ರತಿನಿಧಿಗಳು ಹಾಗೂ ವೈದ್ಯರುಗಳೇ ವೈಯಕ್ತಿಕ ಅಂತರ ಮರೆತು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರೆ….ಬೇಲಿಯೇ ಎದ್ದು ಹೊಲ ಮೆದ್ದಂತೆ ಆಗಲಿಲ್ಲವೇ?
ಅಂತೂ ಬದ್ಯಾರು ಡಾl ಎಲ್. ಎಂ. ಪಿಂಟೊ ಆಸ್ಪತ್ರೆಯ ವಠಾರದಲ್ಲಿ ಬದ್ಯಾರು ಚರ್ಚಿನ ಧರ್ಮಗುರು ವಂ. ಮೆಲ್ವಿನ್ ಡಿ’ಸೋಜಾರ ಉಪಸ್ಥಿತಿಯಲ್ಲಿ ನಡೆದ ಈ ಸರಕಾರಿ ಕಾರ್ಯಕ್ರಮದಲ್ಲಿ ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜಾ, ಪಡಂಗಡಿ ಗ್ರಾಮ‌ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶೆಟ್ಟಿ, ಉಪಾಧ್ಯಕ್ಷ ಸಂತೋಷ್ ಕುಮಾರ್, ತಾಲೂಕು ಪಂಚಾಯತ್ ಸದಸ್ಯೆ ಸುಶೀಲಾ, ಗ್ರಾಮ‌ ಪಂಚಾಯತ್ ಸದಸ್ಯರಾದ ಮ್ಯಾಕ್ಸಿಂ ಸಿಕ್ವೇರಾ, ಅಹಮ್ಮದ್ ಬಾವಾ, ಸುಕೇಷ್ ಪೂಜಾರಿ, ಸುಧಾಕರ್, ಎಪಿಎಂಸಿ ಸದಸ್ಯ ಅಶೋಕ್ ಗೋವಿಯಸ್, ಡಾl ಡೆನ್ಸಿಲ್, ಸಿಸ್ಟರ್ ಪ್ರೇಮಲತಾ ಮತ್ತಿತರರು ವೈಯಕ್ತಿಕ ಅಂತರ ಮರೆತು ಸಂಭ್ರಮದಿಂದ ಭಾಗವಹಿಸಿ, ಕೊರೋನಾ ಸೋಂಕಿನ ವಿರುದ್ಧ ಜಾಗೃತಿ ಬಗ್ಗೆ ತಪ್ಪು ಸಂದೇಶ ನೀಡಿದ್ದಂತೂ ಸತ್ಯ. ಈ ನಡುವೆ ಕಾರ್ಯಕ್ರಮದ ಪ್ರಯುಕ್ತ ಎಪಿಎಂಸಿ ಸದಸ್ಯ ಅಶೋಕ್ ಗೋವಿಯಸ್ ಆಸ್ಪತ್ರೆಯ ರೋಗಿಗಳಿಗೆ ಹಾಗೂ ದಾದಿಯರಿಗೆ ಹಣ್ಣುಹಂಪಲು ನೀಡಿದ್ದು ಹೈಮಾಸ್ಕ್ ದೀಪ ಉದ್ಘಾಟನಾ ಕಾರ್ಯಕ್ರಮದ ಹೈಲೇಟ್.

Latest News

Related Posts