ವೈಯಕ್ತಿಕ ಅಂತರ ಮರೆತು ಮೆರೆದರಿವರು
ಧರ್ಮಸ್ಥಳದ ಕೆಲ ಮಂದಿ ಅದಾಗಲೇ ಕೊರೋನಾ ಸೋಂಕು ಹರಡದಂತೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳನ್ನು ಮರೆತಂತಿದೆ. ಈಗಲೇ ಹೀಗಾದರೆ ಮುಂದೆ ಕ್ಷೇತ್ರದ ದೇಗುಲದ ಬಾಗಿಲು ತೆರೆದ ಮೇಲೆ ಭಕ್ತಸಾಗರ ಬಂದಾಗ ನಮ್ಮೂರ ಕಥೆ ಏನಾಗಬಹುದು ಎಂಬ ಆತಂಕ ಕೊರೋನಾ ಸೋಂಕು ಹರಡದಂತೆ ಸುರಕ್ಷತಾ ಕ್ರಮ ಪಾಲಿಸುತ್ತಿರುವ ಕ್ಷೇತ್ರದ ನಿವಾಸಿಗರಲ್ಲಿ ಆವರಿಸತೊಡಗಿದೆ.
ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಕೊರೋನಾ ಸೋಂಕು ಹರಡದಂತೆ ಸುರಕ್ಷತಾ ಕ್ರಮಗಳನ್ನು ಪಾಲಿಸುತ್ತಿರುವ ನಾಗರಿಕರಲ್ಲಿ ಈ ಆತಂಕ ಸೃಷ್ಟಿಯಾಗಲು ಕಾರಣ ಜೂನ್ 1ರಂದು ಧರ್ಮಸ್ಥಳದ ಸಿಂಡಿಕೇಟ್ ಬ್ಯಾಂಕ್ ಶಾಖೆಯ ಎಟಿಎಂನ ಹೊರಗಡೆ ಮಾಸ್ಕ್ ಧಾರಣೆ ಮರೆತ ಕೆಲಮಂದಿ ಹಾಗೂ ವೈಯಕ್ತಿಕ ಅಂತರ ಸಂಪೂರ್ಣ ಮರೆತ ಮಂದಿ. ಶ್ರೀ ಕ್ಷೇತ್ರ ಧರ್ಮಸ್ಥಳದ ನಿವಾಸಿಗರಾದ ಇವರೆಲ್ಲಾ ಕೊರೋನಾ ಸೋಂಕು ಹರಡದಂತೆ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳನ್ನು ಗಾಳಿಗೆ ತೂರಿದ್ದನ್ನು ಕಂಡಾಗ ಎಂತಹವರಿಗೂ ಭಯವಾದೀತು. ಮುಂದಿನ ದಿನಗಳಲ್ಲಿ ದೇಗುಲ ಭಕ್ತರ ಪ್ರವೇಶಕ್ಕೆ ಮುಕ್ತವಾದಾಗ, ಬರುವ ಜನಸಂದಣಿ ಇನ್ಯಾವ ಅಪಾಯ ತಂದೊಡ್ಡೀತು ಎಂಬ ಸಹಜ ಆತಂಕ ಕೆಲವರಲ್ಲಿ ಮನೆಮಾಡಿದೆ. ತಾಲೂಕು ಆಡಳಿತ ಹಾಗೂ ಪೊಲೀಸ್ ಇಲಾಖೆ ಜನತೆ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧಾರಣೆ ಹಾಗೂ ವೈಯಕ್ತಿಕ ಅಂತರ ಕಾಪಾಡುವಿಕೆಯಂತಹ ಸುರಕ್ಷಾ ಕ್ರಮಗಳನ್ನು ಪಾಲಿಸುವಂತೆ ಮಾಡಲು ಸರಿಯಾದ ಬಿಗಿ ಕಾನೂನು ಕ್ರಮ ಅನುಷ್ಠಾನಿಸದಿದ್ದರೆ ಮುಂದಿನ ದಿನಗಳಲ್ಲಿ ಕೊರೋನಾ ಸೋಂಕಿನ ಅಟ್ಟಹಾಸ ಎಲ್ಲೆಮೀರಿ ಸಾಕಷ್ಟು ಅನಾಹುತ ಉಂಟಾಗಲಿದೆ. ಹಾಗಾಗದಿರಲು ಎಲ್ಲರೂ ಕೊರೋನಾ ಸೋಂಕು ಹರಡದಂತೆ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳನ್ನು ಪಾಲಿಸೋಣಾ.






