ಬೆಳ್ತಂಗಡಿ ತಾಲೂಕು ಕಲ್ಲೇರಿ ಗ್ರಾಮದ ಮಹಿಳೆಗೆ ಕೊರೋನಾ ದೃಢ

ಬಿಗ್ ಬ್ರೇಕಿಂಗ್ ನ್ಯೂಸ್  ಉಪ್ಪಿನಂಗಡಿಗೂ ವಕ್ಕರಿಸಿದ ಕೊರೋನಾ
Facebook
Twitter
LinkedIn
WhatsApp

ಆಡಳಿತಕ್ಕೆ ಸವಾಲಾದ ಸೋಂಕಿನ‌ ಮೂಲ ಪತ್ತೆಕಾರ್ಯ

ಬೆಳ್ತಂಗಡಿ ತಾಲೂಕಿನ ತಣ್ಣೀರುಪಂತ ಗ್ರಾಮದ ಕಲ್ಲೇರಿ ಜನತಾ ಕಾಲೊನಿಯ 45ರ ವಯೋಮಾನದ ಅಸ್ತಮಾದಿಂದ ಸುದೀರ್ಘ ಕಾಲದಿಂದ ಬಳಲುತ್ತಿದ್ದ ಮಹಿಳೆಯೋರ್ವಳಿಗೆ ಗಂಟಲುದ್ರವ ಪರೀಕ್ಷೆಯಲ್ಲಿ ಕೊರೋನಾ ಸೋಂಕು ‘ಪಾಸಿಟೀವ್’ ವರದಿ ಜೂನ್ 1ರಂದು ಬಂದಿದ್ದು, ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲದ ಈ ಮಹಿಳೆಗೆ ಕೊರೋನಾ ವೈರಸ್ ಎಲ್ಲಿಂದ ಬಂತು ಎಂಬ ಸವಾಲನ್ನು ಭೇದಿಸಲೇ ಬೇಕಾದ ಸವಾಲು ತಾಲೂಕು ಆಡಳಿತದ ಮುಂದಿದೆ‌.
ಕಳೆದ ಎರಡು ತಿಂಗಳ ಹಿಂದೆ ಇದೇ ಪರಿಸರದ ಯುವಕನೋರ್ವನಿಗೆ ಕೊರೋನಾ ಪೊಸಿಟಿವ್ ಗೋಚರಿಸಿದ್ದು, ಆತ ಚಿಕಿತ್ಸೆಯಿಂದ ಸಂಪೂರ್ಣ ಗುಣಮುಖನಾಗಿ ಮನೆ ಸೇರಿದ್ದಾನೆ. ಕೆಲ ದಿನಗಳ ಹಿಂದಷ್ಟೇ ವಿದೇಶದಿಂದ ಬಂದ ಈ ಯುವಕ ಹೋಂ ಕ್ವಾರಂಟೈನಿನಲ್ಲಿ ದ್ದಾಗಲೇ ಈತನಿಗೆ ಸೋಂಕು ತಗಲಿದ್ದು ಪತ್ತೆಯಾಗಿದ್ದು, ಈತನ ಪ್ರಥಮ, ದ್ವಿತೀಯ ಸಂಪರ್ಕದಲ್ಲಿದ್ದ ಎಲ್ಲರನ್ನೂ ಕ್ವಾರಂಟೈನಿಗೆ ಒಳಪಡಿಸಿ ನಡೆಸಿದ ಸೋಂಕು ಪರೀಕ್ಷೆಯಲ್ಲಿ ನೆಗೆಟಿವ್ ಬಂದಿತ್ತು. ಇಂದು ಕೊರೋನಾ ಸೋಂಕು ದೃಢಪಟ್ಟಿದೆ ಎನ್ನಲಾದ ಮಹಿಳೆ ಈ ಹಿಂದೆ ಸೋಂಕು ಪೀಡಿತನಾಗಿ ಗುಣಮುಖನಾದ ಯುವಕನ ಮನೆಗಿಂತ ಸಾಕಷ್ಟು ದೂರದಲ್ಲಿ‌ ವಾಸ್ತವ್ಯವಿದ್ದಾರೆ ಎನ್ನಲಾಗಿದ್ದು, ಈಕೆಗೆ ಕೊರೋನಾ ಪಾಸಿಟಿವ್ ಎಂಬ ಮಾಹಿತಿ ಕೇಳಿ ಇಡೀ ತಣ್ಣೀರುಪಂತ ಗ್ರಾಮದ ಜನತೆ ಬೆಚ್ಚಿಬಿದ್ದಿದ್ದಾರೆ. ಈಕೆಗೆ ಸೋಂಕು ತಗಲಿದ ಮೂಲವನ್ನು ತಾಲೂಕು ಆಡಳಿತ ಜಾಲಾಡಿ ಪತ್ತೆಮಾಡಿ ತಾಲೂಕಿನ ಜನತೆಯ ವಿಶ್ವಾಸ ಉಳಿಸಿಕೊಳ್ಳಬೇಕಾಗಿದೆ.
ಬೆಳ್ತಂಗಡಿ ತಾಲೂಕಿನಲ್ಲಿ ಕೆಲದಿನಗಳ ಹಿಂದೆ ಶಿರ್ಲಾಲು ಗ್ರಾಮದ ಅಸ್ತಮಾ ಹಾಗೂ ಇತರ ಆರೋಗ್ಯ ಸಮಸ್ಯೆಯಿಂದ ಸಾಕಷ್ಟು ಸಮಯ ದಿಂದ ಬಳಲುತ್ತಿದ್ದ ಮಹಿಳೆಗೆ ಕೊರೋನಾ ಪೊಸಿಟಿವ್ ವರದಿ ಬಂದಿದ್ದು, ಒಂದೇ ವಾರದಲ್ಲಿ ಗುಣಮುಖರಾಗಿ ಮನೆಗೆ ಬಂದಿದ್ದಾರೆ. ಟ್ರಾವೆಲ್ ಹಿಸ್ಟರಿ ಇಲ್ಲದ ಈಕೆಗೆ ಕೊರೋನಾ ಸೋಂಕು ಎಲ್ಲಿಂದ ಬಂತು ಎಂಬ ಪ್ರಶ್ನೆಗೆ ಇಂದಿಗೂ ಉತ್ತರ ಸಿಕ್ಕಿಲ್ಲ. ಕಳೆದವಾರ ಕೊರೋನಾ ಸೋಂಕು ವರದಿ ದೃಢಪಟ್ಟು ಮೃತಪಟ್ಟ ವೇಣೂರಿನ ವ್ಯಕ್ತಿ ಕಿಡ್ನಿ ಹಾಗೂ ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದು, ಎರಡೂ ಬಹುತೇಕ ನಿಷ್ಕ್ರೀಯಗೊಂಡಿತ್ತು ಎನ್ನಲಾಗಿದೆ. ಈತನ ಸೋಂಕಿನ‌ ಮೂಲವೂ ಒಗಟಾಗಿಯೇ ಉಳಿದಿದೆ. ಇದೀಗ ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲದ ತಣ್ಣೀರುಪಂತ ಗ್ರಾಮದ ಕಲ್ಲೇರಿಯಾ ಅಸ್ತಮಾ ರೋಗ ಪೀಡಿತ ಮಹಿಳೆಗೆ ಕೊರೋನಾ ಸೋಂಕು‌ ಪಾಸಿಟಿವ್ ಬಂದಿದ್ದು; ಈಕೆಯ ಸೋಂಕಿನ ಮೂಲ ಕಂಡುಹಿಡಿಯ ಬೇಕಾಗಿದೆ. ಈಕೆ ಕಳೆದ 20ವರ್ಷಗಳಿಂದ ಅಸ್ತಮಾ ಕಾಯಿಲೆಯಿಂದ ಬಳಲು ತ್ತಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎನ್ನಲಾಗಿದೆ. ಈ ರೀತಿ ಇತರ ರೋಗಗಳಿಂದ ನರಳುವವರಿಗೆಲ್ಲರಿಗೂ ಕೊರೋನಾ ಸೋಂಕು ಪರೀಕ್ಷೆ ನಡೆಸಿದಾಗ ವರದಿ ಪೊಸಿಟಿವ್ ಬರೋದು; ಇವರ ಸೋಂಕಿನ‌ ಮೂಲ ಪತ್ತೆಯಾಗದಿರೋದು ಅಮಾಯಕ ಜನಸಾಮಾನ್ಯರಲ್ಲಿ ಅವ್ಯಕ್ತ ಭಯ ಹಾಗೂ ಸಂದೇಹಗಳನ್ನು ಹುಟ್ಟುಹಾಕಿದೆ. ಜನಸಾಮಾನ್ಯರ ಮನದಲ್ಲಿರುವ ಈ ಭಯ ಹಾಗೂ ಸಂದೇಹವನ್ನು ನಿವಾರಿಸಿ; ಕೊರೋನಾ ಬಗ್ಗೆ ಭಯಪಡದೆ, ಮುನ್ನೆಚ್ಚರಿಕೆವಹಿಸಿ ಬದುಕು ಕಟ್ಟಿಕೊಳ್ಳಲು ಅವಕಾಶ ಕಲ್ಪಿಸಿಕೊಡಬೇಕಾದ್ದು ಸರಕಾರದ ಜವಾಬ್ದಾರಿ.

Latest News

Related Posts