
ತಾಲೂಕಿನಾದ್ಯಂತ ಕಳೆದ ಮೂರ್ನಾಲ್ಕು ದಿನಗಳಿಂದ ವ್ಯಾಪಕ ಗಾಳಿ ಮಳೆಯಿಂದಾಗಿ ತಾಲೂಕಿನ ಕಣಿಯೂರು ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಕೆಲವು ಗ್ರಾಮಗಳಲ್ಲಿ ವ್ಯಾಪಕ ಹಾನಿಯುಂಟಾಗಿದ್ದು , ಈ ಪ್ರದೇಶಗಳಿಗೆ ಕರ್ನಾಟಕ ವಿಧಾನ ಪರಿಷತ್ ಶಾಸಕ ಕೆ.ಹರೀಶ್ ಕುಮಾರ್ ಇಂದು ಭೇಟಿ ನೀಡಿದರು. ಈ ಭೇಟಿಯ ಸಂದರ್ಭ ಹರೀಶ್ ಕುಮಾರರೊಂದಿಗಿದ್ದ ಸಾಕಷ್ಟು ಕಾರ್ಯಕರ್ತರು ಮಾಸ್ಕ್ ಧರಿಸದೇ, ವೈಯಕ್ತಿಕ ಅಂತರ ಕಾಪಾಡದೇ, ಅಪಾಯವನ್ನು ಆಹ್ವಾನಿಸುವಂತೆ ಭಾಗವಹಿಸಿದ್ದರು. ನಾಡಿನ ಜನಪ್ರತಿನಿಧಿಗಳಾದವರು ತಾವು ಮಾಸ್ಕ್ ಧರಿಸುವುದರ ಜೊತೆಗೆ ಸರಿಯಾಗಿ ಮಾಸ್ಕ್ ಧರಿಸದವರಿಂದ ವೈಯಕ್ತಿಕ ಅಂತರ ಕಾಪಾಡದೇ ಕಾರ್ಯಕ್ರಮದಲ್ಲಿ ಭಾಗವಹಿಸಿದರೆ; ಕೊರೋನಾ ಸೋಂಕಿನ ವಿರುದ್ಧದ ಮುಂಜಾಗ್ರತಾ ಕ್ರಮದ ವಿಚಾರದಲ್ಲಿ ಸಮಾಜಕ್ಕೆ ತಪ್ಪು ಸಂದೇಶ ರವಾನಿಸುವುದರ ಜೊತೆಗೆ ತಾವೂ ಅಪಾಯವನ್ನು ಮೈಮೇಲೆ ಎಳೆದುಕೊಂಡಂತಾಗಬಹುದು.
ಕಣಿಯೂರು ಗ್ರಾಮದ ಪುದ್ದೊಟ್ಟು ಎಂಬಲ್ಲಿ ದಲಿತ ಸಮುದಾಯದ ಮನೆಗಳ ಸಿಮೆಂಟ್ ಶೀಟುಗಳು ಬಾರಿ ಗಾಳಿಗೆ ಹಾರಿ ಹೋಗಿದ್ದವು. ಮತ್ತೆ ಹೊಸ ಶೀಟುಗಳನ್ನು ಅಳವಡಿಸಿದರೂ ಆ ಬಳಿಕ ಬೀಸಿದ ಗಾಳಿಗೆ ಮತ್ತೊಮ್ಮೆ ಶೀಟುಗಳು ಹಾರಿ ಹೋಗಿ ವ್ಯಾಪಕ ಹಾನಿ ಉಂಟಾಗಿತ್ತು. ಕಣಿಯೂರು ಗ್ರಾಮದ ಪದ್ಮುಂಜ , ಶುಂಠಿಪಲ್ಕೆ , ಬಂದಾರು ಗ್ರಾಮದ ಮೈರೋಳ್ತಡ್ಕ , ಬಟ್ಲಾಡ್ಕ, ಉರುವಾಲು ಗ್ರಾಮದ ಉರುವಾಲುಪದವು ಮೊದಲಾದ ಪ್ರದೇಶಗಳಲ್ಲಿ ಗಾಳಿಮಳೆಗೆ ಅಡಿಕೆ, ತೆಂಗು, ಬಾಳೆ ಸೇರಿದಂತೆ ವ್ಯಾಪಕ ಕೃಷಿ ಹಾನಿಯಾಗಿದೆ. ಬಾರಿ ಗಾತ್ರದ ಮರಗಳು ಧರೆಗುರುಳಿ ವಿದ್ಯುತ್ ಕಂಬಗಳು ತುಂಡಾಗಿ ಬಿದ್ದು ವಿದ್ಯುತ್ ಪೂರೈಕೆ ಕಡಿತಗೊಂಡಿತ್ತು. ಬಂದಾರು ಹಿ.ಪ್ರಾ.ಶಾಲೆಯ ಮೇಲ್ಚಾವಣಿಯ ಸಾವಿರಾರು ಹಂಚುಗಳು ಹಾರಿ ಹೋಗಿ ವ್ಯಾಪಕ ನಷ್ಟ ಉಂಟಾಗಿತ್ತು. ಈ ಪ್ರದೇಶಗಳಿಗೆ ಇಂದು ವಿಧಾನ ಪರಿಷತ್ ಶಾಸಕ ಹರೀಶ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಹಾನಿಗೊಳಗಾದ ಮನೆಯ ಯಜಮಾನರಿಗೆ ಸಾಂತ್ವನ ಹೇಳುವ ಮೂಲಕ ವೈಯಕ್ತಿಕ ಆರ್ಥಿಕ ಸಹಾಯಧನದ ಜೊತೆಗೆ ಆಹಾರ ಕಿಟ್ ಗಳನ್ನು ನೀಡಿದರು.
ಈ ಸಂದರ್ಭದಲ್ಲಿ ಸ್ಥಳದಿಂದಲೇ ತಹಶೀಲ್ದಾರ್ ಗಣಪತಿ ಶಾಸ್ತ್ರಿ ಅವರಿಗೆ ದೂರವಾಣಿ ಮೂಲಕ ಮಾತನಾಡಿದ ಹರೀಶ್ ಕುಮಾರ್ , ಹಾನಿಗೊಳಗಾದ ಮನೆಗಳಿಗೆ ಶೀಘ್ರವಾಗಿ ಪ್ರಕೃತಿ ವಿಕೋಪ ಯೋಜನೆಯಡಿ ಸಹಾಯಧನ ಕೊಡಿಸುವಂತೆ ಆದೇಶಿಸಿದರು. ಜಿ.ಪಂ.ಇಂಜಿನಿಯರಿಂಗ್ ಉಪ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಚೆನ್ನಪ್ಪ ಮೊಯಿಲಿ ಅವರ ಜೊತೆಗೆ ಮಾತನಾಡಿ ತಕ್ಷಣ ನಷ್ಟದ ಎಸ್ಟಿಮೆಂಟ್ ತಯಾರಿಸಲು ಸೂಚಿಸಿದರು. ಮೆಸ್ಕಾಂ ಕಾರ್ಯಪಾಲಕ ಇಂಜಿನಿಯರ್ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗೂ ದೂರವಾಣಿ ಮೂಲಕ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದರು. ಕೊರೋನಾ ಲಾಕ್ ಡೌನ್ ನಿಂದಾಗಿ ಮೊದಲೇ ಸಂಕಷ್ಟದಿಂದಿದ್ದ ಕುಟುಂಬಗಳಿಗೆ ಗಾಳಿಮಳೆಯ ವ್ಯಾಪಕ ಹಾನಿ ಮತ್ತೊಂದು ಸಂಕಷ್ಟಕ್ಕೆ ಒಳಗಾಗಿಸಿದೆ. ಈ ಹಾನಿಯ ಬಗ್ಗೆ ಸಂಬಂಧಿಸಿದ ಇಲಾಖೆಗಳ ವರದಿ ಆಧಾರಿಸಿ ಹೆಚ್ಚಿನ ಪರಿಹಾರ ನಿಧಿಗಾಗಿ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ಬರವಸೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಕೆ.ಕೆ ಶಾಹುಲ್ ಹಮೀದ್ , ಬ್ಲಾಕ್ ಕಾಂಗ್ರೆಸ್ (ನಗರ) ಅಧ್ಯಕ್ಷ ಕೆ. ಶೈಲೇಶ್ ಕುಮಾರ್ , ಯುವ ಕಾಂಗ್ರೆಸ್ ಅಧ್ಯಕ್ಷ ಅಭಿನಂದನ್ ಹರೀಶ್ ಕುಮಾರ್ , ಕಾಂಗ್ರೆಸ್ ಎಸ್ಸಿ ಘಟಕದ ಅಧ್ಯಕ್ಷ ಹಾಗೂ ದಸಂಸ (ಅಂಬೇಡ್ಕರ್ ವಾದ)ದ ಮೈಸೂರು ವಿಭಾಗ ಸಂಘಟನಾ ಸಂಚಾಲಕ ಬಿ.ಕೆ ವಸಂತ್ , ದಸಂಸ (ಅಂಬೇಡ್ಕರ್ ವಾದ) ದ ತಾಲೂಕು ಖಜಾಂಚಿ ಬಿ.ಕೆ ಶೇಖರ್ ಕಣಿಯೂರು , ಮುಖಂಡ ಗಣೇಶ್ ಕಣಿಯೂರು , ಕಣಿಯೂರು ಗ್ರಾಮ ಪಂಚಾಯತ್ ಸದಸ್ಯ ಯಶೋಧರ ಶೆಟ್ಟಿ , ಸೀತಾರಾಮ್ ಮಡಿವಾಳ್ ಮೊದಲಾದವರು ಉಪಸ್ಥಿತರಿದ್ದರು.






