ಗೇರುಕಟ್ಟೆ: 94ಸಿ ಮನೆ ನಿವೇಶನ ಹಕ್ಕುಪತ್ರ ನೀಡಲು ಗ್ರಾಮ ಪಂಚಾಯತ್‌ನ ದೃಢೀಕರಣ ಅಗತ್ಯವಿದ್ದು, ಈ ದೃಢೀಕರಣ ನೀಡಲು ಗ್ರಾಮ ಪಂಚಾಯತ್‌ನಲ್ಲಿ ಅವ್ಯವಹಾರ-ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ, ಕಳಿಯ ಗ್ರಾಮದ ಪರಪ್ಪು ನಿವಾಸಿ ಆದಂ ಶಾಫಿ ಎಂಬವರು ಮಂಗಳೂರಿನ ಎಸಿಬಿಗೆ ದೂರು ನೀಡಿದ್ದು, ದೂರು ಸ್ವೀಕರಿಸಿದ ಎಸಿಬಿ ಅಧಿಕಾರಿಗಳು ಜುಲೈ 4ರಂದು ಕಳಿಯ ಗ್ರಾಮ ಪಂಚಾಯತ್ ಕಛೇರಿಗೆ ದಾಳಿ ನಡೆಸಿ ದಾಖಲೆಗಳ ಪರಿಶೀಲನೆಗೆ ಮುಂದಾಗಿದ್ದಾರೆ.
ಸುಮಾರು 40ಮಂದಿ ಫಲಾನುಭವಿಗಳಿಗೆ 94ಸಿ ಯೋಜನೆಯಡಿ ಹಕ್ಕುಪತ್ರ ನೀಡಲು ಪಂಚಾಯತ್‌ನಲ್ಲಿ ಅವ್ಯವಹಾರ ನಡೆಸಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದ್ದು; ದೂರಿನಲ್ಲಿ ಕಳಿಯ ಗ್ರಾಮ ಪಂಚಾಯತ್ ಸದಸ್ಯ ಅಬ್ದುಲ್ ಕರೀಂರ ಮೇಲೆ ಭ್ರಷ್ಟಾಚಾರದ ಆರೋಪ ಹೊರಿಸಲಾಗಿದೆ. ಈ ಮಧ್ಯೆ ಅಬ್ದುಲ್ ಕರೀಂ ಹಾಗೂ ದೂರುದಾರ ಆದಂ ಶಾಫಿ ನಡುವಿನ ಹಳೆಯ ಹಗೆತನವೇ ಆದಂ ಶಾಫಿ ದೂರು ನೀಡಲು ಕಾರಣ ಎಂಬ ಆರೋಪವೂ ಸ್ಥಳೀಯರಿಂದ ಕೇಳಿ ಬರುತ್ತಿದೆ. ಎಲ್ಲದಕ್ಕೂ ಎಸಿಬಿ ತನಿಖೆ ಉತ್ತರ ನೀಡಲಿದೆ.







