ಬೆಳ್ತಂಗಡಿ: ಕೊರೋನಾ ಸೋಂಕು ಹರಡದಂತೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಮನೆಮನೆಗಳಿಗೆ ತೆರಳಿ ಜಾಗೃತಿ ಮೂಡಿಸುವುದರ ಜೊತೆಗೆ ಪರಿಸರದಲ್ಲಿ ಆರೋಗ್ಯ ಜಾಗೃತಿ ಮೂಡಿಸುವ ಸಂಕಷ್ಟದ ಸಮಯದ ಸವಾಲಿನ ಕೆಲಸವನ್ನು ನಿಭಾಯಿಸುತ್ತಿರುವ ನಡ, ಲಾಯ್ಲ, ಸವಣಾಲು ಹಾಗೂ ಮುಂಡೂರು ಗ್ರಾಮಗಳ 12 ಮಂದಿ ಆಶಾ ಕಾರ್ಯಕರ್ತೆಯರ ಕರ್ತವ್ಯಕ್ಕೆ ಗೌರವ ಸಲ್ಲಿಸಿ ಪ್ರತಿಯೊಬ್ಬರಿಗೆ 2,000ರೂಪಾಯಿ ಪ್ರೋತ್ಸಾಹಧನ ನೀಡುವ ಕಾರ್ಯಕ್ರಮವು ಬೆಳ್ತಂಗಡಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವತಿಯಿಂದ ಜೂನ್ 30ರಂದು ಸಂಘದ ವಠಾರದಲ್ಲಿ ಸಂಘದ ಅಧ್ಯಕ್ಷ ಮುನಿರಾಜ ಅಜ್ರಿಯವರ ನೇತೃತ್ವದಲ್ಲಿ ನಡೆಯಿತು.
ಲಾಕ್ಡೌನ್ ಸಂದರ್ಭದಲ್ಲಿ ಸಂಘದ ಆರ್ಥಿಕ ಚಟುವಟಿಕೆಗೆ ಪೂರಕವಾಗಿ ಶ್ರಮಿಸಿದ ಸಂಘದ ದೈನಿಕ ಠೇವಣಿ ಸಂಗ್ರಾಹಕರಾಗಿ ದುಡಿಯುತ್ತಿರುವ 7ಮಂದಿಗೆ ಸಂಗ್ರಹವಾದ ಮೊತ್ತದ 2%ದಂತೆ ಒಟ್ಟು ರೂಪಾಯಿ 2,45,000ವನ್ನು ಪ್ರೋತ್ಸಾಹಧನವಾಗಿ ನೀಡಲಾಯಿತು. ಸಂಘದ ಉಪಾಧ್ಯಕ್ಷರು, ನಿರ್ದೇಶಕರು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಸಿಬ್ಬಂದಿವರ್ಗದವರು ಈ ಸಂದರ್ಭದಲ್ಲಿ ಹಾಜರಿದ್ದರು.







