ಬೈಕ್ ಕಳ್ಳರು ಪೊಲೀಸ್ ಬಲೆಗೆ

ಬೈಕ್ ಕಳ್ಳರು ಪೊಲೀಸ್ ಬಲೆಗೆ
Facebook
Twitter
LinkedIn
WhatsApp

ಬೆಳ್ತಂಗಡಿ : ಬೆಳ್ತಂಗಡಿ ಪರಿಸರದಲ್ಲಿ ಕಳೆದ ನಾಲ್ಕಾರು ತಿಂಗಳಿಂದ ನಿರಂತರವಾಗಿ ಬೈಕ್ ಕಳವು ಪ್ರಕರಣ ದಾಖಲಾಗುತ್ತಿದ್ದುದು ಬೆಳ್ತಂಗಡಿ ಪೊಲೀಸರ ನಿದ್ದೆ ಕೆಡಿಸಿತ್ತು. ಬೈಕ್ ಕಳ್ಳರನ್ನು ಪತ್ತೆಹಚ್ಚಿ ಕಾನೂನಿನ ಬೇಡಿ ತೊಡಿಸಲು ಸಂಚು ರೂಪಿಸುತ್ತಿದ್ದ ಬೆಳ್ತಂಗಡಿ ಪೊಲೀಸ್ ಠಾಣೆಯ ಸಬ್‌ಇನ್ಸ್ಪೆಕ್ಟರ್ ನಂದಕುಮಾರ್ ಎಂ. ಎಂ. ತನ್ನ ಠಾಣೆಯ ಸಿಬ್ಬಂದಿಯವರೊಂದಿಗೆ ಜುಲೈ 4ರಂದು ಜೈನ್ ಪೇಟೆ ಬಳಿ ವಾಹನ ತಪಾಸಣೆ ನಡೆಸುತ್ತಿದ್ದಾಗ, ಎರಡು ಬೈಕಲ್ಲಿ ಬಂದ ಮೂವರನ್ನು ತಡೆದು ನಿಲ್ಲಿಸಿ ಪರಿಶೀಲಿಸಿ ವಿಚಾರಣೆಗೊಳಪಡಿಸಿದರು. ಈ ಬೈಕ್‌ಗಳ ದಾಖಲೆ ಪರಿಶೀಲಿಸಿದಾಗ ಇದು ಇತ್ತೀಚೆಗೆ ಬೆಳ್ತಂಗಡಿ ಎಸ್. ಡಿ. ಎಂ ಕಲಾ ಭವನದ ಮುಂಭಾಗದ ಮನೆಯಿಂದ ಮತ್ತು ಮೂಡಬಿದಿರೆ ಠಾಣಾ ವ್ಯಾಪ್ತಿಯಿಂದ ಕಳವು ಮಾಡಿರುವ ಬೈಕ್ ಎಂಬ ಸತ್ಯ ಬಯಲಾಯಿತು.
ಶಂಕಿತ ಯುವಕರನ್ನು ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆಗೊಳಪಡಿಸಿದಾಗ ತಾಲೂಕಿನಲ್ಲಿ ಕಳೆದ ನಾಲ್ಕಾರು ತಿಂಗಳುಗಳಿಂದ ನಡೆದ ಬೈಕ್ ಕಳ್ಳತನ ಪ್ರಕರಣಗಳ ಸತ್ಯ ಹೊರಬಿತ್ತು.ಕಳವು ಪ್ರಕರಣದಲ್ಲಿ ಈ ಮೂವರ ಪಾರ್ಟ್‌ನರ್ ಆಗಿದ್ದ ಉಜಿರೆ ಕುಂಟಿನಿ ನಿವಾಸಿಗಳಾದ ಮೋಹನ ಯಾನೆ ಪುಟ್ಟ (21) ಕುಂಟಿನಿ ಹಾಗೂ ನಿತಿನ್ ಕುಮಾರ್ (22) ಕುಂಟಿನಿ ಯವರನ್ನು ಪೊಲೀಸ್ ಠಾಣೆಗೆ ಕರೆತಂದು ವಿಚಾರಿಸಿದಾಗ ಕಳವುಗೈದ ಇನ್ನೆರಡು ಬೈಕ್ ಪತ್ತೆಯಾಯಿತು.
ಉಳಿದ ಆರೋಪಿಗಳನ್ನು ವಿಜಯ ಯಾನೆ ಆಂಜನೇಯ (23) ಕಾನ ಸುರತ್ಕಲ್, ಪ್ರದೀಪ್ ಯಾನೆ ಚೇತನ್ (27) ಉಳಾಯಿಬೆಟ್ಟು ಮಂಗಳೂರು ಹಾಗೂ ಸುದೀಶ್ ಕೆ.ಕೆ. ಯಾನೆ ಮುನ್ನ (20) ಬಾಳೆಪುಣಿ ಪೂಪಾಡಿಕಲ್ಲು ಬಂಟ್ವಾಳ ಎಂದು ಗುರುತಿಸಲಾಗಿದೆ. ಆರೋಪಿಗಳಿಂದ ಕಳವುಗೈದ 4 ಬೈಕ್, ಕಳವಿಗೆ ಬಳಸಿದ ಓಮ್ನಿ ಕಾರು ಸೇರಿ ಅಂದಾಜು 3,63,000 ರೂಪಾಯಿ ಮೌಲ್ಯದ ಸೊತ್ತುಗಳನ್ನು ಮುಟ್ಟುಗೋಲು ಹಾಕಿಕೊಂಡ ಪೊಲೀಸರು ಪ್ರಕರಣ ದಾಖಲಿಸಿ, ಆರೋಪಿಗಳನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

Latest News

Related Posts