ಆಡಳಿತ ವ್ಯವಸ್ಥೆ ಗುಲಾಮಗಿರಿಯತ್ತ!

ಬೆಳ್ತಂಗಡಿ ತಾಲೂಕಿನಲ್ಲಿ ಹೆಚ್ಚಿದ ಕೊರೋನಾ ಭೀತಿ
Facebook
Twitter
LinkedIn
WhatsApp

ಸೀಲ್‌ಡೌನ್-ಕ್ವಾರಂಟೈನ್ ನಿಯಮ ಗಾಳಿಗೆ; ಇಲ್ಲಿ ಕೊರೋನಾ ಮುಕ್ತಮುಕ್ತ

ಬೆಳ್ತಂಗಡಿ ತಾಲೂಕಿನಲ್ಲಿ ಆಡಳಿತ ವ್ಯವಸ್ಥೆ ಸಿರಿವಂತರ ಗುಲಾಮನಂತೆ ಕೆಲಸ ಮಾಡುತ್ತಿದೆ. ಕೊರೋನಾ ಸೋಂಕು ತಾಲೂಕಿನಲ್ಲಿ ಕೇಕೆ ಹಾಕಿ ಮೆರೆಯಲಾರಂಭಿಸಿದರೂ, ಇಲ್ಲಿ ಮುಂಜಾಗ್ರತಾ ಕ್ರಮಗಳಾದ ಯಾವುದೇ ಸೀಲ್‌ಡೌನ್ ಅಥವಾ ಕ್ವಾರಂಟೈನ್ ನಿಯಮಗಳ ಪಾಲನೆ ಕಟ್ಟುನಿಟ್ಟಾಗಿ ಪಾಲನೆಯಾಗುತ್ತಿಲ್ಲ. ಉಳ್ಳವರ ಪ್ರಭಾವಕ್ಕೆ ದಾಸರಾದ ತಾಲೂಕು ಆಡಳಿತ ವ್ಯವಸ್ಥೆ; ಕೊರೋನಾ ಸೋಂಕನ್ನು ಡೆಂಗ್ಯೂ ಎಂದು ಬದಲಿಸಿ, ಸೋಂಕಿತೆ ಕೆಲಸ ಮಾಡುತ್ತಿದ್ದ ಪೆಟ್ರೋಲ್ ಬಂಕನ್ನು ಓಪನ್ ಮಾಡಿದರೂ ಬಂಕ್ ಮಾಲೀಕರ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಳ್ಳಲಾಗದೇ, ಕೈಕಟ್ಟಿ ಕುಳಿತಿದೆ. ಇದು ಕಳೆದ ವಾರ ಉಜಿರೆಯ ಪೆಟ್ರೋಲ್ ಬಂಕಲ್ಲಿ ಪತ್ತೆಯಾದ ಕೊರೋನಾ ಸೋಂಕು ಪ್ರಕರಣವನ್ನು ಡೆಂಗ್ಯೂ ಎಂದು ಬದಲಾಯಿಸಿದ ವ್ಯಥೆಯ ಕಥೆ.
ಅಲ್ಲಾ, ಕೊರೋನಾ ಸೋಂಕು ಪತ್ತೆಗೆ ಗಂಟಲ ದ್ರವದ ಪರೀಕ್ಷೆ ನಡೆಸೋದು; ಡೆಂಗ್ಯೂ ಪತ್ತೆಗೆ ರಕ್ತ ಪರೀಕ್ಷೆ ನಡೆಸೋದು ಎಂಬ ಸಾಮಾನ್ಯ ಜ್ಞಾನವೂ ಈ ಪೆಟ್ರೋಲ್ ಬಂಕ್ ಮಾಲೀಕರಿಗೆ ಇದ್ದಂತಿಲ್ಲ. ಇವರ ಮಾತನ್ನು ನಂಬಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ನಡೆಸಿ, ಇವರ ರಕ್ಷಣೆಗೆ ನಿಲ್ಲುವ‌ ಮನೆಹಾಳರಿಗೂ ನಮ್ಮಲ್ಲಿ ಕೊರತೆ ಇಲ್ಲ. ಅಂತೂ ಇಲ್ಲಿ ಮಹಿಳಾ ಸಿಬ್ಬಂದಿಗೆ ಕೊರೋನಾ ಸೋಂಕು ಪತ್ತೆಯಾದ ಎರಡು ದಿನಗಳಲ್ಲೇ ‘ಅದು ಕೊರೋನಾ ಅಲ್ಲ, ಡೆಂಗ್ಯೂ’ ಎಂದು ಯಶಸ್ವೀ ಪ್ರಚಾರ ನಡೆಸಿದ ಬಂಕ್ ಮಾಲೀಕರು ಆಡಳಿತದ ಮೇಲೆ ತಮ್ಮ ಪ್ರಭಾವ ಬೀರಿ ಎರಡೇ ದಿನಗಳಲ್ಲಿ ಬಂಕ್‌ಗೆ ಹಾಕಲಾಗಿದ್ದ ಸೀಲ್‌ಡೌನನ್ನು ತೆರವುಗೊಳಿಸಿ ವ್ಯಾಪಾರ ಆರಂಭಿಸಿದ್ದರು.
ಇದೀಗ ಇಲ್ಲಿ ಕೆಲಸ ಮಾಡುತ್ತಿದ್ದ ಇನ್ನೋರ್ವ ವ್ಯಕ್ತಿಗೆ ಇಂದು (ಜುಲೈ6) ಕೊರೋನಾ ಪಾಸಿಟಿವ್ ಬಂದಿದೆ. ಇನ್ನಾದರೂ ತಾಲೂಕು ಆಡಳಿತ ಗುಲಾಮಗಿರಿಯಿಂದ ಮುಕ್ತವಾಗಿ ಉಜಿರೆಯ ಕೊರೋನಾ ಹಾಟ್‌ಸ್ಪಾಟ್ ಆಗುತ್ತಿರುವ ಪೆಟ್ರೋಲ್ ಬಂಕನ್ನು ಸೀಲ್‌ಡೌನ್ ಮಾಡಿ, ನಾಗರಿಕರ ಮನದಲ್ಲಿ ಧೈರ್ಯ ತುಂಬಿಯಾರೇ…. ಅಥವಾ ‘ಈ ಹಿಂದಿನ ಕೊರೋನಾ ಸೋಂಕಿತೆಗೆ ಡೆಂಗ್ಯೂ; ಈಗಿನ ಸೋಂಕಿತನಿಗೆ ಪೆಂಗ್ಯೂ’ ಎಂದು ಪುಂಗಿ ಊದುವ ಪೆಟ್ರೋಲ್ ಬಂಕ್ ಮಾಲೀಕರ ಮಾತನ್ನು ಒಪ್ಪಿ, ತಾಲೂಕಲ್ಲಿ ಮುಕ್ತಮುಕ್ತ ಕೊರೋನಾ ಹರಡಲು ಮುನ್ನುಡಿ ಬರೆಯುವರೇ ಎಂಬುದಕ್ಕೆ ಮುಂದಿನ ನಾಲ್ಕಾರು ಗಂಟೆಗಳಲ್ಲಿ ಉತ್ತರ ಸಿಗಲಿದೆ.

Latest News

Related Posts