ಗಾಂಧಿ ಮಾರ್ಗಕ್ಕೆ ಜೈ ಎಂದ ಜಗದೀಶ್
ಬೆಳ್ತಂಗಡಿ: ಕೊರೋನಾ, ಡೆಂಗ್ಯೂನಂತಹ ಸಾಂಕ್ರಾಮಿಕ ರೋಗಗಳು ಹರಡುತ್ತಿದೆ, ಮುಂಜಾಗ್ರತೆ ಕೈಗೊಳ್ಳಿ ಎಂದು ಜನಸಾಮಾನ್ಯರಿಗೆ ಕರೆ ನೀಡಿ ಪೋಸ್ ಕೊಡುವ ಸಾಕಷ್ಟು ಜನಪ್ರತಿನಿಧಿಗಳ ಎದುರು ಬೆಳ್ತಂಗಡಿ ಪಟ್ಟಣ ಪಂಚಾಯತ್ನ ಚುನಾಯಿತ ಸದಸ್ಯ ಜಗದೀಶ್ ತನ್ನ ಕಾರ್ಯಶೈಲಿಯ ಮೂಲಕ ಭಿನ್ನವಾಗಿ ಕಾಣುತ್ತಾರೆ.

ಡೆಂಗ್ಯೂ, ಕೊರೋನಾದಂತಹ ಕಾಯಿಲೆಗಳಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಪರಿಸರ ಸ್ವಚ್ಛವಾಗಿರಿಸುವುದರ ಜೊತೆಗೆ ರೋಗ ಹರಡುವ ಸೊಳ್ಳೆ ಉತ್ಪತ್ತಿಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಆದರೆ ನಮ್ಮ ರಾಜ್ಯ ಸರಕಾರದಲ್ಲಿ ಜನತೆಯ ಸುರಕ್ಷತೆಗೆ ಮುಂಜಾಗ್ರತೆ ವಹಿಸಲು ಹಣವಿಲ್ಲ. ಪಟ್ಟಣ ಪಂಚಾಯತ್ಗೆ ರಸ್ತೆ ಹಾಗೂ ಚರಂಡಿ ಶುಚಿತ್ವಕ್ಕೂ ಅನುದಾನವಿಲ್ಲ. ಇಂತಹ ಸಂದರ್ಭದಲ್ಲಿ ಬೆಳ್ತಂಗಡಿ ಪಟ್ಟಣ ಪಂಚಾಯತ್ ಸದಸ್ಯ ಜಗದೀಶ್ ತಾನೇ ಸ್ವತಹ ಸ್ನೇಹಿತರಾದ ಸುದೆಮುಗೇರಿನ ಸುರೇಶ, ಸತೀಶರೊಂದಿಗೆ ಸೇರಿ ಸುದೆಮುಗೇರು ಅಂಗನವಾಡಿಯಿಂದ ಮಸೀದಿ ರಸ್ತೆಯವರೆಗೆ ರಸ್ತೆ ಬದಿಯ ಚರಂಡಿ ಸ್ವಚ್ಛಗೊಳಿಸಿದರು. ಮಾತ್ರವಲ್ಲ, ಸುದೆಮುಗೇರು ಹುಡ್ಕೊ ರಸ್ತೆಯಿಂದ ಹುಣ್ಸೆಕಟ್ಟೆ ಪಲ್ಕೆಯವರೆಗಿನ ಕಾಲುದಾರಿಯ ಬದಿಯಲ್ಲಿದ್ದ ಗಿಡಗಂಟಿಗಳನ್ನು ತೆಗೆದು ಶುಚಿಗೊಳಿಸಿದರು. ಆ ಮೂಲಕ ಸ್ನೇಹಿತರೊಂದಿಗೆ ಸೇರಿ, ಯಾವುದೇ ಪ್ರಚಾರವಿಲ್ಲದೇ ಗಾಂಧಿ ಮಾರ್ಗದಲ್ಲಿ ಬೆಳ್ತಂಗಡಿ ಪಟ್ಟಣ ಪಂಚಾಯತ್ನ ಚುನಾಯಿತ ಸದಸ್ಯ ಜಗದೀಶ್ ಅತೀ ಅಗತ್ಯ ಅನುದಾನವನ್ನೂ ಬಿಡುಗಡೆ ಮಾಡದೇ ಕೇವಲ ಭಾಷಣದಲ್ಲೇ ಕಾಲಹರಣ ಮಾಡುವ ರಾಜ್ಯ ಸರಕಾರದ ವಿರುದ್ಧ ವಿನೂತನವಾಗಿ ಪ್ರತಿಭಟಿಸಿ, ಗಮನ ಸೆಳೆದರು.







