ಧರ್ಮಸ್ಥಳದಲ್ಲಿ ಅಕ್ರಮ ಗೋಸಾಗಾಟ ಪತ್ತೆ
ಬೆಳ್ತಂಗಡಿ: ಜುಲೈ 28ರ ರಾತ್ರಿ ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ಬಳಿ ಈಚರ್ ವಾಹನದಲ್ಲಿ ಅಕ್ರಮವಾಗಿ ಗೋಸಾಗಾಟ ಮಾಡುತ್ತಿರುವುದನ್ನು ಪತ್ತೆಹಚ್ಚಿದ ಸ್ಥಳೀಯ ಭಜರಂಗದಳದ ಯುವಕರು; ವಾಹನವನ್ನು ತಡೆದು ನಿಲ್ಲಿಸಿ, ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಬೆಳ್ತಂಗಡಿ ಪೊಲೀಸ್ ಠಾಣಾ ಸಬ್‌ಇನ್ಸ್‌ಪೆಕ್ಟರ್ ನಂದಕುಮಾರ್ ಹಾಗೂ ಧರ್ಮಸ್ಥಳ ಪೊಲೀಸ್ ಠಾಣಾ ಸಬ್‌ಇನ್ಸ್‌ಪೆಕ್ಟರ್ ಪವನ್ ಕುಮಾರ್ ಅಕ್ರಮ ಗೋಸಾಗಾಟಗಾರರನ್ನು ಬಂಧಿಸಿ, ಈಚರ್ ವಾಹನ ಸಹಿತ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 9 ಜಾನುವಾರುಗಳನ್ನು ಮುಟ್ಟುಗೋಲು ಹಾಕಿದ್ದಾರೆ. ಪ್ರಕರಣದ ಮೂರು ಮಂದಿ ಆರೋಪಿಗಳನ್ನು ಹಾಗೂ ಮುಟ್ಟುಗೋಲು ಹಾಕಲಾದ ಸೊತ್ತುಗಳನ್ನು ಧರ್ಮಸ್ಥಳ ಪೊಲೀಸ್ ಠಾಣಾ ವಶಕ್ಕೆ ನೀಡಲಾಗಿದ್ದು; ಗೋವುಗಳನ್ನು ಎಲ್ಲಿಗೆ ಸಾಗಿಸಲಾಗುತ್ತಿತ್ತು, ಕದ್ದ ಗೋವುಗಳೇ ಅಥವಾ ಖರೀದಿಸಿದ ಗೋವುಗಳೇ ಎಂಬ ಬಗ್ಗೆ ತನಿಖೆ ಮುಂದುವರಿದಿದೆ.

ಬೆಳ್ತಂಗಡಿ ತಾಲೂಕಿನಲ್ಲಿ ಇತ್ತೀಚಿನ ದಿನಗಳಲ್ಲಿ ಎಗ್ಗಿಲ್ಲದೇ ಅಕ್ರಮ ಗೋಸಾಗಾಟ ನಡೆಯುತ್ತಿದ್ದು; ಪೊಲೀಸರಿಗೆ ದೊಡ್ಡ ತಲೆನೋವಾಗಿ ಕಾಡುತ್ತಿದೆ. ತಾಲೂಕಿನ ಭಜರಂಗಿ ಯುವಕರಂತೂ ಛಲ ಬಿಡದ ತ್ರಿವಿಕ್ರಮನಂತೆ ಕಾದು ಕುಳಿತು ಇಂತಹ ಅಕ್ರಮ ಗೋಸಾಗಾಟವನ್ನು ಪತ್ತೆಹಚ್ಚಿ ತಡೆದು, ಪೊಲೀಸರ ವಶಕ್ಕೆ ಒಪ್ಪಿಸುವ ಕಾಯಕದಲ್ಲಿ ತೊಡಗಿದ್ದಾರೆ. ಗೋ ರಕ್ಷಣೆಯಲ್ಲಿ ಈ ಭಜರಂಗಿ ಯುವಕರ ಕಾರ್ಯ ಶ್ಲಾಘನೀಯವಾದರೂ, ಎಲ್ಲೂ ಯಾವತ್ತೂ ಕಾನೂನನ್ನು ಕೈಗೆ ತೆಗೆದುಕೊಂಡು ಅಕ್ರಮ ಗೋಸಾಗಾಟಗಾರರ ಮೇಲೆ ಹಲ್ಲೆ ನಡೆಸಿ ಹೊಸ ಸಮಸ್ಯೆ ಸೃಷ್ಟಿಸದಿರಲಿ ಎಂಬ ಆತಂಕ ಆಡಳಿತ ವ್ಯವಸ್ಥೆಯದ್ದು.






