ಸಂಪರ್ಕ ಕಡಿದುಕೊಳ್ಳುವ ಭೀತಿಯಲ್ಲಿ ದಿಡುಪೆಯ ಮಂದಿ
ಬೆಳ್ತಂಗಡಿ: ಆಗಸ್ಟ್ ತಿಂಗಳ 3 ಮತ್ತು 4ನೇ ತಾರೀಕಿನಂದು ಸುರಿದ ಭಾರೀ ಮಳೆಗೆ ಮಲವಂತಿಗೆ ಗ್ರಾಮದ
ದಿಡುಪೆಯ ಕಲ್ಬೆಟ್ಟು ಎಂಬಲ್ಲಿನ ನೇತ್ರಾವತಿ ಕಿನಾರೆಯ ಸೇತುವೆಯ ಸಂಪರ್ಕ ಕಡಿದುಹೋಗಿ ಅಪಾಯದ ಸ್ಥಿತಿ ನಿರ್ಮಾಣವಾಗಿದೆ. ನದಿಯ ಪ್ರವಾಹಕ್ಕೆ ಸೇತುವೆಯೂ ಹಾನಿಗೊಳಗಾಗಿದ್ದು ಜನರ ಹಾಗೂ ವಾಹನಗಳ ಓಡಾಟಕ್ಕೆ ಅನಾನುಕೂಲವಾಗಿದೆ. ಪರಿಸರದ ನಿವಾಸಿಗರು ಅದರಲ್ಲೂ ನಿತ್ಯ ಸೊಸೈಟಿಗೆ ಹಾಲು ಕೊಂಡೊಯ್ಯುವ ಹೈನುಗಾರರು ಹಾಗೂ ಕೃಷಿಕರು ಈ ರಸ್ತೆಯನ್ನೇ ಅವಲಂಬಿಸಿದ್ದು, ಇದೀಗ ಸೇತುವೆ ಸಂಪರ್ಕ ಕಳೆದುಕೊಂಡದ್ದು ಮಾತ್ರವಲ್ಲದೇ, ಸೇತುವೆಯೇ ಅಪಾಯಕಾರಿ ಸ್ಥಿತಿಯಲ್ಲಿರುವುದು ಇವರನ್ನೆಲ್ಲಾ ಆತಂಕಕ್ಕೆ ದೂಡಿದೆ.


ಸುಮಾರು 100 ರಿಂದ 150ಕ್ಕೂ ಅಧಿಕ ಕುಟುಂಬದ ಸದಸ್ಯರಿಗೆ ಕೊಲ್ಲಿ ದೇವಸ್ಥಾನದಿಂದ ದಿಡುಪೆಗೆ ಸಂಪರ್ಕ ಕಲ್ಪಿಸುತ್ತಿರುವ ಈ ಸೇತುವೆ ಇಂದು ಮಳೆರಾಯನ ಆರ್ಭಟಕ್ಕೆ ಸಿಲುಕಿ ಸಂಪೂರ್ಣ ಅಪಾಯದಲ್ಲಿದೆ. ಇದೀಗ ರಸ್ತೆ ಸಂಪರ್ಕ ಕಡಿತಗೊಂಡಿರುವ ಸೇತುವೆಗೆ ಇನ್ನಷ್ಟು ಹಾನಿಯಾಗಿ ಊರೇ ದ್ವೀಪವಾಗುವ ಮುನ್ನ ಆಡಳಿತ ವ್ಯವಸ್ಥೆ ಎಚ್ಚೆತ್ತು, ಸಂಪರ್ಕ ರಸ್ತೆಯೊಂದಿಗೆ ಅಪಾಯದಂಚಿನಲ್ಲಿರುವ ಸೇತುವೆಯನ್ನೂ ದುರಸ್ಥಿಗೊಳಿಸಬೇಕಾಗಿದೆ.






