ಸ್ವಾತಂತ್ರ್ಯಕ್ಕಾಗಿ ನಡೆಸಿದ ಸಮರವು 1947 ಆಗಸ್ಟ್ 15 ರಂದು ಫಲ ನೀಡಿತು. ದೇಶದ ಆಡಳಿತವು ಭಾರತೀಯರ ವಶವಾದಾಗ ದೀರ್ಘವಾದ 200 ವರ್ಷಗಳ ಪರಕೀಯರ ವಂಚನಾತ್ಮಕ ಆಡಳಿತವು ಕೊನೆಗೊಂಡಿತು. ಅದರೊಂದಿಗೆ ನಾವು ಸ್ವತಂತ್ರರಾದೆವು. ಶತಮಾನಗಳ ಕಾಲ ವಿದೇಶಿಯರ ಸಾಮ್ರಾಜ್ಯಕ್ಕೆ ಅಂತ್ಯ ಹಾಡಿ, 1947 ಆಗಸ್ಟ್ 14 ರ ಮಧ್ಯರಾತ್ರಿ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಲಭಿಸಿತು. ನಮ್ಮ ರಾಷ್ಟ್ರ ನಾಯಕರ, ಸ್ವಾತಂತ್ರ್ಯ ಹೋರಾಟಗಾರರ ಆಗ್ರಹದಂತೆ, ನಮ್ಮ ದೇಶವು ಸರ್ವ ಧರ್ಮೀಯರ ಜಾತ್ಯತೀತ, ಪ್ರಜಾಪ್ರಭುತ್ವ ರಾಷ್ಟ್ರವಾಯಿತು.
ಭಾರತವು ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವ, ಜಾತ್ಯಾತೀತ ದೇಶವಾಗಿದೆ. ಜನರ ಮೂಲಕ ಜನರಿಗಾಗಿ ಜನರು ನಡೆಸಲ್ಪಡುವ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ಆದರೆ, ಸ್ವಾತಂತ್ರ್ಯ ಲಭಿಸಿದ ಮಾತ್ರಕ್ಕೆ ನಮ್ಮ ಉದ್ದೇಶ, ನಮ್ಮ ಗುರಿ ಪೂರ್ಣವಾಗಿಲ್ಲ. ನೀತಿ, ಸಹಬಾಳ್ವೆ, ಸಹೋದರತೆ, ಮಾನವೀಯತೆ ಮೊದಲಾದ ಗುಣಗಳು ಸ್ವಾತಂತ್ರ್ಯ ಸಮರ ಸೇನಾನಿಗಳ ಕನಸಾಗಿತ್ತು. ಈ ಗುರಿ ಮುಂದೆಯೂ ನಾವು ಸಾಧಿಸಬೇಕಾಗಿದೆ.
ಭಾರತ ಯಾವುದೇ ಒಂದು ನಿರ್ದಿಷ್ಟ ಧರ್ಮ, ಜನಾಂಗದ ಮಾತ್ರ ದೇಶವಲ್ಲ. ಭಾರತ ಜಾತ್ಯತೀತ ರಾಷ್ಟ್ರವಾಗಿದೆ. ಪ್ರತ್ಯೇಕವಾದ ಒಂದು ಧರ್ಮಕ್ಕೆ, ಜನಾಂಗಕ್ಕೆ ಸೀಮಿತವಾಗದೆ, ವಿವಿಧ ಧರ್ಮಗಳ ಜನಾಂಗದ ತೋಟವಾಗಿ, ವಿವಿಧತೆಯಲ್ಲಿ ಏಕತೆ ಸಾರುವುದು ಅದರ ಮುಖ ಮುದ್ರೆಯಾಗಿದೆ. ಮಹಾತ್ಮ ಗಾಂಧಿ, ಮೌಲಾನಾ ಮುಹಮ್ಮದ್ ಅಲೀ, ಶೌಕತ್ ಅಲೀ ಹಾಗೂ ಪಂಡಿತ್ ಜವಾಹರಲಾಲ್ ನೆಹರು ಮೊದಲಾದ ರಾಷ್ಟ್ರ ನಾಯಕರು ನೇತೃತ್ವ ನೀಡಿದ ಸ್ವಾತಂತ್ರ್ಯ ಸಮರದ ಫಲವಾಗಿತ್ತು ನಾವು ಪಡೆದ ಸ್ವಾತಂತ್ರ್ಯ.
ಸ್ವಾತಂತ್ರ್ಯ ಹೋರಾಟ ಅಂದರೆ ಒಂದೋ, ಎರಡೋ ದಿನಗಳ ಪ್ರಕ್ರಿಯೆ ಆಗಿರಲಿಲ್ಲ. ಬದಲಾಗಿ ದೇಶದ ನಾನಾ ಭಾಗಗಳಲ್ಲಿ, ವಿವಿಧ ಸಂದರ್ಭಗಳಲ್ಲಿ ಪ್ರಜ್ವಲಿಸಿದ ಅಗ್ನಿ ಜ್ವಾಲೆಗಳ ಸಮರವಾಗಿತ್ತು. ಬ್ರಿಟಿಷರೊಂದಿಗಿದ್ದ ಹಗೆತನವನ್ನು ಅತ್ಯಂತ ತಂತ್ರಪೂರ್ವವಾಗಿ, ಹೆಗಲಿಗೆ ಹೆಗಲು ಕೊಟ್ಟು, ಒಗ್ಗಟ್ಟಾಗಿ ಸೋಲಿಸಿದ ಹೋರಾಟವಾಗಿತ್ತು. ಆ ಸಮರದಲ್ಲಿ ಪಾಲ್ಗೊಂಡ ಧೀರ ದೇಶಾಭಿಮಾನಿಗಳು ದೇಶಕ್ಕಾಗಿ, ಶತ್ರು ಸೈನಿಕರ ಕೋವಿಗೆ ಎದೆಯೊಡ್ಡಿ, ನೇಣುಕಂಬದ ಉರುಳಿಗೆ ಕೊರಳೊಡ್ಡಿ ರಕ್ತ ಸಾಕ್ಷಿಗಳಾದರು. ಸ್ವಾತಂತ್ರ್ಯ ಸಮರ ಸೇನಾನಿಗಳು ಇಂದು ಕೂಡಾ ಗೌರವಿಸಲ್ಪಡುವುದು ಅವರ ಮಹತ್ವದಿಂದಾಗಿದೆ.
1921ರ ಮಲಬಾರ್ ಕಲಾಪವು ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧದ ಮಹಾ ಸಮರವಾಗಿತ್ತು. ಕ್ವಿಟ್ ಇಂಡಿಯಾ ಚಳುವಳಿ ಇದರಲ್ಲಿ ಪ್ರಧಾನ ಪಾತ್ರ ವಹಿಸಿತ್ತು. “ಬ್ರಿಟಿಷರು ಭಾರತ ಬಿಟ್ಟು ತೊಳಗಿ” ಎಂಬುದಾಗಿತ್ತು ಆ ವೀರ ಸೇನಾನಿಗಳ ಘೋಷಾ ವಾಕ್ಯ. ಜೊತೆಗೆ ಬ್ರಿಟಿಷರ ಎಲ್ಲಾ ಉತ್ಪನ್ನಗಳನ್ನು ಬಹಿಷ್ಕರಿಸಬೇಕೆಂದು ಕೂಡಾ ಅವರು ಕರೆ ನೀಡಿದ್ದರು.
ನಮ್ಮ ರಾಷ್ಟ್ರ ಶಿಲ್ಪಿಗಳಾದ ನಾಯಕರು ಸ್ವಾತಂತ್ರ್ಯ ಗಳಿಸಿ ಕೊಟ್ಟ ಈ ಭಾರತದಲ್ಲಿ ಎಲ್ಲಾ ಪ್ರಜೆಗಳಿಗೆ ಎಲ್ಲಾ ರೀತಿಯ ಹಕ್ಕುಗಳಿವೆ. ದೇಶದ ಪೌರತ್ವ ಎಂಬುದು ಔದಾರ್ಯವಲ್ಲ!!. ದೇಶದ ಪ್ರತಿಯೊಬ್ಬ ಪ್ರಜೆಯ ಹಕ್ಕಾಗಿದೆ. ಜಾತಿ- ಧರ್ಮಗಳ ಹೆಸರಿನಲ್ಲಿ ದೇಶದ ಜನರನ್ನು ಗುರುತಿಸುವುದು, ಪೌರತ್ವ ಪ್ರಶ್ನಿಸಲ್ಪಡುವುದು, ನಿಷೇಧಿಸಲ್ಪಡುವುದು, ಜಾತ್ಯತೀತ ಪ್ರಜಾಪ್ರಭುತ್ವ ಭಾರತಕ್ಕೆ ಭೂಷಣವಲ್ಲ.
ಅಸ್ಪಷ್ಟತೆ, ಅನಾಗರಿಕತೆ, ಜಾತಿಭೇದ ಮೊದಲಾದ ಕೆಟ್ಟ ಗುಣಗಳಿಂದ ನಾವು ಮುಕ್ತರಾಗಬೇಕು. ಹಾಗಾದರೆ ಮಾತ್ರ ಜಾತ್ಯತೀತ ಪ್ರಜಾಪ್ರಭುತ್ವ ರಾಷ್ಟ್ರದ ನೈಜ ಗುಣಗಳನ್ನು ಪ್ರಜೆಗಳು ಆಸ್ವಾದಿಸಲು ಸಾಧ್ಯವಾಗಬಹುದು. “ವಿವಿಧತೆಯಲ್ಲಿ ಏಕತೆ” ಎಂಬುದಾಗಿದೆ ಭಾರತದ ಪರಂಪರೆ. ಹಲವು ಭಾಷೆಗಳು, ವಿವಿಧ ಜಾತಿ ಧರ್ಮಗಳು, ಅನೇಕಾನೇಕ ಉಪ ಜಾತಿಗಳು ಇದೆಲ್ಲಾ ಭಾರತದ ವೈಶಿಷ್ಟ್ಯಗಳಾಗಿವೆ. ಭಾರತದ ಐಕ್ಯತೆ, ಅಖಂಡತೆ ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಎಲ್ಲಾ ಧರ್ಮಗಳ ವಿಶ್ವಾಸಗಳನ್ನು, ಆ ಧರ್ಮಗಳ ವಿಶ್ವಾಸಿಗಳನ್ನು, ಅವಿಶ್ವಾಸಿಗಳನ್ನೂ ತನ್ನ ಉದರದಲ್ಲಿ ಉಳಿಸಿಕೊಂಡಿರುವುದು ಭಾರತದ ಪರಂಪರೆಯಾಗಿದೆ.
“ಭಾರತ ಎಂಬ ಹೂದೋಟದಲ್ಲಿ, ಧರ್ಮಗಳೆಂಬ ಪುಷ್ಪಗಳು ಅರಳಲಿ” ಎಂಬ ನಮ್ಮ ಪೂರ್ವಿಕರ ಕನಸು ಇಲ್ಲಿ ನನಸಾಗಬೇಕು. ಎಲ್ಲಾ ಜನರ ವಿಶ್ವಾಸಗಳನ್ನು, ಅವರ ಧರ್ಮಗಳ ಚಿಹ್ನೆಗಳನ್ನು ನಾವು ಗೌರವಿಸಬೇಕು. ಇದಾಗಿದೆ ನಮ್ಮ ದೇಶದ ಪರಂಪರೆ. ಇತರರ ವಿಶ್ವಾಸಗಳನ್ನು, ಅವರ ಆರಾಧನಾಲಯಗಳನ್ನು ನಾಶ ಮಾಡುವುದು ನಮ್ಮ ಪರಂಪರೆಯಲ್ಲ. ನಾವೆಲ್ಲಾ ಬಹುಧರ್ಮೀಯರಾಗಿ ಬಾಳುತ್ತಿರುವುದು ಈ ದೇಶದ ಆಧಾರವಾಗಿದೆ. ಆದ್ದರಿಂದ ನಾವು ಸಹಿಷ್ಣುತೆ ಉಳ್ಳವರಾಗಬೇಕು.
ನಾವಿಂದು ಸ್ವಾತಂತ್ರ್ಯೊತ್ಸವ ಆಚರಿಸುವಾಗ ದೇಶವು ಒಂದು ಮಹಾಮಾರಿಯನ್ನು ಎದುರಿಸುತ್ತಿದೆ. ನಮ್ಮ ಪ್ರಮುಖ ಪಟ್ಟಣಗಳಲ್ಲಿ, ಗ್ರಾಮಗಳಲ್ಲಿ ರೋಗ ವ್ಯಾಪಿಸುವ ಭೀತಿ ಎದುರಾಗಿದೆ. ಪ್ರತಿಯೊಬ್ಬ ನಾಗರಿಕನೂ ಒಗ್ಗಟ್ಟಾಗಿ ಇದನ್ನು ಎದುರಿಸಬೇಕು. ದೇಶದ ಮನುಷ್ಯ ಶಕ್ತಿ ನಾಶವಾದರೆ ದೇಶವು ಅಪಾಯಕ್ಕೆ ಸಿಲುಕುವ ಸಾಧ್ಯತೆ ಇದೆ. ಮನುಷ್ಯ ಸ್ನೇಹಿ ಗುಣಗಳು, ಮಾನವೀಯತೆ ಗಳು, ಪರಸ್ಪರ ಸಹಕಾರಗಳು ನಮ್ಮ ಶಕ್ತಿಯಾಗಿದೆ. ಈ ಶಕ್ತಿಯನ್ನು ನಾವು ಒಗ್ಗಟ್ಟಾಗಿ ಪಡೆಯಬೇಕು. ದೇಶದ ಗಡಿಭಾಗದೆಲ್ಲೆಡೆ ಕೇಳಿ ಬರುತ್ತಿರುವ ಬೆದರಿಕೆಗಳು, ಷಡ್ಯಂತ್ರಗಳನ್ನು ನಾವು ಐಕ್ಯತೆಯಿಂದ ಎದುರಿಸಬೇಕಾಗಿದೆ. ಸರ್ಕಾರ, ಆರೋಗ್ಯ ಇಲಾಖೆಗಳ ನಿರ್ದೇಶನಗಳನ್ನು ಪಾಲಿಸುತ್ತಾ ನಮ್ಮಿಂದಾಗುವ ಸಹಕಾರವನ್ನು ಸದಾ ನೀಡುವವರಾಗೋಣ. ನಮ್ಮ ಜೀವ ಕಾಪಾಡುವುದರೊಂದಿಗೆ, ಇತರರ ಜೀವವನ್ನು ರಕ್ಷಿಸಿ, ದೇಶದ ಸತ್ಪ್ರಜೆಯಾಗಿ ಬಾಳೋಣ.!
✍️ NM ಶರೀಫ್ ಸಖಾಫಿ ನೆಕ್ಕಿಲ್ ಕಾರ್ಯದರ್ಶಿ : ಮಿಶನರಿ ವಿಭಾಗ SBS ದ.ಕ (ಈಸ್ಟ್) SJM ಜಿಲ್ಲಾ ಸಮಿತಿ








