ಬೆಳ್ತಂಗಡಿ: ಕೊರೋನಾ ಸೋಂಕಿನ ಭೀತಿಯ ನಡುವೆ ನಡೆದ 2019-20ರ ಎಸ್ಎಸ್ಎಲ್ಸಿ ಪಬ್ಲಿಕ್ ಪರೀಕ್ಷೆಯಲ್ಲಿ ಮೊದಲು ಫಲಿತಾಂಶ ಬಂದಾಗ ಸರಕಾರಿ ಶಾಲೆಗಳ ಪೈಕಿ ಬೆಳ್ತಂಗಡಿ ತಾಲೂಕಿನ ಪೆರ್ಲಬೈಪಾಡಿ ಮತ್ತು ಮಚ್ಚಿನ ಮೊರಾರ್ಜಿ ದೇಸಾಯಿ ವಸತಿ ಶಾಲೆ 100% ಫಲಿತಾಂಶ ದಾಖಲಿಸಿದ ಶಾಲೆಗಳು ಎಂದು ಗುರುತಿಸಲ್ಪಟ್ಟಿತ್ತು. ಇದೀಗ ಮರು ಮೌಲ್ಯಮಾಪನದ ಬಳಿಕ ಮುಂಡಾಜೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯೂ 100% ಫಲಿತಾಂಶ ಪಡೆದ ಸಾಧನೆಯ ಶಾಲೆಯೆಂಬ ಹೆಮ್ಮೆಯ ಗರಿಯನ್ನು ಮುಡಿಗೇರಿಸಿಕೊಂಡಿದೆ.
ಪ್ರಸಕ್ತ ವರ್ಷ ಎಸ್ಎಸ್ಎಲ್ಸಿ ಪರೀಕ್ಷೆಗೆ ಮುಂಡಾಜೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಿಂದ 30ವಿದ್ಯಾರ್ಥಿಗಳು ಹಾಜರಾಗಿದ್ದು, ಮೊದಲ ಬಾರಿ ಫಲಿತಾಂಶ ಪ್ರಕಟವಾದಾಗ 27 ವಿದ್ಯಾರ್ಥಿಗಳು ಉತ್ತೀರ್ಣರಾಗಿ, 90%ಫಲಿತಾಂಶ ದಾಖಲಿಸಿತ್ತು. ಇದೀಗ ಮರು ಮೌಲ್ಯಮಾಪನದ ನಂತರ ಮೊದಲು ಫಲಿತಾಂಶದಲ್ಲಿ ಅನುತ್ತೀರ್ಣರು ಎಂದು ತೀರ್ಮಾನವಾಗಿದ್ದ ಮೂರು ಮಂದಿ ವಿದ್ಯಾರ್ಥಿಗಳೂ ಉತ್ತೀರ್ಣರಾಗುವ ಮೂಲಕ ಪರೀಕ್ಷೆಗೆ ಹಾಜರಾದ ಎಲ್ಲ 30 ಮಂದಿ ವಿದ್ಯಾರ್ಥಿಗಳೂ ಉತ್ತೀರ್ಣರಾಗಿ ಶಾಲೆಗೆ 100%ಫಲಿತಾಂಶದ ಸಂತಸ ತಂದಿದ್ದಾರೆ. ಆಮೂಲಕ ಶಾಲೆ ಸತತವಾಗಿ ಎರಡನೇ ವರ್ಷ 100% ಫಲಿತಾಂಶ ಪಡೆದ ಸಾಧನೆ ಮಾಡಿದಂತಾಗಿದೆ. ಪ್ರಸಕ್ತ ವರ್ಷ ಪರೀಕ್ಷೆಗೆ ಹಾಜರಾದ 30ಮಂದಿ ವಿದ್ಯಾರ್ಥಿಗಳಲ್ಲಿ 7 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ, 19 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಹಾಗೂ 4 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಈ ವಸತಿ ಶಾಲೆಯು ಕೇವಲ ಬಾಲಕ ವಿದ್ಯಾರ್ಥಿಗಳ ವಸತಿ ಶಾಲೆಯಾಗಿದ್ದು, ರಾಜ್ಯದ ಮೂಲೆ ಮೂಲೆಗಳಿಂದ ಶೋಷಿತ ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳಿಗೆ ಮಾತ್ರ ಇಲ್ಲಿ ವಿದ್ಯಾರ್ಜನೆಗೆ ದಾಖಲಾಗಲು ಸರಕಾರ ಅವಕಾಶ ಕಲ್ಪಿಸಿದೆ.






