ಬೆಳ್ತಂಗಡಿ: ರಾಜ್ಯದ ಒಟ್ಟು 6,025 ಗ್ರಾಮ ಪಂಚಾಯಿತಿಗಳ ಪೈಕಿ 5,800 ಪಂಚಾಯಿತಿಗಳ ಅಧಿಕಾರ ಅವಧಿ ಕಳೆದ ಜೂನ್ ತಿಂಗಳಲ್ಲೇ ಅಂತ್ಯವಾಗಿದ್ದು, ನಿಯಮದ ಪ್ರಕಾರ ಅಧಿಕಾರಾವದಿ ಕೊನೆಗೊಳ್ಳುವ ಮುನ್ನವೇ ಚುನಾವಣೆ ನಡೆಸಬೇಕು. ಆದರೆ ಕೊರೋನಾ ಭೀತಿಯಿಂದ ಸಧ್ಯಕ್ಕೆ ಅನಿವಾರ್ಯವಾಗಿ ಚುನಾವಣೆ ಮುಂದೂಡಲಾಗಿದ್ದು, ಇದೀಗ ಚುನಾವಣೆ ನಡೆಸಲು ರಾಜ್ಯ ಚುನಾವಣೆ ಆಯೋಗ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಕೊರೋನಾ ಸೋಂಕು ರಾಜ್ಯದಲ್ಲಿ ಅತ್ಯಂತ ವೇಗವಾಗಿ ಹರಡುತ್ತಿರುವಾಗಲೇ, ಚುನಾವಣಾ ಆಯೋಗ ರಾಜ್ಯದಲ್ಲಿ ಗ್ರಾಮ ಪಂಚಾಯತ್ ಚುನಾವಣೆಗೆ ಮುಹೂರ್ತ ಫಿಕ್ಸ್ ಮಾಡಲು ಮುಂದಾಗಿರುವುದು ಅಚ್ಛರಿಗೆ ಕಾರಣವಾಗಿದೆ.
ಕಂದಾಯ ಇಲಾಖೆಯಲ್ಲಿನ ಅಧಿಕಾರಿಗಳ ವರ್ಗಾವಣೆಗೆ ರಾಜ್ಯ ಚುನಾವಣಾ ಆಯೋಗ ಸಧ್ಯಕ್ಕೆ ಬ್ರೆಕ್ ಹಾಕಿದೆ. ಗ್ರಾಮ ಪಂಚಾಯತು ಚುನಾವಣಾ ಹಿನ್ನೆಲೆಯಲ್ಲಿ ಮತದಾರರ ಪಟ್ಟಿ ಸಿದ್ದತಾ ಕಾರ್ಯ, ಚುನಾವಣಾ ಪೂರ್ವಭಾವಿ ತಯಾರಿಗಳನ್ನು ಮಾಡಬೇಕಾಗಿರುವುದರಿಂದ
ಕಂದಾಯ ಇಲಾಖೆಯಲ್ಲಿ ಯಾವುದೇ ಅಧಿಕಾರಿಗಳನ್ನು ಹಾಗೂ ಸಿಬ್ಬಂದಿಗಳನ್ನು ಸಧ್ಯಕ್ಕೆ ವರ್ಗವಾಣೆ ಮಾಡದಂತೆ ರಾಜ್ಯ ಸರ್ಕಾರಕ್ಕೆ ರಾಜ್ಯ ಚುನಾವಣಾ ಆಯೋಗ ಸೂಚನೆ ರವಾನಿಸಿದೆ.
ಗ್ರಾಮ ಪಂಚಾಯಿತು ಚುನಾವಣೆಗೆ ತಾಲೂಕು ಹಾಗೂ ಜಿಲ್ಲೆಗಳಲ್ಲಿ ಪೂರ್ವಭಾವಿ ತಯಾರಿಗಳು ನಡೆಯುತ್ತಿವೆ. ಈ ಕಾರ್ಯಗಳಿಗೆ ತೊಡಕಾಗದಂತೆ 2020 ಸೆಪ್ಟೆಂಬರ್ 25ರ ನಂತರ ಕಂದಾಯ ಇಲಾಖೆಯ ಯಾವುದೇ ಅಧಿಕಾರಿ ಅಥವಾ ಸಿಬ್ಬಂದಿಗಳ ವರ್ಗಾವಣೆ ಆದೇಶ ಹೊರಡಿಸದಂತೆ ಕ್ರಮ ಕೈಗೊಳ್ಳಬೇಕೆಂದು ರಾಜ್ಯ ಚುನಾವಣೆ ಅಧೀನ ಕಾರ್ಯದರ್ಶಿ ಕಂದಾಯ ಇಲಾಖೆಗೆ ಪತ್ರದ ಮೂಲಕ ಸೂಚನೆ ನೀಡಿದ್ದಾರೆ.
ರಾಜ್ಯದಲ್ಲಿ ಗ್ರಾಮ ಪಂಚಾಯತು ಚುನಾವಣೆ ಘೋಷಿಸುವ ಸಂಬಂಧ 2020ರ ಅಕ್ಟೋಬರ್ ಮೊದಲ ವಾರದಲ್ಲಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಈಗಾಗಲೇ ರಾಜ್ಯ ಚುನಾವಣ ಆಯೋಗ ಹೈಕೋರ್ಟ್‌ಗೆ ತಿಳಿಸಿದೆ.
ಅದರಂತೆ ಈಗ ವಾರ್ಡ್‌ಗಳ ಮೀಸಲಾತಿಯನ್ನು ಪ್ರಕಟಿಸಲಾಗಿದ್ದು, ಚುನಾವಣೆಗೆ ಎಲ್ಲಾ ತಯಾರಿ ನಡೆಸಿದೆ. ಇತ್ತ ರಾಜಕೀಯ ನಾಯರು ಸಹ ತಳಮಟ್ಟದಲ್ಲಿ ಪಕ್ಷವನ್ನು ಗಟ್ಟಿಗೊಳಿಸಿ, ಮೀಸಲಾತಿ ಪ್ರಕಾರ ಅಭ್ಯರ್ಥಿಗಳ ಹುಡುಕಾಟ ನಡೆಸಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಅಕ್ಟೋಬರ್ ಕೊನೆಯ ವಾರದಲ್ಲಿ ಚುನಾವಣೆ ನಡೆಯುವುದು ಸಾಧ್ಯತೆಗಳು ಹೆಚ್ಚಿವೆ. ಅದಕ್ಕೆ ಕೊರೋನಾ ಮಾರ್ಗಸೂಚಿಗಳನ್ನು ಸಹ ಈಗಾಗಲೇ ಕೇಂದ್ರ ಚುನಾವಣಾ ಆಯೋಗ ಪ್ರಕಟಿಸಿದೆ





