ಬೆಳ್ತಂಗಡಿ : ಬೆಳ್ತಂಗಡಿಯಲ್ಲಿ ಸಂಭಾವ್ಯ ದೊಡ್ಡ ಅನಾಹುತ ಒಂದು ಸುದೈವವಶಾತ್ ತಪ್ಪಿದಂತಾಗಿದೆ. ಕಾರಿನಲ್ಲಿ ಅಡಗಿದ್ದ ನಾಗರಹಾವು ನೋಡಿ ಎಚ್ಚೆತ್ತು ಹೊರಬಂದ ದಂಪತಿ ಹಾಗೂ ಮಗ ಗಂಡಾಂತರದಿಂದ ಪಾರಾಗಿ ನಿಟ್ಟುಸಿರು ಬಿಟ್ಟಿದ್ದಾರೆ. ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ಪುತ್ರಬೈಲು ನಿವಾಸಿಗಳಾದ ಪ್ರವೀಣ್ ಪತ್ನಿ ಮೀನಾ ಮತ್ತು ಮಗ ಕೃತಿಕ್ ಮೂವರು ಬೆಳ್ತಂಗಡಿಯ ಮುಳಿಯ ಜುವೆಲರ್ಸ್ ಮುಂಭಾಗದಲ್ಲಿ ತಮ್ಮ ಕಾರು ಪಾರ್ಕ್ ಮಾಡಿ ಅಮರ್ ಡ್ರಗ್ ಹೌಸ್‌ಗೆ ಮೆಡಿಸಿನ್ ಖರೀದಿಸಲು ಹೋಗಿದ್ದರು. ಹಿಂತುರುಗಿ ಬಂದು ಕಾರಿನಲ್ಲಿ ಪ್ರವೀಣ್ ಚಾಲಕನ ಸೀಟಿನಲ್ಲಿ ಕುಳಿತು ಪತ್ನಿ ಮತ್ತು ಮಗ ಹಿಂಭಾಗದ ಸೀಟಿನಲ್ಲಿ ಕೂರಲು ಬಾಗಿಲು ತೆರೆದಾಗ ನಾಗರಹಾವು ಕಾರಿನ ಸೀಟಿನ ಕೆಳಭಾಗದಲ್ಲಿ ಕಂಡಿದೆ. ತಕ್ಷಣ ಭಯಭೀತರಾಗಿ ಎಲ್ಲರೂ ಕಾರಿನಿಂದ ಇಳಿದು ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ. ಉಜಿರೆಯ ಸ್ನೇಕ್ ಜೋಯ್ ಸ್ಥಳಕ್ಕೆ ಧಾವಿಸಿ ಕಾರನ್ನು ಪರಿಶೀಲನೆ ಮಾಡಿದಾಗ ಸೀಟಿನ ಕೆಳಭಾಗದ ಮ್ಯಾಟ್‌ನ ಒಳಗೆ ನಾಗರಹಾವು ನುಸುಳಿ ಕುಳಿತ್ತಿತ್ತು. ಮ್ಯಾಟ್ ಎಲ್ಲಾ ಕತ್ತರಿಸಿ ತೆಗೆದರೂ ಪ್ರಯೋಜನವಾಗಿಲ್ಲ. ಸತತ ಒಂದು ಗಂಟೆ ಕಾರ್ಯಾಚರಣೆ ನಡೆಸಿದರೂ ನಾಗರಹಾವನ್ನು ಕಾರಿನಿಂದ ಹೊರತೆಗೆಯಲು ಸಾಧ್ಯವಾಗಲಿಲ್ಲ. ಕೊನೆಗೆ ಬೆಳ್ತಂಗಡಿ ಮೂರು ಮಾರ್ಗದ ಸರ್ವಿಸ್ ಸ್ಟೇಷನ್‌ಗೆ ಕಾರನ್ನು ಸ್ನೇಕ್ ಜೋಯ್ ಚಾಲನೆ ಮಾಡಿ ಅಲ್ಲಿ ಕಾರಿನ ಸುತ್ತಮುತ್ತ ನೀರು ಹಾಯಿಸಿದರೂ ಹಾವು ಪತ್ತೆಯಾಗಿಲ್ಲ. ಸುಮಾರು ಒಂದೂವರೆ ಗಂಟೆಗಳ ಸತತ ಕಾರ್ಯಾಚರಣೆಯ ಬಳಿಕ, ಕೊನೆಯ ಪ್ರಯತ್ನವಾಗಿ ಚಾಲಕನ ಸ್ಟೇರಿಂಗ್ ಭಾಗದ ಒಳಗೆ ನೀರು ಹಾಯಿಸಿದಾಗ ಅಡಗಿದ್ದ ನಾಗರ ಹಾವು ಹೊರಬಂದಿದೆ. ತಕ್ಷಣ ಸ್ನೇಕ್ ಜೋಯ್ ಅದನ್ನು ರಕ್ಷಣೆ ಮಾಡಿ ಪ್ಲಾಸ್ಟಿಕ್ ಬಾಕ್ಸ್ನಲ್ಲಿ ಹಾಕಿಕೊಂಡು ಕಾಡಿಗೆ ಬಿಡಲು ಕೊಂಡೊಯ್ದರು.

ಸ್ನೇಕ್ ಜೋಯ್‌ಗೆ ಹಾವು ಹಿಡಿಯಲು ಬೆಳ್ತಂಗಡಿ ದ್ವಾರಕ ಡ್ರೈವಿಂಗ್ ಸ್ಕೂಲಿನ ಅಲ್ವಿನ್ ಹಾಗೂ ಲಾಯಿಲ ರವಿಚಂದ್ರ ಸಹಕಾರ ನೀಡಿದರು. ಘಟನಾ ಸ್ಥಳದಲ್ಲಿ ಐವತ್ತಕ್ಕೂ ಅಧಿಕ ಮಂದಿ ಸೇರಿದ್ದು ವಾಹನಗಳು ಸಾಲುಗಟ್ಟಿ ನಿಂತಿತ್ತು. ಸ್ಥಳಕ್ಕೆ ಬೆಳ್ತಂಗಡಿ ಪೊಲೀಸ್ ಠಾಣೆಯ ಪೊಲೀಸ್ ಕಿರಣ್ ಹಾಗೂ ಲಾಯಿಲ ಟ್ರಾಫಿಕ್ ಸಬ್ ಇನ್ಸ್‌ಪೆಕ್ಟರ್ ಭಾರತಿ ಮತ್ತು ಸಿಬ್ಬಂದಿಗಳು ಭೇಟಿ ನೀಡಿ ಜನರನ್ನು ಚದುರಿಸಲು ಯತ್ನಿಸಿದರೂ, ಸಾಕಷ್ಟು ಕುತೂಹಲಿಗಳು ಪೊಲೀಸರ ಮಾತಿಗೂ ಕಿವಿಗೊಡದೆ, ಕಾರಿನ ಸುತ್ತಮುತ್ತ ಜಮಾಯಿಸಿದ್ದರು.






