ಬೆಳ್ತಂಗಡಿ : ಇತ್ತೀಚಿನ ದಿನಗಳಲ್ಲಿ ಖೋಟಾನೋಟು ಚಲಾವಣೆ ಪ್ರಕರಣಗಳು ಹೆಚ್ಚುತ್ತಿದ್ದು, ಈ ಜಾಲದ ಬಾಹುಗಳು ಬೆಳ್ತಂಗಡಿ ಚಾಚಿಕೊಂಡ ಬಗ್ಗೆ ತಿಳಿದು ಬಂದಿದೆ.
ಬೆಳ್ತಂಗಡಿ ತಾಲೂಕಿನ ಬಳೆಂಜ ಗ್ರಾಮದ ಕಾಪಿನಡ್ಕದ ಅಲಡ್ಕ ಚಿಕನ್ ಸೆಂಟರ್ ಮಾಲಕ ದೇವದಾಸ್ ಎಂಬರಿಗೆ ಒಂದು ಬೆಳಿಗ್ಗೆ ಕಾಪನಡ್ಕ ಹೋಟೆಲ್ ಮಾಲಕರೊಬ್ಬರು ವ್ಯವಹಾರ ಸಮಯದಲ್ಲಿ 100 ರೂಪಾಯಿಯ 3 ಹೊಸ ನೋಟು ನೀಡಿದ್ದರು. (300 ರೂಪಾಯಿ) ಅವರು ತನ್ನ ಚಿಕನ್ ಅಂಗಡಿಯಲ್ಲಿ ವ್ಯವಹಾರದ ಸಮಯ ಇದೇ ನೋಟನ್ನು ಬೇರೆಯರಿಗೆ ನೀಡಿದಾಗ ಅವರಿಗೆ ಒಂದು ನೂರು ರೂಪಾಯಿ ನೋಟು ನಕಲಿ ನೋಟು ಎಂದು ಗೊತ್ತಾಯಿತು. ನೋಟನ್ನು ಪರೀಕ್ಷಿಸಿದಾಗ ಬಲಭಾಗದಲ್ಲಿ ಗಾಂಧೀಜಿ ನಾಪತ್ತೆಯಾಗಿದ್ದರು. ಅಲ್ಲದೇ ನೇರಳೆ ಬಣ್ಣ ನೀರು ತಾಗಿ ಬಣ್ಣ ಬದಲಾಗಿತ್ತು. ಅದು ಜೆರಾಕ್ಸ್ ಮಾಡಿದ ನಕಲಿ ನೋಟು ಎಂದು ಸ್ವಷ್ಟವಾಗಿ ಕಾಣುತ್ತಿತ್ತು. ಈ ಬಗ್ಗೆ ದೇವಿದಾಸ್ ಬಳಿ ಹಣ ಪಡೆದ ವ್ಯಕ್ತಿ ವಿಚಾರಿಸಿದಾಗ ಅದು ಕಾಪನಡ್ಕ ಹೊಟೇಲ್‌ನವರು ನೀಡಿದ್ದು ಎಂಬ ಉತ್ತರ ಬಂತು. ಕಾಪಿನಡ್ಕ ಹೊಟೇಲಿನವರನ್ನು ಈ ಬಗ್ಗೆ ವಿಚಾರಿಸಿದಾಗ, ನನಗೆ ಬಂದ ಕಸ್ಟಮರ್ ನೀಡಿದ್ದು ಯಾರೆಂದು ಗೊತ್ತಾಗಿಲ್ಲ ಎಂದು ಉತ್ತರಿಸಿದ್ದಾರೆ. ಈ ನಕಲಿ ನೋಟಿನ ಬಗ್ಗೆ ದೇವಿದಾಸ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಅದರ ಫೋಟೋ ಹಾಕಿ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕೆಂದು ಮನವಿ ಮಾಡಿದ್ದಾರೆ. ಈ ಬಗ್ಗೆ ಅಲಡ್ಕ ಚಿಕನ್ ಸೆಂಟರ್ ಮಾಲಕರಾದ ದೇವಿದಾಸ್ ಅವರಲ್ಲಿ ಮಾಹಿತಿ ಪಡೆದಾಗ ನಾವು ವ್ಯವಹಾರ ಮಾಡುವವರು ಐನೂರು ಅಥವಾ ಎರಡು ಸಾವಿರ ನಕಲಿ ನೋಟು ಬರುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ವಹಿಸುತ್ತೇವೆ. ನಮಗೆ 100 ರೂಪಾಯಿ ಕೂಡ ನಕಲಿ ಬರುತ್ತಿರುವುದು ಇದೆ ಮೊದಲು ಗೊತ್ತಾದದ್ದು ಎನ್ನುತ್ತಾರೆ. ಇದನ್ನು ಹೊಟೇಲ್ ಮಾಲಕರಿಗೆ ಯಾರು ನೀಡಿದ್ದಾರೆ ಎಂದು ಅವರಿಗೂ ಗೊತ್ತಾಗುತ್ತಿಲ್ಲ. ನಾನು ಅವರಿಗೆ ಅ ನೋಟನ್ನು ವಾಪಸ್ ನೀಡಿದ್ದೇನೆ ಎಂದು ಪ್ರತಿಕ್ರಿಯಿಸಿದ್ದಾರೆ. ಈ ಬಗ್ಗೆ ಯಾರೂ ಪೊಲೀಸರಿಗೆ ದೂರು ನೀಡಿಲ್ಲ. ಸ್ವಯಂಪ್ರೇರಣೆಯಿಂದ ಪೊಲೀಸರು ದೂರು ದಾಖಲಿಸಿಕೊಂಡು ಈ ನಕಲಿ ನೋಟು ಜಾಲದ ತನಿಖೆಗೆ ಮುಂದಾದ ಮಾಹಿತಿಯೂ ಇಲ್ಲ.






