ಧರ್ಮಸ್ಥಳ: ಧರ್ಮಸ್ಥಳ ಗ್ರಾಮ ಪಂಚಾಯತ್ ಸ್ವಚ್ಛ ಭಾರತ್ ಮಿಷನ್(ಗ್ರಾಮೀಣ) ಯೋಜನೆ ‘ಸ್ವಚ್ಛೋತ್ಸವ -ನಿತ್ಯೋತ್ಸವ’ ಮಾಸಾಚರಣೆ ಪ್ರಯುಕ್ತ ಧರ್ಮಸ್ಥಳ ಗ್ರಾಮ ಪಂಚಾಯತ್ ಘನತ್ಯಾಜ್ಯ ವಿಲೇವಾರಿ ಘಟಕದ ಏಕರೂಪದ ಬ್ರ್ಯಾಂಡಿಗ್ ಲೋಕಾರ್ಪಣೆ ಕಾರ್ಯಕ್ರಮ ಅಕ್ಟೋಬರ್ 30 ರಂದು ಜರುಗಿತು.ಕಾರ್ಯಕ್ರಮವನ್ನು ಉದ್ಘಾಟಿಸಿದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಮಾತನಾಡುತ್ತಾ, ಸ್ವಚ್ಛತೆ ಕಡೆಗೆ ಆದಷ್ಟು ಗಮನ ನೀಡಬೇಕು. ನಮ್ಮ ಸುತ್ತಮುತ್ತಲ ಪ್ರದೇಶದ ಸ್ವಚ್ಛತೆಯಲ್ಲಿ ನಮ್ಮ ಪಾತ್ರ ಪ್ರಾಮುಖ್ಯತೆ ವಹಿಸಿದೆ. ಪಂಚಾಯತ್ ಮಟ್ಟದ ಎಲ್ಲಾ ಅಧಿಕಾರಿಗಳು ಸ್ವಚ್ಛತೆ ಬಗ್ಗೆ ಹೆಚ್ಚಿನ ಗಮನ ಹಾಗೂ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿದರು.ಮುಖ್ಯ ಅತಿಥಿಗಳಾಗಿ ಧರ್ಮಸ್ಥಳ ಕ್ಷೇತ್ರದ ಜಿಲ್ಲಾ ಪಂಚಾಯತ್ ಸದಸ್ಯ ಕೊರಗಪ್ಪ ನಾಯ್ಕ, ಮಾತನಾಡುತ್ತಾ ಸಹಸ್ರಾರು ಯಾತ್ರಾರ್ಥಿಗಳು ಪ್ರತಿನಿತ್ಯ ಬರುವ ಈ ಕ್ಷೇತ್ರದಲ್ಲಿ ಎಲ್ಲರಿಗೂ ಮಾದರಿಯಾಗುವಂತೆ ಸ್ವಚ್ಛತಾ ಕಾರ್ಯಕ್ರಮ ನಡೆಯುತ್ತಿರುವುದು ಅನುಕರಣೀಯ. ಸ್ವಚ್ಛತೆಯ ಬಗ್ಗೆ ಜನಪ್ರತಿನಿಧಿಗಳು ಮತ್ತು ಪಂಚಾಯತ್ ಮಟ್ಟದ ಅಧಿಕಾರಿಗಳು ಹೆಚ್ಚಿನ ಒಲವು ಮತ್ತು ಪ್ರಯತ್ನ ಪಡಬೇಕು ಎಂದರು. ಬೆಳ್ತಂಗಡಿ ತಾಲೂಕು ಪಂಚಾಯತ್ ಉಪಾಧ್ಯಕ್ಷೆ ವೇದಾವತಿ, ತಾಲೂಕು ಪಂಚಾಯತ್ ಸದಸ್ಯೆ ಧನಲಕ್ಷ್ಮೀ ಜನಾರ್ದನ್, ತಾ ಕಾರ್ಯನಿರ್ವಹಣಾಧಿಕಾರಿ ಕುಸುಮಾಧರ್, ಜಿಲ್ಲಾ ಪಂಚಾಯತ್ ಸ್ವಚ್ಛತಾ ಅಭಿಯಾನದ ಸಂಚಾಲಕ ನವೀನ್ ಉಪಸ್ಥಿತರಿದ್ದರು. ಧರ್ಮಸ್ಥಳ ಗ್ರಾಮ ಪಂಚಾಯತ್ ಆಡಳಿತಾಧಿಕಾರಿ ಡಾ. ಜಯಕೀರ್ತಿ ಜೈನ್ ಸ್ವಾಗತಿಸಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಉಮೇಶ್ ಕೆ. ಧನ್ಯವಾದವಿತ್ತರು. ಪಂಚಾಯತ್ ಸಿಬ್ಬಂದಿ ಡಾ. ದೇವಿಪ್ರಸಾದ್ ಬೊಳ್ಮ ಕಾರ್ಯಕ್ರಮ ನಿರ್ವಹಣೆ ಮಾಡಿದರು.






