ಬೆಳ್ತಂಗಡಿ: ತಮ್ಮ ಕರುಳಕುಡಿಗೆ ವಿಷವಿಕ್ಕಿದ ದಂಪತಿಗಳು ತಾವೂ ವಿಷ ಸೇವಿಸಿ ಸಾವಿಗೆ ಶರಣಾಗಲು ಯತ್ನಿಸಿದ ದುರ್ಘಟನೆ ನವೆಂಬರ್ 3ರಂದು ಕೊಕ್ರಾಡಿಯಿಂದ ವರದಿಯಾಗಿದ್ದು; ದುರ್ಘಟನೆಯಲ್ಲಿ ಅಮಾಯಕ ಮಗು ಕಿಶಾ(5)ಹಾಗೂ ಮಗುವಿನ ತಂದೆ ಚೇತನ್ ಕುಮಾರ್ (32) ಸಾವಿಗೀಡಾಗಿದ್ದು; ಮಗುವಿನ ತಾಯಿ ಆಶಾಲತಾ (27) ಜೀವನ್ಮರಣ ಹೋರಾಟ ನಡೆಸುತ್ತಿದ್ದು, ಸಧ್ಯಕ್ಕೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯ ವಿವರ: ಬೆಳ್ತಂಗಡಿ ತಾಲೂಕಿನ ಕೊಕ್ರಾಡಿ ಗ್ರಾಮದ ಹೆಡ್ಲಬೆಟ್ಟು ನಿವಾಸಿ ಚೇತನ್ ಕುಮಾರ್ ನವೆಂಬರ್ 2ರ ಸಂಜೆ ತಂಪು ಪಾನೀಯಕ್ಕೆ ವಿಷಯುಕ್ತ ಕೀಟನಾಶಕ ಬೆರೆಸಿ ತನ್ನ ಮಗು ಹಾಗೂ ಪತ್ನಿಗೆ ಕುಡಿಸಿ; ಬಳಿಕ ಅಮಲು ಪದಾರ್ಥದಲ್ಲಿ ಅದೇ ಕೀಟನಾಶಕ ಬೆರೆಸಿ ತಾನೂ ಸೇವಿಸಿದ್ದ ಎನ್ನಲಾಗಿದೆ. ವಿಷ ಪದಾರ್ಥ ಒಡಲು ಸೇರುತ್ತಿದ್ದಂತೆ ಅಸಾಧ್ಯ ಹಿಂಸೆಪಟ್ಟ ಮೂವರೂ ಜೋರಾಗಿ ನರಳಾಡುತ್ತಾ ಕಿರುಚುತ್ತಿದ್ದುದು ನೆರೆಕರೆಯವರ ಕಿವಿಗೆ ಬಿತ್ತು ಎಂದು ತಿಳಿದು ಬಂದಿದೆ. ತಕ್ಷಣ ಸ್ಥಳೀಯರ ನೆರವಿನಿಂದ ಮೂವರನ್ನೂ ಚಿಕಿತ್ಸೆಗಾಗಿ ಹತ್ತಿರದ ನಾರಾವಿ ಸರಕಾರಿ ಆಸ್ಪತ್ರೆಗೆ ಕರೆತರಲಾಯಿತು. ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಮೂವರನ್ನೂ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದ ಚೇತನ್ ಕುಮಾರ್ ಮತ್ತು ಮಗು ಕಿಶಾ ಸಾವನ್ನಪ್ಪಿದ್ದು; ಆಶಾಲತಾಗೆ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ ಎಂದು ತಿಳಿದು ಬಂದಿದೆ. ಕುಡಿತದ ದಾಸನಾಗಿದ್ದ ಚೇತನ್ ಕುಮಾರ್ ಎದುರಿಸುತ್ತಿದ್ದ ಆರ್ಥಿಕ ಸಮಸ್ಯೆಯೇ ಈ ಪ್ರಕರಣಕ್ಕೆ ಪ್ರಮುಖ ಕಾರಣ ಎಂದು ಸ್ಥಳೀಯರು ಸಂಶಯಿಸುತ್ತಿದ್ದು, ಸತ್ಯಾಂಶ ಇನ್ನಷ್ಟೇ ಗೊತ್ತಾಗಬೇಕಾಗಿದೆ. ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





