ಬೆಳ್ತಂಗಡಿ: ಪ್ರಸಕ್ತ ವರ್ಷದ ರಾಷ್ಟ್ರ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯಿಂದ ಪುರಸ್ಕೃತರಾದ ಬೆಳ್ತಂಗಡಿ ತಾಲೂಕು ನಡ ಸರಕಾರಿ ಪ್ರೌಢ ಶಾಲಾ ಗಣಿತ ಶಿಕ್ಷಕ ಯಾಕೂಬ್ ಕೊಯ್ಯೂರುರವರನ್ನು ನವೆಂಬರ್ 8ರಂದು ಅವರ ಹುಟ್ಟೂರಾದ ಕೊಯ್ಯೂರಿನ ಆದೂರ್ಪೆರಾಲ್ ಪಂಚದುರ್ಗಾ ಸಭಾಭವನದಲ್ಲಿ ಊರ ವಿದ್ಯಾಭಿಮಾನಿಗಳ ಹಾಗೂ ಗಣ್ಯರ ಉಪಸ್ಥಿತಿಯಲ್ಲಿ ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜಾ ಗೌರವಿಸಿ, ಸಮ್ಮಾನಿಸಿದರು.ಇದೇ ಸಂದರ್ಭದಲ್ಲಿ 2019-20 ಶೈಕ್ಷಣಿಕ ವರ್ಷ ನಡೆದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಒಟ್ಟು 625 ಅಂಕಗಳಿಗೆ 620 ಅಂಕ ಗಳಿಸಿ, ರಾಜ್ಯಮಟ್ಟದಲ್ಲಿ 4ನೇ ಸ್ಥಾನ ಗಳಿಸಿ, ತನ್ನ ಶಾಲೆಯ ಹಾಗೂ ಊರಿನ ಗೌರವ ಹೆಚ್ಚಿಸಿದ ಕೊಯ್ಯೂರು ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿನಿ ಬಿ. ಶೈವಿಯವರನ್ನು ಅಭಿನಂದಿಸಿ ಪುರಸ್ಕರಿಸಲಾಯಿತು. ಶಾಲೆಗೆ ಉತ್ತಮ ಫಲಿತಾಂಶ ದೊರೆಯುವಂತಾಗಲು ಪ್ರಾಮಾಣಿಕವಾಗಿ ಶ್ರಮಿಸಿದ ಶಾಲಾ ಮುಖ್ಯೋಪಾಧ್ಯಾಯರನ್ನು ಹಾಗೂ ಸಹಶಿಕ್ಷಕರನ್ನು ಗೌರವಿಸಲಾಯಿತು. ಅಂತೆಯೇ ಶಿಕ್ಷಕಿಯಾಗಿ ಸುದೀರ್ಘ ಅವಧಿಯ ಸೇವೆ ಸಲ್ಲಿಸಿ, ಮುಖ್ಯೋಪಾಧ್ಯಾಯರಾಗಿ ನಿವೃತ್ತಿ ಹೊಂದಿದ ಕೊಯ್ಯೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ನಿವೃತ್ತ ಮುಖ್ಯ ಶಿಕ್ಷಕಿ ಜಾಹ್ನವಿಯವರನ್ನೂ ಅಭಿವಂದಿಸಲಾಯಿತು.ಕೊಯ್ಯೂರು ಶ್ರೀ ಪಂಚದುರ್ಗಾ ದೇವಸ್ಥಾನದ ಪ್ರಧಾನ ಅರ್ಚರಾದ ಅಶೋಕ್ ಕುಮಾರ್ರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ನ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷೆ ಮಮತಾ ಎಂ ಶೆಟ್ಟಿ, ಬೆಳ್ತಂಗಡಿ ತಾಲೂಕು ಪಂಚಾಯತ್ ಸದಸ್ಯ ಪ್ರವೀಣ್ ಗೌಡ, ಶ್ರೀ ಕ್ಷೇತ್ರ ಧರ್ಮಸ್ಥಳದ ಕೃಷಿ ವಿಭಾಗದ ಮುಖ್ಯಸ್ಥ ಬಾಲಕೃಷ್ಣ ಬಜ, ಸಾಮಾಜಿಕ ಧುರೀಣ ಪ್ರಚಂಡಭಾನು, ಕೊಯ್ಯೂರು ಸರಕಾರಿ ಪ್ರೌಢ ಶಾಲಾ ಮುಖ್ಯ ಶಿಕ್ಷಕ ರಾಧಾಕೃಷ್ಣ ತಚ್ಛಮೆ, ಶಾಲಾ ಸಹಶಿಕ್ಷಕರು, ಊರ ವಿದ್ಯಾಭಿಮಾನಿಗಳು ಭಾಗವಹಿಸಿದ್ದರು. ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಕನ್ನಡ ಉಪನ್ಯಾಸಕ ಡಾl ದಿವಾ ಕೊಕ್ಕಡ ಕಾರ್ಯಕ್ರಮ ನಿರೂಪಿಸಿದರು.







