ಮೂಡಬಿದಿರೆ: ವಿಸ್ತಾರವಾದ, ಅತೀ ಸುಂದರವಾದ ವಾಣಿಜ್ಯ ಸಂಕೀರ್ಣ ” ದಾನ ಮಾಲ್ ” ಇಂದು ಲೋಕಾರ್ಪಣೆಗೊಳ್ಳಲಿದೆ.ಗಲ್ಫ್ ರಾಷ್ಟ್ರಗಳಲ್ಲಿರುವ ವಾಣಿಜ್ಯ ಸಂಕೀರ್ಣಗಳ ಮಾದರಿಯಲ್ಲಿ ಮೂಡುಬಿದಿರೆ ಜುಮ್ಮಾ ಮಸೀದಿಯ ಸನಿಹದಲ್ಲಿ ಇರುವೈಲು ರಸ್ತೆಯಲ್ಲಿ ಈ ಅತ್ಯಾಕರ್ಷಕ ವಾಣಿಜ್ಯ ಸಂಕೀರ್ಣ ನಿರ್ಮಾಣವಾಗಿದೆ.ಸುಮಾರು 85 ಸಾವಿರ ಚದರ ಅಡಿ ವಿಸ್ತೀರ್ಣದ ದಾನ ಮಾಲ್ ನ ಬೇಸ್ ಮೆಂಟ್ ನಲ್ಲಿ 55 ಕಾರುಗಳು ಮತ್ತು 35 ದ್ವಿಚಕ್ರ ವಾಹನಗಳು ತಂಗಲು ಅವಕಾಶ ಸ್ಥಳಾವಕಾಶವಿದೆ. ಒಟ್ಟು ನಾಲ್ಕು ಅಂತಸ್ತಿನ ಈ ಕಟ್ಟಡದ ಮೊದಲ 3 ಅಂತಸ್ತುಗಳಲ್ಲಿ ಒಟ್ಟು 120 ವಾಣಿಜ್ಯ ಮಳಿಗೆಗಳು ಮತ್ತು 4ನೇ ಅಂತಸ್ತಿನಲ್ಲಿ ವಿಸ್ತಾರವಾದ ಫುಡ್ ಕೋರ್ಟ್ ನಿರ್ಮಾಣ ಮಾಡಲಾಗಿದೆ. ಏಕ ಕಾಲದಲ್ಲಿ 200 ಮಂದಿ ಕುಳಿತು ಊಟ-ಉಪಹಾರ ಸೇವಿಸಬಹುದಾದ ಈ ಫುಡ್ ಕೋರ್ಟ್ ನಲ್ಲಿ 23 ವಿಭಾಗಗಳನ್ನು ತೆರೆಯಬಹುದಾಗಿದೆ.ಒಂದೇ ಸಾರಿ 32 ಜನರನ್ನು ಒಯ್ಯಬಹುದಾದ ಅತೀ ದೊಡ್ಡ ಲಿಫ್ಟನ್ನು ಹೊಂದಿರುವುದು ದಾನ ಮಾಲ್ ನ ವಿಶೇಷತೆಯಾಗಿದೆ. ತಳ ಅಂತಸ್ತಿನಿಂದ ನಾಲ್ಕನೇ ಅಂತಸ್ತಿನವರೆಗೆ ಒಯ್ಯುವ ಈ ಲಿಫ್ಟ್ ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಅತೀ ದೊಡ್ಡ ಲಿಫ್ಟ್ ಎಂಬ ಹೆಗ್ಗಳಿಕೆಯನ್ನು ಹೊಂದಿದೆ. ಕ್ಯಾಪ್ಸೂಲ್ ಶೈಲಿಯ ಇನ್ನೊಂದು ಲಿಫ್ಟ್ ಸುತ್ತ ಸಿಂಗಲ್ ಗ್ಲಾಸ್ ಅಳವಡಿಸಲಾಗಿದ್ದು ಆಕರ್ಷಕವಾಗಿದೆ.ಕಟ್ಟಡದ ಎಲ್ಲಾ ಮಳಿಗೆಗಳಿಗೆ ಅತೀ ದಪ್ಪದ ಟಫೆಂಡ್ ಗ್ಲಾಸ್ ಅಳವಡಿಸಲಾಗಿದ್ದು ಇಲ್ಲಿ ವ್ಯವಹಾರ ನಡೆಸುವ ಮಳಿಗೆಗಳ ಮಾಲಕರಿಗೆ ದೊಡ್ಡ ಭದ್ರತೆಯಾಗಿದೆ. ಅತೀ ದುಬಾರಿಯಾದ ಇಟಾಲಿಯನ್ ಮಾರ್ಬಲ್ ಮತ್ತು ಶೈನಿಂಗ್ ಗ್ರಾನೈಟ್ ಬಳಸಿ ಈ ವಾಣಿಜ್ಯ ಸಂಕೀರ್ಣದ ನಿರ್ಮಾಣ ಮಾಡಲಾಗಿದ್ದು ಇಷ್ಟು ವಿಸ್ತೀರ್ಣವಾದ ಕಟ್ಟಡದ ಕಾಮಗಾರಿಯನ್ನು ಕೊರೋನ ಸಂಕಷ್ಟದ ನಡುವೆಯೂ 5 ವರ್ಷಗಳಲ್ಲಿ ಪೂರ್ಣಗೊಳಿಸಿರುವುದು ಈ ದಾನ ಮಾಲ್ ನ ಮಾಲಕ ಮೂಡುಬಿದಿರೆ ಕೋಟೆಬಾಗಿಲಿನ ಮಹಮ್ಮದ್ ಶರೀಫ್ ಅವರ ಸಾಹಸ ಪ್ರವೃತ್ತಿ ಮತ್ತು ಸಾಧನೆಯ ಛಲಕ್ಕೆ ಸಾಕ್ಷಿಯಾಗಿದೆ.45 ವರ್ಷಗಳ ಹಿಂದೆ ಮೂಡುಬಿದಿರೆಯಲ್ಲಿ ಚಿಕ್ಕು ಮತ್ತಿತರ ಹಣ್ಣುಗಳ ವ್ಯಾಪಾರ ಮಾಡಿಕೊಂಡಿದ್ದ ಮಹಮ್ಮದ್ ಶರೀಫ್ ಅವರು ಇಂದಿಗೂ ಮೂಡುಬಿದಿರೆಯ ಜನರಿಗೆ ಚಿಕ್ಕು ಸಾೖಬೆರ್ ಎಂದೇ ಪರಿಚಿತರು. ಈಗ 65 ವರ್ಷ ವಯಸ್ಸಿನ ಅವರು ಚಿಕ್ಕ ವಯಸ್ಸಿನಲ್ಲಿ ಮೂಡುಬಿದಿರೆ ಬಸ್ ನಿಲ್ದಾಣದಲ್ಲಿ ಅನಾನಸ್ ತುಂಡುಗಳನ್ನು ಮಾರಿದ್ದೂ ಇದೆ. ಅವರೇ ಹೇಳುವಂತೆ “ಜಾತ್ರೆಗಳಿಗೆ ಹೋಗಿ ಅಲ್ಲಿ ಮಟ್ಲಕ್ಕಿ (ಕುರ್ಲು) ಮತ್ತು ಚರುಂಬುರಿ ವ್ಯಾಪಾರ ಮಾಡಿದ್ದೂ ಇದೆ. ಇದೆಲ್ಲಾ ಜೀವನ ನಿರ್ವಹಣೆಗೆ ಸಾಕಾಗುತ್ತಿತ್ತು. ಆದರೆ ಜೀವನದಲ್ಲಿ ವಿಶೇಷವಾದದ್ದನ್ನು ಸಾಧಿಸಬೇಕೆಂಬ ತುಡಿತವಿತ್ತು. ಚಾಲಕ ವೃತ್ತಿಯೂ ಗೊತ್ತಿತ್ತು. ಹಾಗಾಗಿ 20ರ ಹರೆಯದಲ್ಲೇ ಕೆಲಸ ಹುಡುಕಿಕೊಂಡು ಮುಂಬಯಿಗೆ ಹೋದೆ. ಅಲ್ಲಿ ಕೆಲಸ ಸಿಗದೆ ಪರದಾಡಿದ್ದೂ ಇದೆ. ಇದರಿಂದ ಧೃತಿಗೆಟ್ಟು ಊರಿಗೆ ಮರಳಲಿಲ್ಲ. ಸ್ನೇಹಿತರೊಬ್ಬರು ಕೆಲಸಕ್ಕಾಗಿ ದುಬೈಗೆ ಹೋಗುವ ಅವಕಾಶ ಕಲ್ಪಿಸಿಕೊಟ್ಟರು. 1977 ಸೆ. 25ರಂದು ದುಬೈ ವಿಮಾನವೇರಿ ಅಲ್ಲಿನ ತೈಲ ಉತ್ಪಾದನಾ ಕಂಪೆನಿಯಲ್ಲಿ ಕಳೆದ 45 ವರ್ಷಗಳಿಂದ ಚಾಲಕನಾಗಿ ಹಗಲಿರುಳು ಕಷ್ಟಪಟ್ಟು ದುಡಿದೆ. ಪತ್ನಿ, ಇಬ್ಬರು ಪುತ್ರರು, ಮೂವರು ಪುತ್ರಿಯರ ಸಹಿತ ಅಲ್ಲೇ ನೆಲೆಸಿ ಶ್ರಮವಹಿಸಿ ಗುರಿ ಸಾಧಿಸಿದ್ದೇನೆ. ನನ್ನ ಹುಟ್ಟೂರಿನ ಜನಕ್ಕೆ, ಇಲ್ಲಿನ ನನ್ನ ಬಂಧುಗಳಿಗೆ ಮತ್ತು ಮಿತ್ರರಿಗೆ ನನ್ನ ಜೀವಮಾನದ ಸಾಧನೆಯಾಗಿರುವ ದಾನಮಾಲನ್ನು ಸಮರ್ಪಿಸುತ್ತಿದ್ದೇನೆ. ದುಬೈನಲ್ಲಿ ದೊಡ್ಡ ದೊಡ್ಡ ಕಟ್ಟಡಗಳಿಗೆ ಈ ಹೆಸರು ಇಡುತ್ತಾರೆ. ಭಾರತೀಯ ಸಂಸ್ಕೃತಿಯಲ್ಲಿ ದಾನ ಎಂಬುದರ ಅರ್ಥ ದಾನಕೊಡುವುದಾಗಿದೆ. ಈ ಹೆಸರು ಇಲ್ಲಿನ ಬಂಧುಗಳಿಗೆ ದೊಡ್ಡ ಪ್ರೇರಣೆಯಾಗಲಿ. “







