ಮೂಡುಬಿದಿರೆ: ಮೆಸ್ಕಾಂ ಅಧಿಕಾರಿಗಳನಿರ್ಲಕ್ಷ್ಯದಿಂದಾಗಿ ಮೆಸ್ಕಾಂ ಇಲಾಖೆಗೇ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ.ಮೇ 2ರಂದು ಮಧ್ಯರಾತ್ರಿ ಬೀಸಿದ ಸುಂಟರಗಾಳಿಗೆ ಮೂಡುಬಿದಿರೆ ಮಹಾವೀರ ಕಾಲೇಜು ಸತ್ಯನಾರಾಯಣ ಕಟ್ಟೆಯ ಮುಂಭಾಗದಲ್ಲಿ ಮುಖ್ಯರಸ್ತೆಯಲ್ಲಿದ್ದ ಭಾರೀ ಮರವೊಂದು ವಿದ್ಯುತ್ ತಂತಿಯ ಮೇಲೆ ಉರುಳಿ ಬಿದ್ದು ಏಳು ವಿದ್ಯುತ್ ಕಂಬಗಳು ಮುರಿದು ಬಿದ್ದಿರುವ ಕಾರಣ ಈ ನಷ್ಟ ಸಂಭವಿಸಿದೆ.ಸುಮಾರು ಎರಡು ತಿಂಗಳ ಹಿಂದೆ ಇಲ್ಲೇ ಸಮೀಪದ ಕೀರ್ತಿನಗರ ಜಂಕ್ಷನ್ ಬಳಿ ವಿದ್ಯುತ್ ತಂತಿ ಸ್ಪರ್ಷಿಸುತ್ತಿದ್ದ ಮರವನ್ನು ಕಡಿಯಲು ಕ್ರೇನ್ ತರಿಸಲಾಗಿತ್ತು. ಈ ಸಂದರ್ಭ ಮೆಸ್ಕಾಂ ಅಧಿಕಾರಿಗಳನ್ನು ಸಂಪರ್ಕಿಸಿದ ಪುರಸಭಾ ಸದಸ್ಯ ಸುರೇಶ್ ಕೋಟ್ಯಾನ್ ಅವರು ಮಹಾವೀರ ಕಾಲೇಜು ಸತ್ಯನಾರಾಯಣ ಕಟ್ಟೆಯ ಮುಂಭಾಗದಲ್ಲಿ ವಿದ್ಯುತ್ ತಂತಿಗೆ ಸಂಚಕಾರ ತರಲಿರುವ ಮರದ ಬಗ್ಗೆ ಪ್ರಸ್ತಾಪಿಸಿ ಅದನ್ನೂ ಕಡಿದು ಉರುಳಿಸುವಂತೆ ಮನವಿ ಮಾಡಿದ್ದರು. ಈಗ ಬಂದಿರುವ ಕ್ರೇನ್ ಎಲ್.ಟಿ. ಲೇನ್ ನ ಮರಗಳನ್ನು ಕಡಿಯಲು ಮಾತ್ರ ಉಪಯೊಗಿಸುವುದು ಎಂದು ಮೆಸ್ಕಾಂ ಎಸ್.ಒ. ಅಂದು ಜಾರಿಕೊಂಡಿರುವುದು ಈಗ ಭಾರೀ ನಷ್ಟ ಉಂಟಾಗಲು ಕಾರಣವಾಗಿದೆ.ಕಳೆದ ಪುರಸಭೆ ಕೌನ್ಸಿಲ್ ಮೀಟಿಂಗ್ಗೆ ಆಗಮಿಸಿದ್ದ ಮೆಸ್ಕಾಂ ಎಸ್.ಒ. ಅವರಲ್ಲಿ ಸುರೇಶ್ ಕೋಟ್ಯಾನ್ ಅವರು ಮತ್ತೆ ಇದನ್ನೇ ಪ್ರಸ್ತಾಪಿಸಿದ್ದು ಈ ಅಪಾಯಕಾರಿ ಮರವನ್ನು ತೆರವು ಗೊಳಿಸುವಂತೆ ಸಭೆಯಲ್ಲೇ ವಿನಂತಿಸಿದ್ದರು. ಆದರೆ ಈ ವಿನಂತಿಗೆ ಮನ್ನಣೆ ನೀಡದ ಮೆಸ್ಕಾಂ ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆ ತಳೆದಿರುವುದೇ ಈ ಅನಾಹುತಕ್ಕೆ ಕಾರಣವಾಗಿದೆ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿದೆ. ವಿದ್ಯುತ್ ಕಂಬಗಳು ಉರುಳಿಬಿದ್ದ ಕಾರಣ ವಿದ್ಯುತ್ ಸರಬರಾಜು ಸ್ಥಗಿತಗೊಂಡು ಒಂದು ದಿನವಿಡೀ ಜನರು ತೊಂದರೆ ಅನುಭವಿಸಿದ್ದು, ಇದೇ ಕಾರಣಕ್ಕೆ ನೀರು ಸರಬರಾಜು ವ್ಯವಸ್ಥೆಯಲ್ಲೂ ವ್ಯತ್ಯಯ ಉಂಟಾಗಿ ಜನ ಇನ್ನಷ್ಟು ತೊಂದರೆ ಅನುಭವಿಸುವಂತಾಯಿತು. ಪುರಸಭಾ ದಾರಿದೀಪ ವ್ಯವಸ್ಥೆಗೂ ಕ್ಷತಿ ಉಂಟಾಗಿದ್ದು ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಸಧ್ಯ ಯಾವುದೇ ಪ್ರಾಣಹಾನಿ ಸಂಭವಿಸದಿರುವುದೊಂದೇ ಸಮಾಧಾನದ ವಿಷಯವಾಗಿದೆ.







