ಬೆಳ್ತಂಗಡಿ: ಕೋವಿಡ್-19 ಸಾಂಕ್ರಾಮಿಕ ಮಹಾಮಾರಿ ಸಮಾಜದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿ ಮಾಡಿದೆ. ಇಂತಹ ದುಃಸ್ಥಿತಿಯ ಸಮಯದಲ್ಲಿ ಅನೇಕ ಸಾಮಾಜಿಕ ಸಂಘಟನೆಗಳು ಸಮಾಜಕ್ಕೆ ಅಗತ್ಯವಿರುವ ಎಲ್ಲಾ ರೀತಿಯ ಸಹಾಯ, ಸಹಕಾರ ನೀಡಲು ಮುಂದೆ ಬಂದಿವೆ. ಅದರಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಕೂಡ ಒಂದು. ಗಂಭೀರ ಸ್ವರೂಪದ ಎರಡನೇ ಅಲೆಯ ಮಧ್ಯೆ ಸಮಾಜಕ್ಕೆ ಶಕ್ತಿ-ವಿಶ್ವಾಸ ತುಂಬುವಂತದ್ದು ಹಾಗೂ ಸಹಾಯ-ಸಹಕಾರ ಮಾಡುವ ದೃಷ್ಟಿಯಿಂದ ಏಳೆಂಟು ವಿಭಾಗಗಳಾಗಿ ವಿಂಗಡಿಸಿ ತಾಲೂಕಿನಾದ್ಯಾಂತ ಸೇವಾ ಭಾರತಿ ಬೆಳ್ತಂಗಡಿ ತಾಲೂಕು ಮೂಲಕ ಸೇವಾ ಕಾರ್ಯಗಳನ್ನು ಪ್ರಾರಂಭಿಸಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜಿಲ್ಲಾ ಸಂಘ ಚಾಲಕ ಕೊಡ್ಮಣ್ ಕಾಂತಪ್ಪ ಶೆಟ್ಟಿ ಹೇಳಿದರು.ಅವರು ಉಜಿರೆಯ ಶ್ರೀ ಶಾರದಾ ಮಂಟಪದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ ಕೊರೊನ ಸಂಕಷ್ಟದಲ್ಲಿರುವ ಜನರಿಗೆ ಸಹಾಯ-ಸಹಕಾರವನ್ನು ಬೆಳ್ತಂಗಡಿ ತಾಲೂಕು ಸೇವಾ ಭಾರತಿ ಮೂಲಕ ನೀಡುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಬೆಳ್ತಂಗಡಿ ತಾಲೂಕು ಸಂಘ ಚಾಲಕ ವಿನಯಚಂದ್ರ ಉಜಿರೆ, ಗಣೇಶ್ ಭಟ್ ಕಾಂತಾಜೆ, ವಿಭಾಗ ಸಹಕಾರ್ಯವಾಹ ಜಗದೀಶ ಕಲ್ಲಡ್ಕ ಉಪಸ್ಥಿತರಿದ್ದರು. ಸಂಘದ ವಿವಿಧ ಕ್ಷೇತ್ರದ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.







