ಬೆಳ್ತಂಗಡಿ: ಬೆಳ್ತಂಗಡಿ ಚರ್ಚ್ ಬಳಿಯ ಮನೆಯೊಂದರಲ್ಲಿ ಕರ್ತವ್ಯನಿರತ ದಾದಿ ಓರ್ವರ ಮೇಲೆ ಚಪ್ಪಲಿ ತೋರಿ ಹಲ್ಲೆ ನಡೆಸಲು ಮುಂದಾಗಿ ಬೆದರಿಕೆ ಹಾಕಿದ ಪ್ರಕರಣ ಮೇ 7ರಂದು ವರದಿಯಾಗಿದೆ. ಬೆಳ್ತಂಗಡಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಕೊರೋನಾ ಸೋಂಕಿತರಾಗಿ ಮನೆಯಲ್ಲಿ ಚಿಕಿತ್ಸೆ ಪಡೆಯುವ ರೋಗಿಗಳಿಗೆ ಮನೆಮನೆಗೆ ತೆರಳಿ ಔಷಧಿ ವಿತರಿಸುವ ಜವಾಬ್ದಾರಿ ಹೊಂದಿದ ಹಿರಿಯ ದಾದಿ ಕಮಲರವರು ಮೇ 7ರ ಸಂಜೆ ಚರ್ಚ್ ಬಳಿಯ ಮನೆಯೊಂದಕ್ಕೆ ಕಿರಿಯ ಆರೋಗ್ಯ ಮೇಲ್ವಿಚಾರಕ ಗಿರೀಶ್‌ರೊಂದಿಗೆ ತೆರಳಿ ಔಷಧಿ ನೀಡುವ ಸಲುವಾಗಿ ಅದೇ ಮನೆಯಲ್ಲಿ ಕ್ವಾರಂಟೈನ್‌ಗೆ ಒಳಗಾಗಿದ್ದ ವ್ಯಕ್ತಿಗೆ ಫೋನ್ ಮಾಡಿದರು. ಮಹಡಿ ಮೇಲಿನ ಮನೆಯಲ್ಲಿದ್ದ ವ್ಯಕ್ತಿ ಮನೆಯಿಂದ ಹೊರಬಂದು ದಾದಿ ಕಮಲರನ್ನು ವಿನಾಕಾರಣ ಬೈಯಲು ಆರಂಭಿಸಿದ ಎನ್ನಲಾಗಿದೆ. ‘ನಾನು ಸರಕಾರಿ ಆಸ್ಪತ್ರೆಯಿಂದ ಮನೆಯಲ್ಲಿ ಕೊರೋನಾ ಚಿಕಿತ್ಸೆ ಪಡೆಯುತ್ತಿರುವ ನಿಮ್ಮವರಿಗೆ ಹಾಗೂ ಹೋಂ ಕ್ವಾರಂಟೈನ್‌ಗೆ ಒಳಗಾದ ರೋಗಿಯ ಪ್ರಥಮ ಸಂಪರ್ಕಿತರಿಗೆ ಔಷಧಿ ನೀಡಲು ಬಂದದ್ದು; ಕೆಳಗೆ ಬಂದು ಔಷಧಿ ಕೊಂಡುಹೋಗಿ’ ಎಂದದ್ದೇ ದಾದಿ ಕಮಲ ಮಾಡಿದ ತಪ್ಪು. ಅಷ್ಟಕ್ಕೇ ಅವಾಚ್ಯ ಶಬ್ಧಗಳಿಂದ ದಾದಿ ಕಮಲರನ್ನು ಬೈದ ಆ ವ್ಯಕ್ತಿ, ಕಾಲಿನ ಚಪ್ಪಲಿ ತೋರಿಸಿ ಬೆದರಿಕೆ ಒಡ್ಡಿದ ಎನ್ನಲಾಗಿದೆ. ಈ ಮಧ್ಯೆ ದಾದಿ ಕಮಲರ ಜೊತೆಗಿದ್ದ ಕಿರಿಯ ಆರೋಗ್ಯ ಮೇಲ್ವಿಚಾರಕ ಗಿರೀಶ್ ಮಹಡಿ ಹತ್ತಿ ಸೋಂಕಿತರಿಗೆ ಹಾಗೂ ಪ್ರಥಮ ಸಂಪರ್ಕಿತರಿಗೆ ನೀಡಬೇಕಾದ ಔಷಧಿಯನ್ನು ನೀಡಿದ್ದಲ್ಲದೇ; ಕೊರೋನಾ ವಾರಿಯರ್ಸ್‌ರನ್ನು ಈ ರೀತಿ ಅವಮಾನಿಸಬಾರದು ಎಂದು ವಿನಂತಿಸಿದರೂ ಕೇಳದ ಆ ವ್ಯಕ್ತಿ ದಾದಿ ಕಮಲರಿಗೆ ‘ನೀನು ಇಲ್ಲಿಗೆ ಬಂದರೆ ಬೇರೆಯೇ ಮರ್ಯಾದೆ ಮಾಡುತ್ತಿದ್ದೆ’ ಎಂದು ಚಪ್ಪಲಿ ತೋರಿಸಿದ ಎಂಬುದಾಗಿ ತಿಳಿದು ಬಂದಿದೆ.ಕೊರೋನಾ ವಾರಿಯರ್ಸ್ ಆಗಿ ಜೀವದ ಹಂಗು ತೊರೆದು ಕೆಲಸ ಮಾಡುತ್ತಿರುವ ಬೆಳ್ತಂಗಡಿ ತಾಲೂಕಿನ ಹಿರಿಯ ದಾದಿ ಕಮಲರಿಗೆ ಸಮಾಜಘಾತುಕ ವ್ಯಕ್ತಿಯೋರ್ವ ಮಾಡಿದ ಅವಮಾನ, ಮಾನಸಿಕ ಹಿಂಸೆ ಹಾಗೂ ಬೆದರಿಕೆಯ ಮಾಹಿತಿ ದೊರೆತರೂ ಸುಮ್ಮನಿರುವ ತಾಲೂಕು ಆರೋಗ್ಯ ಇಲಾಖೆ ಅಧಿಕಾರಿಗಳು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವ ಆರೋಗ್ಯ ಇಲಾಖೆಯ ಸಿಬ್ಬಂದಿಗಳಿಗೆ ಯಾವ ರೀತಿಯ ರಕ್ಷಣೆ ಒದಗಿಸಿಯಾರು….. ಈ ಪತ್ರಿಕಾ ವರದಿಯ ಮೂಲಕ ಮಾಹಿತಿ ಪಡೆದ ತಾಲೂಕಿನ ಪೊಲೀಸ್ ಅಧಿಕಾರಿಗಳಾದರೂ ಕೊರೋನಾ ವಾರಿಯರ್ ದಾದಿ ಕಮಲರಿಗೆ ನ್ಯಾಯ ಒದಗಿಸಿಯಾರೇ ಎಂಬುದನ್ನು ಕಾದು ನೋಡಬೇಕು.







