ಪರವೂರಿನಿಂದ ಬರುವ ಸ್ಥಳೀಯರಿಗೆ ಮೊದಲು ಕ್ವಾರಂಟೈನ್;ಧರ್ಮಸ್ಥಳ ಗ್ರಾ. ಪಂ.‌ನಿಂದ ಮಾದರಿ ಕಾರ್ಯಕ್ರಮ.

ಪರವೂರಿನಿಂದ ಬರುವ ಸ್ಥಳೀಯರಿಗೆ ಮೊದಲು ಕ್ವಾರಂಟೈನ್;ಧರ್ಮಸ್ಥಳ ಗ್ರಾ. ಪಂ.‌ನಿಂದ ಮಾದರಿ ಕಾರ್ಯಕ್ರಮ.
Facebook
Twitter
LinkedIn
WhatsApp

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನಲ್ಲಿ ದಿನೇದಿನ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇದಕ್ಕೆ ಧರ್ಮಸ್ಥಳ ಗ್ರಾಮವೂ ಹೊರತಾಗಿಲ್ಲ. ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕೊರೋನಾ ಸೋಂಕಿನ ಬೀಜ ಬಿತ್ತಿದ ಕುಖ್ಯಾತಿ ಹತ್ತಾರು ದಿನಗಳ ಹಿಂದೆ ರಾಜ್ಯ ಸರಕಾರ ಘೋಷಿಸಿದ ಜನತಾ ಲಾಕ್‌ಡೌನ್ ಸಂದರ್ಭ ಬೆಂಗಳೂರಿಂದ ತಮ್ಮ ಊರಿಗೆ ಬಂದ ಮಹಾನುಭಾವರಿಗೆ ಸಲ್ಲುತ್ತದೆ. ಊರಿಗೆ ಬಂದ ಈ ಬೆಂಗಳೂರಿನ ಮಂದಿ ತಮ್ಮ ಹುಟ್ಟೂರ ಶಾಲೆಗಳಲ್ಲಿ ಶಾಸಕ ಹರೀಶ್ ಪೂಂಜ ಊರ ಶಾಲೆಗಳಲ್ಲಿ ವ್ಯವಸ್ಥೆಗೊಳಿಸಿದ ಕ್ವಾರಂಟೈನ್ ಸೆಂಟರ್‌ಗಳಲ್ಲಿ ಹತ್ತು ದಿನ ಕ್ವಾರಂಟೈನ್ ಆಗಿ, ಕೊರೋನಾ ಟೆಸ್ಟ್ ಮಾಡಿಸಿಕೊಂಡು ನಂತರ ಊರಲ್ಲಿ ಓಡಾಡುತ್ತಿದ್ದರೆ; ಬೆಳ್ತಂಗಡಿ ತಾಲೂಕಲ್ಲಿ ಈ ಮಟ್ಟದಲ್ಲಿ ಕೊರೋನಾ ಸೋಂಕು ಹರಡುತ್ತಿರಲಿಲ್ಲ‌. ಆದರೆ ಶಾಸಕ ಹರೀಶ್ ಪೂಂಜ ಬೆಂಗಳೂರಿಂದ ಊರಿಗೆ ಬರಲು ವ್ಯವಸ್ಥೆಗೊಳಿಸಿದ ಬಸ್‌ಗಳಲ್ಲಿ ಊರಿಗೆ ಬಂದ ಈ ಮಂದಿ ಅದೇ ಶಾಸಕರ ವಿನಂತಿಯಂತೆ ತಮ್ಮೂರ ಶಾಲೆಗಳಲ್ಲಿ ಕ್ವಾರಂಟೈನ್ ಆಗಿ ತಮ್ಮೂರನ್ನು ಕೊರೋನಾ ಸೋಂಕಿನಿಂದ ರಕ್ಷಿಸಲು ಮನ ಮಾಡಲಿಲ್ಲ. ಇದೆಲ್ಲವೂ ಮುಗಿದ ಕತೆ ಅಲ್ಲ, ನಿಜವಾದ ವ್ಯಥೆ.ಇದೀಗ ಇನ್ನು ಮುಂದಾದರೂ ತಮ್ಮೂರಲ್ಲಿ ಪರವೂರಿನಿಂದ ಬಂದವರು ಕೊರೋನಾ ಸೋಂಕು ತಂದು ಹರಡುವ ಸಂದರ್ಭ ಬರದಿರಲಿ ಎಂದು ಸಂಕಲ್ಪಿಸಿರುವ ಧರ್ಮಸ್ಥಳ ಗ್ರಾಮ ಪಂಚಾಯತ್ ಆಡಳಿತ ಅದಕ್ಕಾಗಿ ಧರ್ಮಸ್ಥಳ ಪೊಲೀಸ್ ಠಾಣೆಯ ಸಹಭಾಗಿತ್ವದಲ್ಲಿ ಕೋವಿಡ್ ನಿಯಂತ್ರಣ ಕಾರ್ಯಪಡೆಯನ್ನು ರಚಿಸಿ, ಆಖಾಡಕ್ಕೆ ಇಳಿದಿದೆ. ಧರ್ಮಸ್ಥಳದ ಗಡಿಭಾಗಗಳಾದ ನೀರಚಿಲುಮೆ, ಕಲ್ಲೇರಿ ಹಾಗೂ ಮುಂಡ್ರುಪ್ಪಾಡಿ ಪ್ರದೇಶದ ಹೆದ್ದಾರಿಯಲ್ಲಿ ತಂಡಗಳನ್ನು ರಚಿಸಿ, ಹಗಲಿರುಳು ಬೆಂಗಳೂರು ಸಹಿತ ಹೊರಜಿಲ್ಲೆಗಳಿಂದ ಬರುವ ವ್ಯಕ್ತಿಗಳ ಬಗ್ಗೆ ನಿಗಾವಹಿಸಿ, ಅವರನ್ನು ಅವರವರ ಮನೆಗಳಲ್ಲೇ ಕನಿಷ್ಠ ಐದು ದಿನಗಳ ಕ್ವಾರಂಟೈನ್‌ಗೆ ಒಳಪಡಿಸಿ, ಕೊರೋನಾ ಟೆಸ್ಟ್ ಮಾಡಿಸಿ ನೆಗೆಟಿವ್ ಬಂದರೆ ಮಾತ್ರ ಅವರನ್ನು ಮುಕ್ತವಾಗಿ (ಅಗತ್ಯಕ್ಕಷ್ಟೇ) ಹೊರಗೆ ಓಡಾಡಲು ಬಿಡಲು ವ್ಯವಸ್ಥೆ ಮಾಡಿದ್ದಾರೆ. ಮೇ 9ರಿಂದ ಈ ಕಾರ್ಯಕ್ಕೆ ಇಳಿದಿರುವ ಧರ್ಮಸ್ಥಳ ಗ್ರಾಮ ಪಂಚಾಯತ್ ಹಾಗೂ ಧರ್ಮಸ್ಥಳ ಪೊಲೀಸರು ಮೊದಲ ದಿನವೇ ಧರ್ಮಸ್ಥಳಕ್ಕೆ ಬೆಂಗಳೂರಿಂದ ಬಂದ 13ಮಂದಿಯನ್ನು ಗುರುತಿಸಿ, ಅವರೆಲ್ಲರನ್ನೂ ಅವರವರ ಮನೆಗಳಲ್ಲೇ ಕಡ್ಡಾಯವಾಗಿ ಕ್ವಾರಂಟೈನ್‌ಗೆ ಒಳಪಡಿಸಿದ್ದಾರೆ. ತಪ್ಪಿದಲ್ಲಿ ಇವರೆಲ್ಲರಿಗೂ ಕಾನೂನು ಕ್ರಮದ ಎಚ್ಚರಿಕೆಯನ್ನು ನೀಡಲಾಗಿದೆ. ಸಧ್ಯಕ್ಕೆ ಈ ಕಾರ್ಯಪಡೆಯಲ್ಲಿ ಧರ್ಮಸ್ಥಳ ಪೊಲೀಸರೊಂದಿಗೆ ಧರ್ಮಸ್ಥಳ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಶ್ರೀನಿವಾಸ ರಾವ್, ಸದಸ್ಯರಾದ ಹರೀಶ್ ಸುವರ್ಣ, ಸುಧಾಕರ ಗೌಡ, ಹರ್ಷಿತ್ ಜೈನ್, ಮುರಲೀಧರದಾಸ್, ದಿನೇಶ್ ರಾವ್, ಸುಧಾಕರ ನಡುಗುಡ್ಡೆ, ಗ್ರಾಮ ಪಂಚಾಯತ್ ಸಿಬ್ಬಂದಿಗಳು ಹಾಗೂ ಒಂದಷ್ಟು ಮಂದಿ ಸ್ವಯಂಸೇವಕರು ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಧರ್ಮಸ್ಥಳ ಗ್ರಾಮ ಪಂಚಾಯತ್‌ನ ಈ ಕಾರ್ಯ ಈಗಾಗಲೇ ಊರವರ ಮೆಚ್ಚುಗೆಗೆ ಪಾತ್ರವಾಗಿದ್ದು, ಕೊರೋನಾ ಸೋಂಕು ಹರಡುವಿಕೆಗೆ ತಡೆಯೊಡ್ಡುವ ನಿಟ್ಟಿನಲ್ಲಿ ಕಾರ್ಯಾಚರಿಸಲು ತಾಲೂಕಿನ ಇತರ ಗ್ರಾಮ ಪಂಚಾಯತ್‌ಗಳಿಗೆ ಮಾದರಿಯಾಗಿದೆ.

Latest News

Related Posts