ಬೆಳ್ತಂಗಡಿ: ವಿಶ್ವ ಅಮ್ಮಂದಿರ ದಿನವನ್ನು ಬೆಳ್ತಂಗಡಿ ರೋಟರಿ ಕ್ಲಬ್ ವಿಭಿನ್ನ ಹಾಗೂ ವಿಶಿಷ್ಟ ರೀತಿಯಲ್ಲಿ ಅರ್ಥಪೂರ್ಣವಾಗಿ ಆಚರಿಸಿ ಮಾದರಿಯಾಗಿದೆ. ವಿನೂತನ ಪರಿಕಲ್ಪನೆಯಲ್ಲಿ ಮೇ 9ರಂದು ವಾತ್ಸಲ್ಯಮಯಿ ಅಮ್ಮನನ್ನು ‘ಭಾವ ಗಾನ’ದ ಮೂಲಕ ಸ್ಮರಿಸಿಕೊಂಡಿದೆ. ಯಕ್ಷಗಾನದ ಪ್ರತಿಭಾನ್ವಿತ ಯುವ ಭಾಗವತೆ ಕಾವ್ಯಶ್ರೀ ನಾಯಕ್ ಅಜೇರು ಅವರು ಆಯ್ದ ಕವಿಗಳ ಅಮ್ಮನನ್ನು ಕುರಿತಾದ ಭಾವಗೀತೆಗಳನ್ನು ರಾಗಸಂಯೋಜಿಸಿ ತನ್ನ ಮಧುರ ಕಂಠಸಿರಿಯಲ್ಲಿ ಪ್ರಸ್ತುತ ಪಡಿಸಿದರು. ಅದಕ್ಕೆ ಪೂರಕವಾಗಿ ಯಕ್ಷಗಾನ ಅರ್ಥಧಾರಿ-ಕಲಾವಿದ ಉಜಿರೆ ಅಶೋಕ ಭಟ್ ಅವರ ನಿರೂಪಣೆಯಲ್ಲಿ ತಾಯಿಯ ಮಾತೃಹೃದಯವನ್ನು ವಿಸ್ತೃತವಾಗಿ ಬಿಂಬಿಸಲಾಯಿತು. ಬೆಳ್ತಂಗಡಿ ರೋಟರಿ ಕ್ಲಬ್ ಮತ್ತು ಕುರಿಯ ವಿಠ್ಠಲ ಶಾಸ್ತ್ರೀ ಪ್ರತಿಷ್ಠಾನದ ಸಹಯೋಗದೊಂದಿಗೆ ಉಜಿರೆ ರತ್ನಮಾನಸದಲ್ಲಿ ಏರ್ಪಡಿಸಲಾದ ಆನ್ಲೈನ್ ಕಾರ್ಯಕ್ರಮವನ್ನು ಯುಪ್ಲಸ್ ವಾಹಿನಿ ಮೂಲಕ ನೇರಪ್ರಸಾರಗೊಳಿಸಿ ವಿಶ್ವದುದ್ದಕ್ಕೂ ಪಸರಿಸುವ ಮೂಲಕ ಕನ್ನಡಿಗರ ಅಮ್ಮಂದಿರಿಗೆ ನುಡಿ ನಮನ ಸಲ್ಲಿಸಿದೆ. ‘ನಮ್ಮಮ್ಮ ಶಾರದೆ’ ಗೀತೆಯೊಂದಿಗೆ ಕಾರ್ಯಕ್ರಮ ಆರಂಭಿಸಿ, ಸದಾನಂದ ಮುಂಡಾಜೆ ಸೇರಿದಂತೆ ನಾಡಿನ ಯುವ ಹಾಗೂ ಪ್ರತಿಭಾನ್ವಿತ ಕವಿಗಳು ರಚಿಸಿದ ಅಮ್ಮನ ಕುರಿತಾದ ಗೀತೆಗಳನ್ನು ಕಾವ್ಯಶ್ರೀ ಭಾವಪೂರ್ಣವಾಗಿ ಸಾ ದರಪಡಿಸಿದ್ದರು. ‘ಕಣ್ಣಾಲಿ ಕಂಡಿರುವ ದೇವತೆಯು ಅಮ್ಮ, ಬಣ್ಣಿಸಲು ವಾಙ್ಮಯವು ಸೋಲುವುದು ಅಮ್ಮ, ಲಾಲಿಸಿದಳು ಮಗನ ಮೊದಲಾದ ಗೀತೆಗಳೊಂದಿಗೆ ಸಾಗಿ ಬಂದ ಕಾರ್ಯಕ್ರಮ ‘ವಂದೇ ಮಾತರಂ’ ಗೀತೆಯೊಂದಿಗೆ ಸಮಾಪನಗೊಂಡಿತು. ಕೋರೋನ ಸಂಕಷ್ಟದ ಸಮಯದಲ್ಲಿ ಉತ್ತಮ ಕಲಾ ಕಾರ್ಯಕ್ರಮವನ್ನು ರೋಟರಿ ಕ್ಲಬ್ ಸಂಯೋಜಿಸಿ ಅಮ್ಮನ ದಿನವನ್ನು ಸಾರ್ಥಕಗೊಳಿಸಿದೆ.ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಬಿ. ಕೆ. ಧನಂಜಯ ರಾವ್ ಮತ್ತು ನಿಯೋಜಿತ ಅಧ್ಯಕ್ಷ ಶರತ್ಕೃಷ್ಣ ಪಡುವೆಟ್ನಾಯ ಸ್ವಾಗತಿಸಿ, ಕಾರ್ಯದರ್ಶಿ ಕೆ. ವಿ. ಶ್ರೀಧರ್ ಮತ್ತು ನಿಯೋಜಿತ ಕಾರ್ಯದರ್ಶಿ ಅಬೂಬಕ್ಕರ್ ವಂದಿಸಿದರು.







