ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಮಾಜಿ ಶಾಸಕ ವಸಂತ ಬಂಗೇರರ ಒಳ್ಳೆಯತನ ಹಾಗೂ ಪರೋಪಕಾರ ಬುದ್ಧಿಯನ್ನು ದುರುಪಯೋಗ ಪಡಿಸಿಕೊಂಡು ತಮ್ಮ ಬೇಳೆಯನ್ನು ಬೇಯಿಸಿಕೊಂಡು; ವಸಂತ ಬಂಗೇರರ ಹೆಸರಿಗೆ ಕಳಂಕ ತಂದ ಸಾಕಷ್ಟು ಪ್ರಕರಣಗಳು ತಾಲೂಕಿನ ಜನತೆಯ ಕಣ್ಣ ಮುಂದೆ ಇದೆ. ತನ್ನ ಬಳಿ ಸಹಾಯ ಕೇಳಿ ಬಂದವರಿಗೆ ತಾನು ನೆರವಾಗಬೇಕು ಎಂಬ ಒಂದಂಶದ ಪ್ರಾಮಾಣಿಕ ಚಿಂತನೆಯನ್ನು ಹೊಂದಿರುವ ಮಾಜಿ ಶಾಸಕ ವಸಂತ ಬಂಗೇರರನ್ನು ಅವರ ಸುತ್ತಮುತ್ತ ಇರುವ ಕೆಲವು ವ್ಯಕ್ತಿಗಳು ಬಳಸಿಕೊಂಡದ್ದಕ್ಕಿಂತ ದುರ್ಬಳಕೆ ಮಾಡಿಕೊಂಡದ್ದೇ ಹೆಚ್ಚು. ಇದೀಗ ಬೆಳ್ತಂಗಡಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಸುದೆಮುಗೇರು ವಾರ್ಡ್‌ನಲ್ಲಿ ಕೊರೋನಾ ಸೋಂಕು ತಡೆಗೆ ತಾಲೂಕು ಆರೋಗ್ಯ ಇಲಾಖೆ ಹಾಗೂ ಪಟ್ಟಣ ಪಂಚಾಯತ್ ಕೈಗೊಂಡ ಕ್ರಮಗಳ ವಿರುದ್ಧ ಮಾಜಿ ಶಾಸಕ ವಸಂತ ಬಂಗೇರರಲ್ಲಿ ಕೆಲವರು ದೂರಿಕೊಂಡಿದ್ದು; ಪೂರ್ವಾಪರ ವಿಮರ್ಶಿಸದ ವಸಂತ ಬಂಗೇರರು ಅಧಿಕಾರಿಗಳ ಮೇಲೆ ಹರಿಹಾಯುವ ಮೂಲಕ ‘ಕೋಣ ಕರು ಹಾಕಿತು ಎಂದೊಡನೆ ಕೊಟ್ಟಿಗೆಯಲ್ಲಿ ಕಟ್ಟು’ ಎಂಬ ಕನ್ನಡದ ನಾಣ್ಣುಡಿಯನ್ನು ಜ್ಞಾಪಿಸಿದ್ದಾರೆ.ಇಲ್ಲಿ ನಡೆದದ್ದು ಇಷ್ಟೇ; ಬೆಳ್ತಂಗಡಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಸುದೆಮುಗೇರು ವಾರ್ಡ್‌ನಲ್ಲಿ ಕಳೆದ ವಾರ 13 ಕೊರೋನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿತ್ತು. ತುಂಬಾ ಹತ್ತಿರಹತ್ತಿರ ಮನೆಗಳಿರುವ ಈ ಕಾಲನಿಯಲ್ಲಿ ಬಹುತೇಕ ಎಲ್ಲ ಮನೆಯವರೂ ಸೋಂಕಿತರ ಪ್ರಥಮ ಸಂಪರ್ಕದಲ್ಲಿದ್ದವರೇ. ಬಡವರಾದ ಇಲ್ಲಿನ ನಿವಾಸಿಗರು ಹೊಟ್ಟೆಪಾಡಿಗೆ ಕೂಲಿ ಕೆಲಸವನ್ನು ಅವಲಂಬಿಸಿದವರು. ಇವರಿಗೆ ಯಾವುದೇ ಮುನ್ಸೂಚನೆ ನೀಡದೇ, ಹಸಿದ ಹೊಟ್ಟೆಗೆ ಹಿಟ್ಟಿನ ವ್ಯವಸ್ಥೆಯನ್ನೂ ಮಾಡದೇ ಬೆಳ್ತಂಗಡಿ ತಾಲೂಕು ಆರೋಗ್ಯ ಇಲಾಖೆ ಹಾಗೂ ಬೆಳ್ತಂಗಡಿ ಪಟ್ಟಣ ಪಂಚಾಯತ್ ಇಡೀ ಸುದೆಮುಗೇರು ಕಾಲನಿಯನ್ನೇ ಸಿಲ್‌ಡೌನ್ ಮಾಡಿ, ಇಲ್ಲಿನ ನಿವಾಸಿಗರು ಹೊರಹೋಗದಂತೆ ತಾಕೀತು ಮಾಡಿತು. ಇಲ್ಲಿ ಹದಿಮೂರು ಕೊರೋನಾ ಪಾಸಿಟಿವ್ ಪ್ರಕರಣ ವರದಿಯಾದ್ದರಿಂದ ಸರಕಾರದ ಕೋವಿಡ್ ನಿಯಂತ್ರಣಾ ನಿಯಮದಂತೆ ಈ ಪ್ರದೇಶವನ್ನು ಸೀಲ್‌ಡೌನ್ ಮಾಡಿದ ಇಲಾಖೆಗಳ ಕ್ರಮ ಕಾನೂನು ಪ್ರಕಾರ ಸರಿಯೇ. ಕೊರೋನಾ ಸೋಂಕು ಹರಡುವಿಕೆ ತಡೆಗೆ ಇದು ಅನಿವಾರ್ಯ ಕೂಡಾ. ಆದರೆ ಇಲ್ಲಿನ ಬಡಪಾಯಿ ನಿವಾಸಿಗರಿಗೆ ದಿನನಿತ್ಯದ ಊಟೋಪಚಾರಕ್ಕೆ ವ್ಯವಸ್ಥೆ ಮಾಡಬೇಕಾದ ಜವಾಬ್ದಾರಿಯಿಂದ ತಾಲೂಕು ಆಡಳಿತ ನುಣುಚಿಕೊಂಡದ್ದು ಮಾತ್ರ ಅಮಾನವೀಯ ಕೃತ್ಯ. ಯಾರೂ ಹಸಿವಿನಿಂದ ಸಾಯಬಾರದು ಎಂಬ ಮಾನವೀಯ ಗುಣವನ್ನೂ ಮರೆತ ತಾಲೂಕು ಆಡಳಿತಕ್ಕೆ ಧಿಕ್ಕಾರವಿರಲಿ.ಸ್ಥಳೀಯ ಪಟ್ಟಣ ಪಂಚಾಯತ್ ಸದಸ್ಯ ಜಗದೀಶ್ ಸಹಜವಾಗಿಯೇ ಇಲ್ಲಿನ ನಿವಾಸಿಗರ ರಕ್ಷಣೆಗೆ ನಿಂತರು. ಮಾಜಿ ಶಾಸಕ ವಸಂತ ಬಂಗೇರರಲ್ಲಿ ಈ ಬಗ್ಗೆ ದೂರನ್ನೂ ನೀಡಿದರು. ದೂರು ಕೇಳಿದ ವಸಂತ ಬಂಗೇರ ಮೊದಲಿಗೆ ಸರಿಯಾದ ಹೆಜ್ಜೆ ಇರಿಸಿ, ಸೀಲ್‌ಡೌನ್‌ನ ಮರುದಿನ ಅಂದರೆ ಮೇ 10ರ ಮಧ್ಯಾಹ್ನ ಸಮಾನ ಮನಸ್ಕರ ಸಹಕಾರದಿಂದ ಸೀಲ್‌ಡೌನ್‌ಗೆ ಒಳಗಾದ ಸುದೆಮುಗೇರು ಕಾಲನಿಯ ನಿವಾಸಿಗರಿಗೆ ದಿನಬಳಕೆಯ ವಸ್ತುಗಳ ಕಿಟ್‌ಗಳನ್ನು ವಿತರಿಸಿ, ಅವರ ಊಟ-ತಿಂಡಿಗೆ ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದರು.ಆದರೆ ಈ ಪ್ರದೇಶವನ್ನು ಸೀಲ್‌ಡೌನ್ ಮಾಡಿದ ಉದ್ಧೇಶವನ್ನು ಸರಿಯಾಗಿ ಅರ್ಥೈಸಿಕೊಳ್ಳುವ ವ್ಯವದಾನ ತೋರದ ಮಾಜಿ ಶಾಸಕ ವಸಂತ ಬಂಗೇರರು, ಪೂರ್ವಾಪರ ವಿಮರ್ಶಿಸದೇ ಸೀಲ್‌ಡೌನ್ ಮಾಡಿದ ಅಧಿಕಾರಿಗಳಿಗೆ ಗದರಿದರಲ್ಲದೇ; ತಕ್ಷಣ ಸೀಲ್‌ಡೌನ್ ತೆರವುಗೊಳಿಸುವಂತೆ ತಹಶೀಲ್ದಾರ್ ಮಹೇಶ್ ಜೆ. ಹಾಗೂ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಸುಧಾಕರ್ ಮತ್ತು ತಾಲೂಕು ಆರೋಗ್ಯಾಧಿಕಾರಿ ಡಾl ಕಲಾಮಧುವಿಗೆ ತಾಕೀತು ಮಾಡಿದರು. ಮಾಜಿ ಶಾಸಕ ವಸಂತ ಬಂಗೇರರ ಒತ್ತಡಕ್ಕೆ ಮಣಿದ ಅಧಿಕಾರಿಗಳು ಮೇ 10ರ ಸಂಜೆಯೇ ಸೀಲ್‌ಡೌನನ್ನು ತೆರವುಗೊಳಿಸುವ ಮೂಲಕ ಮುಖ್ಯವಾಗಿ ಪಟ್ಟಣ ಪಂಚಾಯತ್‌ನ ನಾಗರಿಕರನ್ನು ಕೊರೋನಾತಂಕಕ್ಕೆ ತಳ್ಳಿದರು.ಕೊರೋನಾ ಎರಡನೇ ಅಲೆ ಯಾರೂ ಊಹಿಸದ ರೀತಿಯಲ್ಲಿ ವೇಗವಾಗಿ ಹರಡುತ್ತಿದೆ. ಇಂತಹ ಸಂದರ್ಭದಲ್ಲಿ ಕೊರೋನಾ ಸೋಂಕು ಹರಡುವಿಕೆ ತಡೆಯುವ ನಿಟ್ಟಿನಲ್ಲಿ ಸರಕಾರಿ ಇಲಾಖಾಧಿಕಾರಿಗಳು ಕೈಗೊಳ್ಳುವ ಮುಂಜಾಗ್ರತಾ ಕ್ರಮಗಳ ಅನುಷ್ಠಾನದಲ್ಲಿ ಸಹಕರಿಸುವ ಮೂಲಕ ತಾಲೂಕಿನ ಜನತೆಯನ್ನು ಕೊರೋನಾತಂಕದಿಂದ ಕಾಪಾಡಬೇಕಾದ ಗುರುತರ ಜವಾಬ್ದಾರಿ ಹೊಂದಿದ ತಾಲೂಕನ್ನು ಐದು ಬಾರಿ ವಿಧಾನಸಭೆಯಲ್ಲಿ ಪ್ರತಿನಿಧಿಸಿದ ಮಾಜಿ ಶಾಸಕ ವಸಂತ ಬಂಗೇರ, ತನ್ನ ಕೆಲ ಹಿಂಬಾಲಕರ ಮಾತು ಕೇಳಿ ಕೊರೋನಾ ಹಾಟ್‌ಸ್ಪಾಟ್ ಆಗುವ ಭೀತಿಯಲ್ಲಿರುವ ಬೆಳ್ತಂಗಡಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಸುದೆಮುಗೇರು ಕಾಲನಿಯನ್ನು ಸೀಲ್‌ಡೌನ್ ಮುಕ್ತವಾಗಿಸಲು ಅಧಿಕಾರಿಗಳ ಮೇಲೆ ಒತ್ತಡ ಹಾಕಿದ್ದು ಸುದೆಮುಗೇರು ಕಾಲನಿಯ ಜನತೆಗೆ ಉಪಕರಿಸುವ ಆತುರದಲ್ಲಿ ಅವರನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳಿದಂತಾದೀತು ಎಂಬ ಆತಂಕ ಸುದೆಮುಗೇರು ಪರಿಸರದ ನಾಗರಿಕರನ್ನು ಕಾಡಲಾರಂಭಿಸಿದೆ. ಕಾರಣ ಸುದೆಮುಗೇರು ಕಾಲನಿಯ 97ಮಂದಿ ನಿವಾಸಿಗರ ಕೊರೋನಾ ಟೆಸ್ಟ್ ರಿಪೋರ್ಟ್ ಇನ್ನೂ ಬರಬೇಕಷ್ಟೇ. ಅದಕ್ಕೂ ಮುನ್ನ ಅಲ್ಲಿನ ಸೀಲ್‌ಡೌನ್ ತೆರವುಗೊಳಿಸಿ, ಎಲ್ಲರನ್ನೂ ಊರು ತಿರುಗಲು ಬಿಟ್ಟ ಪರಿಣಾಮ…. ಕೊರೋನಾ ಬ್ಲಾಸ್ಟ್ ಆಗುವ ಭೀತಿ ಹೆಚ್ಚಿಸಿದೆ.. ಹಾಗಾಗದಿರಲಿ ಎಂದು ಹಾರೈಸೋಣಾ.






