ಬೆಳ್ತಂಗಡಿ: ಮೇ 13ರಂದು ಸಂಜೆಯ ಬಳಿಕ ದಿಡುಪೆ, ಚಾರ್ಮಾಡಿ, ನೇತ್ರಾವತಿ ಹಾಗೂ ಮೃತ್ಯುಂಜಯ ನದಿಗಳ ಉಗಮ ಸ್ಥಾನಗಳಲ್ಲಿ ಭಾರಿ ಮಳೆಯಾಗಿದ್ದು, ಈ ನದಿಗಳ ಹರಿವು ಹೆಚ್ಚಳಗೊಂಡು ಅಲ್ಲಲ್ಲಿ ಹಾನಿ ಸಂಭವಿಸಿದೆ. ಈ ನದಿಗಳು ಹರಿಯುವ ಗ್ರಾಮಗಳಲ್ಲೂ ಮಳೆಯಾದ ಕಾರಣ ತಗ್ಗು ಪ್ರದೇಶಗಳಲ್ಲೂ ನೀರಿನ ಹರಿವಿನ ಪ್ರಮಾಣ ಹೆಚ್ಚಳ ಗೊಂಡಿದ್ದು, ಶುಕ್ರವಾರ ಬೆಳಿಗ್ಗೆಯಿಂದ ನದಿಗಳ ನೀರಿನ ಮಟ್ಟ ಸಾಮಾನ್ಯ ಸ್ಥಿತಿಗೆ ಮರಳ ತೊಡಗಿತು.ನೇತ್ರಾವತಿ ನದಿಯನ್ನು ಸೇರುವ ದಿಡುಪೆ ಭಾಗದ ನಂದಿಕಾಡು ಹಾಗೂ ಆನಡ್ಕ ಹಳ್ಳಗಳಲ್ಲಿ ಹೆಚ್ಚಿನ ಪ್ರಮಾಣದ ನೀರು ಹರಿದ ಕಾರಣ ಈ ಪರಿಸರದ ಎಸ್. ಎನ್. ತುಳುಪುಳೆ, ನಾರಾಯಣಗೌಡ, ಲಕ್ಷ್ಮಣಗೌಡ ಮೊದಲಾದವರ ಕೃಷಿ ಉಪಯೋಗದ ಪಂಪ್ಶೆಡ್ಗಳಿಗೆ ಹಾನಿಯಾಗಿದೆ. ಪಂಪುಗಳಿಗೆ ಅಳವಡಿಸಿದ್ದ ಪೈಪುಗಳು ನೀರಿನಲ್ಲಿ ಕೊಚ್ಚಿ ಹೋಗಿ ನಷ್ಟ ಉಂಟಾಗಿದೆ. ಕೆಲವು ತೋಟ ಗಳಿಗೆ ನೀರು ನುಗ್ಗಿದ ಕಾರಣ ಸಂಗ್ರಹಿಸಿಟ್ಟಿದ್ದ ಕಟ್ಟಿಗೆ ಸಹಿತ ಕೃಷಿ ಉಪಕರಣಗಳು ನದಿ ನೀರಿನ ಪಾಲಾಗಿವೆ. ದಿಡುಪೆ ಪ್ರದೇಶದಲ್ಲಿ ನೇತ್ರಾವತಿ ನದಿಗೆ ಇರುವ ಸಾಂಪ್ರದಾಯಿಕ ಕಟ್ಟಗಳು ನೀರು ಹರಿದ ರಭಸಕ್ಕೆ ಕೊಚ್ಚಿ ಹೋಗಿವೆ. ನಂದಿಕಾಡು ಹಾಗೂ ಆನಡ್ಕ ಹಳ್ಳಕ್ಕೆ ಇರುವ ಕಿಂಡಿ ಅಣೆಕಟ್ಟಿಗೆ ನೀರಿನ ಜತೆ ತೇಲಿಕೊಂಡು ಬಂದ ಮರ ಸಿಲುಕಿದ ಕಾರಣ ನೀರು ಸಮೀಪದ ತೋಟಗಳಿಗೆ ನುಗ್ಗಿತು. ಸ್ಥಳೀಯರು ಸೇರಿ ರಾತ್ರಿಯೇ ಮರವನ್ನು ತೆರವುಗೊಳಿಸಿದ ಕಾರಣ ಹೆಚ್ಚಿನ ಹಾನಿ ತಪ್ಪಿದೆ. ಮೃತ್ಯುಂಜಯ ನದಿಯ ಮುಂಡಾಜೆ ಕಾಪು ಕಿಂಡಿ ಅಣೆಕಟ್ಟು ಸಂಪೂರ್ಣ ತುಂಬಿದ್ದು ಮರಮಟ್ಟು, ಕಸ, ತ್ಯಾಜ್ಯಗಳು ಕಿಂಡಿ ಅಣೆಕಟ್ಟಿನ ಮೇಲೆ ಸಂಗ್ರಹಗೊಂಡಿವೆ. ಇದರಿಂದ ಕಿಂಡಿ ಅಣೆಕಟ್ಟಿನ ಹಲಗೆ ತೆರವು ಕಾಮಗಾರಿಗೆ ಸಮಸ್ಯೆ ಉಂಟಾಗಲಿದೆ.ಮಲವಂತಿಗೆ ಗ್ರಾಮದ ಆನಡ್ಕ, ಕಡಮಗುಂಡಿ ಪರಿಸರದ 10 ಕುಟುಂಬಗಳು ನಿತ್ಯದ ಉಪಯೋಗಕ್ಕೆ ಇಲ್ಲಿನ ಜಲಪಾತದ ನೀರನ್ನು ಬಳಸುತ್ತಾರೆ. ಈ ಪ್ರದೇಶದ ಹೆಚ್ಚಿನ ಕಡೆ ಕೆರೆ ಅಥವಾ ಬಾವಿಗಳು ಇಲ್ಲ. ಜಲಪಾತದ ನೀರನ್ನು ಪೈಪುಗಳ ಮೂಲಕ ತಂದು ಉಪಯೋಗಿಸಲಾಗುತ್ತದೆ. ಇದಕ್ಕೆ ಅಳವಡಿಸಿದ ಪೈಪುಗಳು ಕೊಚ್ಚಿಹೋಗಿದ್ದು, ಕುಡಿಯುವ ನೀರಿಗೆ ಸಮಸ್ಯೆ ಉಂಟಾಗಿದೆ. ಪೈಪುಗಳನ್ನು ಅಳವಡಿಸಿರುವ ಜಾಗದಲ್ಲಿ ಗುಡ್ಡ ಕುಸಿತ ಉಂಟಾಗಿದೆ. ಗುಡ್ಡ ಕುಸಿತ ಸ್ಥಳಕ್ಕೆ ಯಾವುದೇ ವಾಹನ ಅಥವಾ ಯಂತ್ರೋಪಕರಣಗಳು ಹೋಗಲು ಸಾಧ್ಯವಿಲ್ಲ. ಈ ಪ್ರದೇಶದಲ್ಲಿ ವಿಪರೀತ ಇಂಬಳಗಳ ಕಾಟವೂ ಇರುವುದರಿಂದ ಇದನ್ನು ತೆರವುಗೊಳಿಸಲು ಒಂದಿಷ್ಟು ಸಮಯ ತಗಲಬಹುದು ಎಂದು ಸ್ಥಳೀಯರು ತಿಳಿಸಿದ್ದಾರೆ. ಕಳೆದ ವರ್ಷ ಮೇ 31ರಂದು ದಿಡುಪೆ, ಕುಕ್ಕಾವು, ಮಲವಂತಿಗೆ, ಮಿತ್ತಬಾಗಿಲು ಮೊದಲಾದ ಪ್ರದೇಶಗಳಲ್ಲಿ ಎರಡು ಗಂಟೆ ಕಾಲ ಸುರಿದ ಭಾರೀ ಮಳೆಗೆ ಸುತ್ತಮುತ್ತಲ ಹಳ್ಳ ತೋಡುಗಳು ತುಂಬಿ ಹರಿದು ನೇತ್ರಾವತಿ ನದಿಯಲ್ಲಿ ಮಳೆಗಾಲದ ಆರಂಭಕ್ಕೆ ಮೊದಲೇ ಭಾರಿ ಪ್ರಮಾಣದಲ್ಲಿ ನೀರು ಏರಿಕೆಯಾಗಿ ಪರಿಸರದ ಜನರು ನೆರೆಯ ಭೀತಿಗೊಳಗಾಗಿದ್ದರು. ಕೃಷಿಗೆ ಸಂಬಂಧಪಟ್ಟಂತೆ ನಷ್ಟವು ಸಂಭವಿಸಿತ್ತು. ಈ ಬಾರಿ ಮೇ 13ರಂದು ಇಂತಹ ಸ್ಥಿತಿ ಮತ್ತೆ ನಿರ್ಮಾಣವಾಗಿದೆ.







