ಬೆಳ್ತಂಗಡಿ: ಕೊರೊನಾ ಪೀಡಿತರಿಗೆ ಯಾವ ರೀತಿ ಚಿಕಿತ್ಸೆಯನ್ನು ಆಶಾ ಕಾರ್ಯಕರ್ತೆಯರು ನೀಡಬಹುದು ಎಂಬ ಮಾಹಿತಿಯನ್ನು ನೀಡುವ ಕೋವಿಡ್ ಶಿಕ್ಷಣ ಅಭಿಯಾನಕ್ಕೆ ಶಾಸಕ ಹರೀಶ್ ಪೂಂಜ ಉಜಿರೆಯ ಶ್ರೀಕೃಷ್ಣಾನುಗ್ರಹ ಸಭಾಭವನದಲ್ಲಿ ಮೇ 26ರಂದು ಚಾಲನೆ ನೀಡಿದರು.ರಾಜ್ಯದಲ್ಲೇ ಈ ರೀತಿಯ ಮೊದಲ ಪ್ರಯತ್ನ ಬೆಳ್ತಂಗಡಿಯಲ್ಲಾಗುತ್ತಿದ್ದು ಮೊದಲ ಹಂತದಲ್ಲಿ ಮೇ 26ರಂದು ಉಜಿರೆ ಪಂಚಾಯತಿ ಮಟ್ಟದಲ್ಲಿನ ಎಲ್ಲಾ ಆಶಾ ಕಾರ್ಯಕರ್ತೆಯರಿಗೆ ಶಾಸಕರು ಅಕ್ಸಿಮೀಟರ್, ಪಾಸಿಟಿವ್ ವ್ಯಕ್ತಿಗಳು ಅನುಸರಿಸಬೇಕಾದ ಬಗೆಗಿನ ಕರಪತ್ರ ಹಾಗೂ ಮಾಸ್ಕ್ ನೀಡುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು.ಬೆಳ್ತಂಗಡಿಯ ರೋಟರಿ ಕ್ಲಬ್ ಸಹಕಾರದೊಂದಿಗೆ ಶಾಸಕರು ತಾಲೂಕಿನಾದ್ಯಂತ ಎಲ್ಲಾ 48 ಗ್ರಾಮ ಪಂಚಾಯತ್ ಮಟ್ಟದಲ್ಲಿ ಅಭಿಯಾನ ನಡೆಸಲಿದ್ದಾರೆ. ಈಗಾಗಲೇ ಆಯಾ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಸ್ಥಳೀಯ ರೋಟರಿ ಸದಸ್ಯ ವೈದ್ಯರುಗಳನ್ನು ನಿಯುಕ್ತಿಗೊಳಿಸಲಾಗಿದೆ.ಸಮಾರಂಭದಲ್ಲಿ ಬೆಂಗಳೂರಿನ ಚಾರ್ಟರ್ಡ್ ಅಕೌಂಟೆಂಟ್ ಅನಂತ ಕೃಷ್ಣ ಪಡ್ವೆಟ್ನಾಯ, ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಧನಂಜಯ ರಾವ್ ಬಿ ಕೆ., ಕಾರ್ಯದರ್ಶಿ ಶ್ರೀಧರ ಕೆ., ನಿಯೋಜಿತ ಕಾರ್ಯದರ್ಶಿ ಅಬೂಬಕರ್, ಕಾರ್ಯಕರ್ತೆಯರ ಮೆಂಟರ್ ಹರಿಣಿ ಉಪಸ್ಥಿತರಿದ್ದರು.ರೋಟರಿ ಸದಸ್ಯ ವೈದ್ಯರುಗಳಾದ ಡಾl ಅಶ್ವಿನಿ ಉದ್ಯಾವರ, ಡಾl ಗೋಪಾಲಕೃಷ್ಣ ಭಟ್ ಉಜಿರೆ, ಡಾl ಪ್ರದೀಪ ನಾವೂರು ಮೊದಲ ತರಬೇತಿ ನಡೆಸಿಕೊಟ್ಟರು. ರೋಟರಿ ನಿಯೋಜಿತ ಅಧ್ಯಕ್ಷ ಶರತ್ ಕೃಷ್ಣ ಪಡ್ವೆಟ್ನಾಯ ಸ್ವಾಗತಿಸಿ ಪ್ರಸ್ತಾವಿಸಿದರು.ಕೊರೋನಾ ಮುಕ್ತಗೊಳಿಸುವ ನಿಟ್ಟಿನಲ್ಲಿ ರಾಜ್ಯದಲ್ಲೇ ಇದೊಂದು ಹೊಸ ಹೆಜ್ಜೆಯಾಗಿದೆ. ಮುಂದಿನವಾರವಿಡೀ ಅಭಿಯಾನ ನಡೆಯಲಿದೆ. ಸ್ಥಳೀಯ ವೈದ್ಯರು ಸಹಕಾರ ನೀಡುತ್ತಿರುವುದರಿಂದ ಪಾಸಿಟಿವ್ ಬಂದವರಿಗೆ ಆರೋಗ್ಯ ಸುಧಾರಣೆಯ ಬಗ್ಗೆ ವಿಶ್ವಾಸ ಮೂಡಬಲ್ಲುದು. ಆಶಾ ಕಾರ್ಯಕರ್ತೆಯರಿಗೆ ಧೈರ್ಯದಿಂದ ಮುಂದಿರುವ ಸವಾಲುಗಳನ್ನು ಎದುರಿಸಲು ಈ ತರಬೇತಿ ಸಹಕಾರಿಯಾಗಲಿದೆ. ಇದಕ್ಕೆ ಸಹಕಾರ ನೀಡುತ್ತಿರುವ ರೋಟರಿಯವರಿಗೆ, ಆಕ್ಸಿಮೀಟರ್‌ಗಳನ್ನು ನೀಡಿದ ದಾನಿಗಳಿಗೆ ಶಾಸಕ ಹರೀಶ್ ಪೂಂಜ ಅಭಿನಂದನೆ ಸಲ್ಲಿಸಿದರು.






