ಬೆಳ್ತಂಗಡಿ: ಎರಡನೇ ಅಲೆಯ ಕೊರೋನಾದೊಂದಿಗೆ ಜನತೆಯಲ್ಲಿ ಇನ್ನಷ್ಟು ಭೀತಿ ಹುಟ್ಟಿಸಿದ ಬ್ಲ್ಯಾಕ್ ಫಂಗಸ್ ವೈರಸ್ ಇದೀಗ ಬೆಳ್ತಂಗಡಿ ತಾಲೂಕಿಗೂ ವಕ್ಕರಿಸಿದ್ದು ಓರ್ವನನ್ನು ಬಲಿ ಪಡೆದಿದೆ.ಬೆಳ್ತಂಗಡಿ ತಾಲೂಕಿನ ತಣ್ಣೀರುಪಂತ ಗ್ರಾಮದ ಅಳಕೆ ನಿವಾಸಿ ನೋಣಯ್ಯ ಪೂಜಾರಿ (55) ಬ್ಲ್ಯಾಕ್ ಫಂಗಸ್ ವೈರಸ್ಗೆ ಬಲಿಯಾದ ವ್ಯಕ್ತಿ. ಕೆಲ ದಿನಗಳಿಂದ ಮಂಗಳೂರಿನ ಕೆ.ಎಂ.ಸಿ. ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದ ನೋಣಯ್ಯ ಪೂಜಾರಿಗೆ ಕೊರೋನಾ ಪಾಸಿಟಿವ್ ಜೊತೆಗೆ ಬ್ಲ್ಯಾಕ್ ಫಂಗಸ್ ಕಂಡುಬಂದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಚಿಕಿತ್ಸೆ ಫಲಕಾರಿಯಾಗದೇ ನೋಣಯ್ಯ ಪೂಜಾರಿ ಮೇ 27ರಂದು ಮೃತಪಟ್ಟಿರುತ್ತಾರೆ. ಬೆಳ್ತಂಗಡಿ ತಾಲೂಕಿನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಸಾಕಷ್ಟು ಸಂಖ್ಯೆಯಲ್ಲಿದ್ದು, ಇದೀಗ ಬ್ಲ್ಯಾಕ್ ಫಂಗಸ್ ಸಾಂಕ್ರಾಮಿಕ ರೋಗವೂ ತಾಲೂಕಿಗೆ ವಕ್ಕರಿಸಿದ್ದು, ತಾಲೂಕಿನ ನಾಗರಿಕರು ಸ್ವಯಂ ಪ್ರೇರಿತರಾಗಿ ಇನ್ನಷ್ಟು ಮುನ್ನೆಚ್ಚರಿಕೆ ವಹಿಸದಿದ್ದರೆ, ಅಪಾಯ ಕಟ್ಟಿಟ್ಟದ್ದು ಎಂಬುದು ತಜ್ಞರ ಅಭಿಪ್ರಾಯ. ಕಳೆದ ಕೆಲದಿನಗಳಿಂದ ತಾಲೂಕಿನ ನೆರಿಯಾ, ತೋಟತ್ತಾಡಿ, ಚಾರ್ಮಾಡಿ ಹಾಗೂ ಮುಂಡಾಜೆ ಗ್ರಾಮಗಳಲ್ಲಿ ಅತೀ ಹೆಚ್ಚು ಪ್ರಮಾಣದಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗುತ್ತಿದ್ದು, ಈ ಭಾಗದ ಕಾನೂನು ಹಾಗೂ ಸರಕಾರದ ಕೋವಿಡ್ ನಿಬಂಧನೆ ಪಾಲಿಸುವ ನಾಗರಿಕರಲ್ಲಿ ಆತಂಕ ಸೃಷ್ಟಿಸಿದೆ.






