ಬೆಳ್ತಂಗಡಿ: ಕೋವಿಡ್-19 ಲಾಕ್‌ಡೌನ್‌ನಿಂದಾಗಿ ಉದ್ಯೋಗವಿಲ್ಲದೇ ಸಂಕಷ್ಟದಲ್ಲಿರುವ 70 ಬಡ ಕುಟುಂಬಿಕರಿಗೆ ಬೆಳ್ತಂಗಡಿಯ ಹೋಲಿ ರೆಡಿಮರ್ ಚರ್ಚ್ ವತಿಯಿಂದ ಆಹಾರ ಧಾನ್ಯಗಳ ಕಿಟ್ ವಿತರಿಸುವ ಕಾರ್ಯಕ್ರಮವು ಜೂನ್ 3ರಂದು ಚರ್ಚ್ ವಠಾರದಲ್ಲಿ ನಡೆಯಿತು.ಈ ಸಂದರ್ಭಸಲ್ಲಿ ಸಾಂಕೇತಿಕವಾಗಿ ಕಿಟ್ ವಿತರಿಸಿ ಆಶೀರ್ವಚನ ನೀಡಿದ ಬೆಳ್ತಂಗಡಿ ಹೋಲಿ ರೆಡಿಮರ್ ಚರ್ಚ್‌ನ ಪ್ರಧಾನ ಧರ್ಮಗುರು ವಂದನೀಯ ಜೋಸೆಫ್ ಕಾರ್ಡೋಝ, ಮನುಕುಲವನ್ನು ಹಿಂಸಿಸಿ ಕಾಡುತ್ತಿರುವ ಮಹಾಮಾರಿ ಕೊರೋನಾ ಸೋಂಕು ದೇವರ ದಯೆಯಿಂದ ಸಂಪೂರ್ಣ ನಿರ್ಮೂಲನವಾಗಲಿ ಎಂದು ಹಾರೈಸಿದರು.ಬೆಳ್ತಂಗಡಿ ಹೋಲಿ ರೆಡಿಮರ್ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲ ವಂದನೀಯ ಜೇಸನ್ ಮೋನಿಸ್, ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ಎಲೋಶಿಯಸ್ ಲೋಬೊ, ಕಾರ್ಯದರ್ಶಿ ಪೌಲಿನ್ ರೇಗೊ, ಚರ್ಚ್ ವ್ಯಾಪ್ತಿಯ 18ವಾಳೆಯಗಳ ಗುರಿಕ್ಕಾರರು ಉಪಸ್ಥಿತರಿದ್ದರು. ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ಎಲೋಶಿಯಸ್ ಲೋಬೊ ಪ್ರಾಸ್ತಾವಿಕವಾಗಿ ಮಾತನಾಡಿ ಕೊರೋನಾ ಸಂಕಷ್ಟದ ದಿನಗಳಲ್ಲಿ ಬಡವರ ಬದುಕಿನ ಬವಣೆಯನ್ನು ಬಿಡಿಸಿಟ್ಟರಲ್ಲದೇ, ಕಾರ್ಯಕ್ರಮಕ್ಕೆ ಎಲ್ಲರನ್ನು ಸ್ವಾಗತಿಸಿದರು. ಚರ್ಚ್ ಪಾಲನಾ ಮಂಡಳಿಯ ಕಾರ್ಯದರ್ಶಿ ಪೌಲಿನ್ ರೇಗೊ ವಂದಿಸಿದರು.






