ಬೆಳ್ತಂಗಡಿ : ‘ನಿರ್ಗತಿಕರ, ಮಾನಸಿಕ ಅಸ್ವಸ್ಥರ, ವೃದ್ಧರ ಸೇವೆ ಮಾಡುವ ಸಿಯೋನ್ ಆಶ್ರಮದ ಕಾರ್ಯ ದೇವರು ಮೆಚ್ಚುವಂತಹುದ್ದು. ಇದೀಗ ಕೊರೊನಾ ಮಹಾಮಾರಿಯು ಇಲ್ಲಿನ ಅನಾಥರಿಗೆ ಮಾತ್ರವಲ್ಲ; ಮಾನಸಿಕ ಅಸ್ವಸ್ಥರಿಗೂ ಕಾಡುತ್ತಿದ್ದು, ಇವರ ಸೇವೆ ಮಾಡುವ ಜವಾಬ್ದಾರಿ ಎಲ್ಲರದ್ದಾಗಿದೆ’ ಎಂದು ಬೆಳ್ತಂಗಡಿ ಧರ್ಮ ಪ್ರಾಂತ್ಯದ ಬಿಷಪ್ ಅತಿವಂದನೀಯ ಲಾರೆನ್ಸ್ ಮುಕ್ಕುಯಿ ಹೇಳಿದ್ದಾರೆ.ಅವರು ಜೂನ್ 3ರಂದು ನೆರಿಯ ಗ್ರಾಮದ ಗಂಡಿಬಾಗಿಲು ಸಿಯೋನ್ ಆಶ್ರಮದಲ್ಲಿ ಅನ್ನದಾನ ಸೇವೆಗೆ ಚಾಲನೆ ನೀಡಿ ಮಾತನಾಡುತ್ತಿದ್ದರು.‘ಸೇವಾ ಕಾರ್ಯವನ್ನು ಸರ್ಕಾರ ಮಾಡಬೇಕಿದ್ದರೂ ಸರ್ಕಾರದ ಪರವಾಗಿ ಇಲ್ಲಿನ ಮ್ಯಾನೆಜಿಂಗ್ ಟ್ರಸ್ಟಿ ಯು. ಸಿ. ಪೌಲೋಸ್ ಮಾಡುತ್ತಿದ್ದಾರೆ. ಸಂಕಷ್ಟ ಕಾಲದಲ್ಲಿ ಶಾಸಕರ ಸಹಿತ ಎಲ್ಲಾ ಸಂಘ ಸಂಸ್ಥೆಗಳು ಎಲ್ಲಾ ಧರ್ಮದವರು ಅಧಿಕಾರಿಗಳು ಸಿಯೋನ್ ಆಶ್ರಮದ ಬೆಂಬಲಕ್ಕೆ ನಿಂತಿರುವುದು ಮಾನವೀಯತೆಯನ್ನು ಎತ್ತಿತೋರಿಸಿದೆ. ಇದೀಗ ಬೆಳ್ತಂಗಡಿ ಧರ್ಮಪ್ರಾಂತ್ಯದ ವತಿಯಿಂದ ಎಲ್ಲಾ ಚರ್ಚುಗಳ ಧರ್ಮಗುರುಗಳು ಸೇರಿ ಸಿಯೋನ್ ಆಶ್ರಮಕ್ಕೆ 15 ದಿನಗಳ ಉಚಿತ ಊಟದ ವ್ಯವಸ್ಥೆ ಮತ್ತು ಇವರ ಆರೈಕೆಗಾಗಿ ಓರ್ವ ವೈದ್ಯರನ್ನು ಮತ್ತು 6ಮಂದಿ ದಾದಿಯರನ್ನು ನಿಯೋಜಿಸಲಾಗಿದೆ ಎಂದರು.ಬೆಳ್ತಂಗಡಿ ತಾಲ್ಲೂಕು ಪಂಚಾಯಿತ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕುಸುಮಾಧರ್ ಮಾತನಾಡಿ, ಕೊರೊನಾ ಮಹಾಮಾರಿಯು ಗ್ರಾಮೀಣ ಭಾಗದಲ್ಲಿ ಆತಂಕವನ್ನು ಸೃಷ್ಠಿ ಮಾಡಿದೆ. ಸಿಯೋನ್ ಆಶ್ರಮದಂತಹ ಸೇವಾ ಕಾರ್ಯದಲ್ಲಿ ಎಲ್ಲರೂ ಒಗ್ಗಟ್ಟಾಗಿ ಮಾನವ ಧರ್ಮದ ಗುಣಗಳನ್ನು ಅಳವಡಿಸಿ ಕೈಜೋಡಿಸಬೇಕು ಎಂದರು.ಆಶ್ರಮದ ಮ್ಯಾನೆಜಿಂಗ್ ಟ್ರಸ್ಟಿ ಯು. ಸಿ. ಪೌಲೋಸ್ ಮಾತನಾಡಿ, ಅನಾಥರ, ಮಾನಸಿಕ ಅಸ್ವಸ್ಥರ ಸೇವೆಯಲ್ಲಿ ಅನೇಕ ಕಷ್ಟ ಸುಖಗಳನ್ನು ಅನುಭವಿಸಿದ್ದೇನೆ. ಆದರೆ ಈ ಬಾರಿ ಒಮ್ಮೆಲೆ ಬಂದಂತಹ ಕೊರೊನಾ ಮಹಾಮಾರಿಯಿಂದ ತೀವ್ರ ಕಷ್ಟವನ್ನು ಎದುರಿಸಿದ್ದು ದಿಕ್ಕು ತೋಚದ ಸ್ಥಿತಿಗೆ ತಲುಪಿದ್ದೇವೆ. ಈ ಸಂದರ್ಭದಲ್ಲಿ ಶಾಸಕರು, ಡಾ. ಡಿ. ವೀರೇಂದ್ರ ಹೆಗ್ಗಡೆಯವರು, ಜಿಲ್ಲಾಡಳಿತ, ತಾಲೂಕು ಆಡಳಿತ, ಸ್ಥಳೀಯ ಗ್ರಾಮ ಪಂಚಾಯಿತಿ ಹಾಗೂ ಸರ್ವ ಧರ್ಮೀಯ ಸಂಘಟನೆಗಳು ಕೈಜೋಡಿಸಿರುವುದರಿಂದ ಶಕ್ತಿ ಬಂದಂತಾಗಿದೆ ಎಂದರು.ಸಭೆಯಲ್ಲಿ ಮಾನವ ಸೇವಾ ಸ್ಪಂದನಾ ಇದರ ಚೇರ್ಮ್ಯಾನ್ ಸೆಬಾಸ್ಟಿಯನ್, ಕ್ಯಾಪ್ಟನ್ ಅಶ್ರಫ್ ಆಲಿಕುಂಞ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಾಯತ್ರಿ, ಧರ್ಮ ಪ್ರಾಂತ್ಯದ ವಿವಿಧ ಸಂಘಟನೆಗಳ ನಿರ್ದೇಶಕರು ಹಾಗೂ ಟಾಸ್ಕ್ ಫೋರ್ಸ್ ತಂಡದ ನೇತೃತ್ವ ವಹಿಸಿರುವ ವಂದನೀಯ ಜೋಸೆಫ್ ಚೀರನ್, ವಂದನೀಯ ಅಬ್ರಾಹಂ ಪಟ್ಟೇರಿಲ್, ವಂದನೀಯ ಚುಮ್ಮಾರ್, ವಂದನೀಯ ಸಿರಿಲ್, ತೋಟತ್ತಾಡಿ ವಲಯದ ಟಾಸ್ಕ್ ಫೋರ್ಸ್ ಕನ್ವೀನರ್ ಸೆಬಾಸ್ಟಿಯನ್ ಪಿ. ಸಿ., ಗಂಡಿಬಾಗಿಲು ಟಾಸ್ಕ್ ಫೋರ್ಸ್ನ ಕ್ಯಾಪ್ಟನ್ ಅಜಿತ್, ಚರ್ಚಿನ ಟ್ರಸ್ಟಿಗಳಾದ ಜೋಸೆಫ್, ಮನೋಜ್, ಟೈಟಸ್, ಚಾಂಡಿ ಸಿ. ವಿ., ಸುಜನ್ ಸ್ಥಳೀಯರಾದ ಬೇಬಿ ಮಥಾಯಿ, ಫ್ರಾನ್ಸಿಸ್ ಟಿ.ಪಿ ಉಪಸ್ಥಿತರಿದ್ದರು. ಶಿಜು ಸಿ. ವಿ. ಕಾರ್ಯಕ್ರಮ ನಿರೂಪಿಸಿದರು.






