ಬೆಳ್ತಂಗಡಿ: ಎರಡು ವರ್ಷಗಳ ಹಿಂದೆ ಬೆಳ್ತಂಗಡಿ ತಾಲೂಕಿನ ಕೆಲವೆಡೆ ಸುರಿದ ಭಾರೀ ಮಳೆ ಅದರಿಂದ ಉಂಟಾದ ನೆರೆ ಹಾಗೂ ಭೂಕುಸಿತದಿಂದ ಯಾರು ನಷ್ಟ ಅನುಭವಿಸಿದ್ದಾರೆ; ಯಾರು ತಮ್ಮ ಕೃಷಿ ಮತ್ತು ಮನೆ ಕಳೆದುಕೊಂಡಿದ್ದಾರೆ; ಯಾರು ಸರಕಾರದಿಂದ ಪರಿಹಾರ ಪಡೆದಿದ್ದಾರೆ ಎಂಬುದು ಈಗ ಎಲ್ಲರೂ ಮರೆತ ವಿಚಾರ. ಆದರೆ ಆ ಭೀಕರ ನೆರೆಯ ಸಂದರ್ಭ ನದಿ, ಹೊಳೆ, ತೊರೆ, ಹಳ್ಳಗಳಲ್ಲಿ ತುಂಬಿದ ಹೂಳೆತ್ತುವ ನೆಪದಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ ಹುಟ್ಟಿಕೊಂಡ ಮರಳು ಮಾಫಿಯಾ ಇಂದು ತನ್ನ ಕಬಂಧ ಬಾಹುಗಳನ್ನು ಚಾಚಿ ತಾಲೂಕಿನಲ್ಲಿರುವ ಮರಳನ್ನೆಲ್ಲಾ ದೋಚುತ್ತಿರುವುದು ಮಾತ್ರ ಸತ್ಯ. ಈ ಸತ್ಯವನ್ನು ಕಣ್ಣಾರೆ ಕಂಡೂ ಕುರುಡನಂತಿರುವ ತಾಲೂಕು ಆಡಳಿತ ಸಹಿತ ಈ ಅಕ್ರಮ ದಂದೆಗೆ ಕಡಿವಾಣ ಹಾಕಬೇಕಾದ ಸಂಬಂಧಿತ ಸರಕಾರಿ ಇಲಾಖಾಧಿಕಾರಿಗಳು ಮರಳು ಮಾಫಿಯಾದ ಕುಳಗಳು ಎಸೆಯುವ ಕಾಸಿಗೆ ಜೊಲ್ಲು ಸುರಿಸುತ್ತಾ, ತಮ್ಮ ಕರ್ತವ್ಯ ಮರೆತಿರುವುದು ವ್ಯವಸ್ಥೆಯಲ್ಲಿನ ದುರಂತವೇ ಸರಿ. ಬೆಳ್ತಂಗಡಿ ತಾಲೂಕಿನಲ್ಲಿ ರಾಜಾರೋಷವಾಗಿ ನಡೆಯುತ್ತಿರುವ ಅಕ್ರಮ ಮರಳು ದರೋಡೆಗೆ ಕಡಿವಾಣ ಹಾಕುವವರು ಯಾರು ಎಂಬುದು ಯಕ್ಷ ಪ್ರಶ್ನೆಯಾಗಿದೆ.
ಇದೀಗ ಜೂನ್ 3ರಂದು ನಡೆದ ಹೊಸ ಬೆಳವಣಿಗೆಯೊಂದು ತಾಲೂಕಿನ ಮರಳು ಮಾಫಿಯಾದ ಕುಳಗಳಿಗೆ ಹಬ್ಬದ ವಾತಾವರಣ ಸೃಷ್ಟಿಸಿದೆ. ನಿದ್ದೆ ಬರುವವನನ್ನು ಹಾಸಿಗೆಗೆ ತಳ್ಳಿದ ಅನುಭವ ಇಲ್ಲಿನ ಮರಳು ದಂದೆಕೋರರಿಗೆ ಆದರೂ ಅಚ್ಚರಿ ಇಲ್ಲ. ಜೂನ್ 3ರಂದು ಬೆಳ್ತಂಗಡಿ ತಾಲೂಕಿಗೆ ಭೇಟಿ ನೀಡಿದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ, ತಾಲೂಕಿನ ಕೆಲ ನದಿ, ಕಿಂಡಿ ಅಣೆಕಟ್ಟು ಹಾಗೂ ಉಪನದಿ ಮತ್ತು ಹೊಳೆಗಳಲ್ಲಿ ಸಂಗ್ರಹಗೊಂಡ ಮರಳು ದಿಬ್ಬಗಳನ್ನು ವೀಕ್ಷಿಸಿದರು. ಈ ಮರಳು ಸಂಗ್ರಹಣೆ ಒಂದು ತೊಂದರೆ ಎಂಬ ತೀರ್ಮಾನಕ್ಕೆ ಬಂದ ತಾಲೂಕು ಆಡಳಿತ ಈ ಬಗ್ಗೆ ವರದಿ ಸಿದ್ಧಪಡಿಸಿ, ಜಿಲ್ಲಾಧಿಕಾರಿಗಳಿಗೆ ನೀಡಿದ್ದು, ಜಿಲ್ಲಾಡಳಿತದಿಂದ ಅನುಮತಿ ಸಿಕ್ಕ ಕೂಡಲೇ ಸ್ಥಳೀಯ ಆಡಳಿತದ ಮುಖೇನ ಮರಳು ತೆರವುಗೊಳಿಸಲಾಗುವುದು ಎಂದು ಹೇಳಿಕೆ ನೀಡಿದ್ದು, ಇದು ತಾಲೂಕು ಆಡಳಿತದಿಂದ ಜನತೆಯ ಕಣ್ಣಿಗೆ ಮಣ್ಣೆರಚುವ ತಂತ್ರವಾಗಿದೆ ಎಂದು ಆರೋಪಿಸುತ್ತಿರುವ ತಾಲೂಕಿನ ಕಾನೂನು ಪಾಲಕ ನಾಗರಿಕರು; ಈ ಬಾರಿಯಾದರೂ ಮರಳು ತೆರವು ಕಾರ್ಯಾಚರಣೆ ನೇರವಾಗಿ ಜಿಲ್ಲಾಧಿಕಾರಿಗಳ ಕಣ್ಗಾವಲಿನಲ್ಲಿ ಆಗಲಿ ಎಂದು ಆಗ್ರಹಿಸಿದ್ದಾರೆ.
ಕಳೆದೆರಡು ವರ್ಷಗಳಿಂದ ಬೆಳ್ತಂಗಡಿ ತಾಲೂಕಿನ ನೇತ್ರಾವತಿ ನದಿ ಸಹಿತ ಎಲ್ಲ ನದಿ, ಉಪನದಿ, ಹೊಳೆ ಹಾಗೂ ಹಳ್ಳಗಳಿಂದ ಹೂಳೆತ್ತುವ ನೆಪದಲ್ಲಿ ಕೋಟ್ಯಾಂತರ ರೂಪಾಯಿ ಮೌಲ್ಯದ ಮರಳು ದರೋಡೆಯಾಗಿದೆ; ಇಂದಿಗೂ ರಾಜಾರೋಷವಾಗಿ ನಡೆಯುತ್ತಿದೆ. ಇದೀಗ ಜಿಲ್ಲಾಧಿಕಾರಿಗಳು ಇಲ್ಲಿ ಹೂಳೆತ್ತಲು ಹಸಿರು ನಿಶಾನೆ ತೋರಿದರೆ, ಮರಳು ಮಾಫಿಯಾದ ದರ್ಪ-ದೌಲತ್ತಿನ ಮುಂದೆ ಗ್ರಾಮ ಪಂಚಾಯತ್ ಸಹಿತ ಸ್ಥಳೀಯ ಆಡಳಿತ ಮರಳು ದರೋಡೆಗೆ ಮೂಕ ಸಾಕ್ಷಿಯಾಗಬೇಕಾದೀತು.






