ಬೆಳ್ತಂಗಡಿ: ಕಳೆದ ಎಪ್ರಿಲ್ ಕೊನೆಯ ವಾರದಲ್ಲಿ ರಾಜ್ಯ ಸರಕಾರ ಕೊರೋನಾ ಎರಡನೇ ಅಲೆಯ ನಿಯಂತ್ರಣಕ್ಕಾಗಿ ರಾಜ್ಯದಲ್ಲಿ ಜನತಾ ಕರ್ಫ್ಯೂ ಹೆಸರಿನ ಲಾಕ್‌ಡೌನ್‌ಗೆ ಮುಂದಾಗುತ್ತಿದ್ದಂತೆ ಬೆಂಗಳೂರಲ್ಲಿ ಉದ್ಯೋಗದಲ್ಲಿದ್ದ ಸಾಕಷ್ಟು ಮಂದಿ ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜ ಎಪ್ರಿಲ್ 24ಹಾಗೂ 25ತಾರೀಕಿನಂದು ಉಚಿತವಾಗಿ ವ್ಯವಸ್ಥೆಗೊಳಿಸಿದ ಬಸ್‌ಗಳಲ್ಲಿ ಎದ್ದೆನೋ-ಬಿದ್ದೆನೋ ಎಂಬಂತೆ ಓಡಿ ಬಂದು ಬಸ್ಸನ್ನೇರಿ ಬೆಳ್ತಂಗಡಿ ತಾಲೂಕಿನ ತಮ್ಮ ಊರುಗಳಿಗೆ ಮರಳಿದರು. ಇದರಲ್ಲಿ ಅನೇಕರು ಊರಿಗೆ ಮರಳುತ್ತಿದ್ದಂತೆ ಶಾಸಕ ಹರೀಶ್ ಪೂಂಜರ ಉಸ್ತುವಾರಿಯಲ್ಲಿ ಹಳ್ಳಿಯ ಶಾಲೆಗಳಲ್ಲಿ ವ್ಯವಸ್ಥೆಗೊಳಿಸಲಾದ ಕ್ವಾರಂಟೈನ್ ಸೆಂಟರ್‌ಗಳಲ್ಲಿ ವಾಸ್ತವ್ಯವಿದ್ದು ಕೋವಿಡ್ ಟೆಸ್ಟ್ ಮಾಡಿಸಿಕೊಂಡು ತಮ್ಮ ಮನೆಗೆ ಮರಳುವ ಬದಲಾಗಿ ಬಸ್‌ನಿಂದ ಇಳಿದು ನೇರವಾಗಿ ಮನೆಗೆ ತೆರಳಿದ್ದರು. ಶಾಸಕ ಹರೀಶ್ ಪೂಂಜರ ಕೃಪೆಯಿಂದ ಬೆಂಗಳೂರಿಂದ ಬೆಳ್ತಂಗಡಿ ತಾಲೂಕಿನ ತಮ್ಮ ಊರುಗಳಿಗೆ ಚಿಕ್ಕಾಸೂ ಖರ್ಚಿಲ್ಲದೇ ಧರ್ಮಾರ್ಥವಾಗಿ ಬಂದ ಈ ಮಂದಿ ತಮ್ಮ ಹುಟ್ಟೂರಲ್ಲಿ ಕೊರೋನಾ ನಿಯಂತ್ರಣಕ್ಕಾಗಿ ಶಾಸಕ ಹರೀಶ್ ಪೂಂಜ ಕೈಗೊಂಡ ಮುಂಜಾಗ್ರತಾ ಕ್ರಮವನ್ನು ಧಿಕ್ಕರಿಸಿ, ನೇರವಾಗಿ ತಮ್ಮ ಮನೆಗೆ ತೆರಳಿರುವುದು ಬೆಳ್ತಂಗಡಿ ತಾಲೂಕಿನ ಸಾಕಷ್ಟು ಹಳ್ಳಿಗಳಲ್ಲಿ ಕೊರೋನಾ ಸೋಂಕು ಹರಡಲು ಕಾರಣಗಳ ಪೈಕಿ ಪ್ರಮುಖ ಕಾರಣ ಎಂಬುದು ತಾಲೂಕಿನ ಕಾನೂನು ಪಾಲಕ ನಾಗರಿಕರ ಅಭಿಪ್ರಾಯ. ಈ ರೀತಿಯಾಗಿ ಲಾಕ್‌ಡೌನ್ ಆಗುತ್ತಿದ್ದಂತೆ ಬೆಂಗಳೂರಿಂದ ಊರಿಗೆ ಬಂದು ತಮ್ಮ ಅಜಾಗರೂಕತೆಯಿಂದ ಊರುಗಳಲ್ಲಿ ಕೊರೋನಾ ಸೋಂಕು ಹರಡಲು ಕಾರಣರಾದ ಈ ಮಂದಿ ಇದೀಗ ಲಾಕ್‌ಡೌನ್ ತೆರವಿನ ವಾಸನೆ ದೊರಕುತ್ತಿದ್ದಂತೆ ತಮ್ಮ ಊರಿನಿಂದ ಮತ್ತೆ ಬೆಂಗಳೂರಿನತ್ತ ಮುಖ ಮಾಡಿದ್ದಾರೆ. ಇಂತಹ ಮಂದಿಗಾಗಿ ಶಾಸಕ ಹರೀಶ್ ಪೂಂಜ ಇದೀಗ ಬೆಳ್ತಂಗಡಿಯಿಂದ ಬೆಂಗಳೂರಿಗೆ ಮರಳಲು ಉಚಿತ ಬಸ್ ವ್ಯವಸ್ಥೆಗೆ ಮುಂದಾಗಿದ್ದು, ಜೂನ್ 7ರಂದು ಬೆಳಿಗ್ಗೆ ಬೆಳ್ತಂಗಡಿ ಬಸ್‌ನಿಲ್ದಾಣದಿಂದ ಹೊರಟ ಮೊದಲ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ 25ಕ್ಕೂ ಅಧಿಕ ಮಂದಿ ಬೆಂಗಳೂರಿಗೆ ಹೊರಟಿದ್ದಾರೆ. ಇದೀಗ ಲಾಕ್‌ಡೌನ್ ಸಡಿಲಿಕೆ ಬಗ್ಗೆ ರಾಜ್ಯ ಸರಕಾರ ಅಧಿಕೃತವಾಗಿ ಏನೂ ಪ್ರಕಟಿಸುವ ಮುನ್ನವೇ ಲಾಕ್‌ಡೌನ್ ಸಡಿಲಿಕೆಯ ಬರೀ ವಾಸನೆ ಪಡೆದು ಹಳ್ಳಿಯಿಂದ ಬೆಂಗಳೂರಿಗೆ ಮರಳಲೂ ಶಾಸಕ ಹರೀಶ್ ಪೂಂಜರ ಕೃಪೆಯಿಂದ ಪುಕ್ಕಟೆ ಬಸ್ ಪಡೆದ ಈ ಮಂದಿ ಮತ್ತು ಇನ್ನು ಮುಂದಿನ ದಿನಗಳಲ್ಲಿ ಪುಕ್ಕಟೆ ಬಸ್ ಏರಿ ಬೆಂಗಳೂರಿಗೆ ಮರಳುವ ಮಂದಿ ಬೆಂಗಳೂರಿಗೆ ಹಿಂತಿರುಗಿದ ಬಳಿಕ ಅಲ್ಲಿಯಾದರೂ ತಮ್ಮ ತಮ್ಮ ಮನೆಗಳಲ್ಲಿ ಕ್ವಾರಂಟೈನ್ ಆಗುವುದರ ಜೊತೆಗೆ ರಾಜ್ಯ ಸರಕಾರ ಕಾಲಕಾಲಕ್ಕೆ ಹೊರಡಿಸುವ ಕೋವಿಡ್ ನಿಯಂತ್ರಣ ನಿಯಮಗಳನ್ನು ಪಾಲಿಸುವ ಮೂಲಕ ಬೆಂಗಳೂರಲ್ಲಿ ಮತ್ತೆ ಕೊರೋನಾ ಹರಡದಂತೆ ಮುಂಜಾಗ್ರತೆ ವಹಿಸಿ ಬೆಳ್ತಂಗಡಿ ತಾಲೂಕಿನ ಮಾನ ಕಾಪಾಡುವಂತಾಗಲಿ ಎಂಬುದು ತಾಲೂಕಿನ ಕಾನೂನು ಪಾಲಕ ನಾಗರಿಕರ ಆಗ್ರಹ.






