ಬೆಳ್ತಂಗಡಿ: ಕರಾವಳಿ ಜಿಲ್ಲೆಗಳ ಹೆಚ್ಚಿನ ಪ್ರೇಕ್ಷಕರು ಇಷ್ಟ ಪಡುವ ಕಲೆ ಯಕ್ಷಗಾನ. ಕೋವಿಡ್ ಮಹಾಮಾರಿ ಯಕ್ಷಗಾನ ಕಲಾವಿದರು ಹಾಗೂ ಪ್ರೇಕ್ಷಕರಿಗೂ ನೋವುಂಟುಮಾಡಿದೆ. ಈ ಸಂದರ್ಭದಲ್ಲಿ ಯಕ್ಷಗಾನ ಕಲೆ ಶಕ್ತಿ ತುಂಬುತ್ತಿದೆ. ನೋವಿನ ಸಂದರ್ಭದಲ್ಲಿ ಕಲಾಪ್ರದರ್ಶನದಿಂದ ಯಕ್ಷಗಾನ ರಸದೌತಣ ಇನ್ನಷ್ಟು ನಡೆಯಲಿ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಹೇಳಿದರು. ಅವರು ಜೂನ್ 12ರಂದು ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ) ಉಜಿರೆ, ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾ (ರಿ) ಬೆಳ್ತಂಗಡಿ, ಮತ್ತು ಬೆಳ್ತಂಗಡಿ ಹಾಗೂ ಬಂಟ್ವಾಳ ರೋಟರಿ ಕ್ಲಬ್‌ಗಳ ಸಹಯೋಗದೊಂದಿಗೆ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಕೃಪಾಶೀರ್ವಾದಗಳೊಂದಿಗೆ ನೇರಪ್ರಸಾರದಲ್ಲಿ ಬಿತ್ತರಗೊಳ್ಳುತ್ತಿರುವ 9ದಿನಗಳ ಯಕ್ಷಸಾಂಗತ್ಯ ಸಪ್ತಕ ತಾಳಮದ್ದಳೆ ‘ಯಕ್ಷಾವತರಣ -2’ಕ್ಕೆ ದೀಪಪ್ರಜ್ವಲನದ ಮೂಲಕ ಚಾಲನೆ ನೀಡಿ ಮಾತನಾಡುತ್ತಿದ್ದರು. ಹಿರಿಯ ಕಲಾವಿದರು ಕಟ್ಟಿ ಬೆಳೆಸಿದ ಪರಿಶ್ರಮದಿಂದ ಯಕ್ಷಗಾನ ಉಳಿದಿದೆ ಯುವ ಕಲಾವಿದರು ಸಾಧನೆಯಿಂದ ಅದನ್ನು ಮುನ್ನಡೆಸುತ್ತಿದ್ದಾರೆ. ಯಕ್ಷಗಾನ ಕಲೆಗೆ ಕಲಾವಿದರು ಹಾಗು ಕಲಾಭಿಮಾನಿಗಳ ಪ್ರೋತ್ಸಾಹ ನಿರಂತರವಾಗಿರಬೇಕು. ಕೋವಿಡ್ ಮಹಾಮಾರಿ ನಿರ್ಮೂಲನೆಯಾಗಿ ಬೇಗನೆ ಸ್ವಾಸ್ತ್ಯ ಸಮಾಜ ನಿರ್ಮಾಣವಾಗಲಿ ಎಂದು ಅವರು ಶುಭ ಹಾರೈಸಿದರು. ಸರಳ ಸಮಾರಂಭದಲ್ಲಿ ಯಕ್ಷಗಾನ ಭಾಗವತ ಪಟ್ಲ ಸತೀಶ್ ಶೆಟ್ಟಿ, ಉಜಿರೆಯ ಉದ್ಯಮಿಗಳಾದ ಪ್ರಭಾಕರ ಶೆಣೈ, ಅನಂತಕೃಷ್ಣ ರಾವ್, ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾ ಅಧ್ಯಕ್ಷ ದಿನೇಶ್ ರಾವ್, ಕಾರ್ಯದರ್ಶಿ ಲಕ್ಷ್ಮಿ ನಾರಾಯಣ ರಾವ್, ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಬಿ. ಕೆ. ಧನಂಜಯ ರಾವ್, ಕಾರ್ಯದರ್ಶಿ ಕೆ. ವಿ. ಶ್ರೀಧರ್, ನಿಯೋಜಿತ ಕಾರ್ಯದರ್ಶಿ ಅಬೂಬಕ್ಕರ್, ಹಿಮ್ಮೇಳ ಕಲಾವಿದರಾದ ಸೀತಾರಾಮ ತೋಳ್ಪಾಡಿತ್ತಾಯ, ಜನಾರ್ದನ ತೋಳ್ಪಡಿತ್ತಾಯ, ಗಿರೀಶ್ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು.ಕುರಿಯ ವಿಠಲ ಶಾಸ್ತ್ರಿ ಪ್ರತಿಷ್ಠಾನದ ಸಂಚಾಲಕ ಉಜಿರೆ ಅಶೋಕ ಭಟ್ ಪ್ರಸ್ತಾವಿಸಿ, ಕೋರೋನ ಸಂಕಷ್ಟದ ಎರಡನೇ ವರ್ಷ ಯಕ್ಷಗಾನ ತಾಳಮದ್ದಲೆ ಯನ್ನು ಆಯೋಜಿಸಿ ಕಲೆ ಹಾಗೂ ಕಲಾವಿದರನ್ನು ಪ್ರೋತ್ಸಾಹಿಸಿ, ಕಲಾಭಿಮಾನಿಗಳಿಗೆ ನೇರ ಪ್ರಸಾರದ ಮೂಲಕ ರಸಾಸ್ವಾದನೆಗೆ ಅವಕಾಶ ಕಲ್ಪಿಸಿಕೊಡಲಾಗುತ್ತಿದೆ ಎಂದರು. ಮೊದಲ ದಿನ ‘ಚೂಡಾಮಣಿ’ ಪ್ರಸಂಗದ ತಾಳಮದ್ದಳೆ ಪಟ್ಲ ಸತೀಶ್ ಶೆಟ್ಟಿ ಹಾಡುಗಾರಿಕೆಯಲ್ಲಿ ಸೀತಾರಾಮ ತೋಳ್ಪಡಿತ್ತಾಯ, ಜನಾರ್ದನ ತೋಳ್ಪಡಿತ್ತಾಯ ಮತ್ತು ಗಿರೀಶ್ ಹೆಗ್ಡೆ ಹಿಮ್ಮೇಳ ಸಹಕಾರದಲ್ಲಿ ಭಾಸ್ಕರ ರೈ ಕುಕ್ಕುವಳ್ಳಿ , ಹರೀಶ್ ಬೋ ಳಂತಿಮೊಗರು, ವಾಟೆಪಡ್ಪು ವಿಷ್ಣು ಶರ್ಮ ಮತ್ತು ಉಜಿರೆ ಅಶೋಕ ಭಟ್ ಅರ್ಥಗಾರಿಕೆಯಲ್ಲಿ ನಡೆದು ಯುಪ್ಲಸ್ ವಾಹಿನಿಯ ನೇರಪ್ರಸಾರದಲ್ಲಿ ಬಿತ್ತರಗೊಂಡಿತು. ಜೂನ್ 20 ರವರೆಗೆ ಪ್ರತಿನಿತ್ಯ ಸಂಜೆ 7 ರಿಂದ 9.30ರವರೆಗೆ ಪೌರಾಣಿಕ ಪ್ರಸಂಗದ ಯಕ್ಷಗಾನ ತಾಳಮದ್ದಳೆ ಪ್ರಸಾರಗೊಳ್ಳುತ್ತಿದೆ.






