ಹಿಂದು ಸಮಾಜವನ್ನು ಒಡೆಯುವ ನಟ ಚೇತನ್ ಹುನ್ನಾರಕ್ಕೆ ಖಂಡನೆ

ಹಿಂದು ಸಮಾಜವನ್ನು ಒಡೆಯುವ ನಟ ಚೇತನ್ ಹುನ್ನಾರಕ್ಕೆ ಖಂಡನೆ
Facebook
Twitter
LinkedIn
WhatsApp

ಬೆಳ್ತಂಗಡಿ:ಬೇರೆ ಮತ ಧರ್ಮಗಳ ಹುಳುಕುಗಳನ್ನು ಪ್ರಶ್ನಿಸಲು ಧೈರ್ಯ ತೋರದ ನಟ ಚೇತನ್ ಹಿಂದೂ ಧರ್ಮದ ಒಂದು ಸಮುದಾಯವನ್ನು ಹೀಯಾಳಿಸಿ, ಉಳಿದ ಸಮುದಾಯವನ್ನು ಎತ್ತಿಕಟ್ಟುವ ಪ್ರಯತ್ನ ಮಾಡುತ್ತಿರುವುದನ್ನು ವಿಶ್ವ ಹಿಂದು ಪರಿಷತ್ ತೀವ್ರವಾಗಿ ಖಂಡಿಸುತ್ತದೆ ಎಂದು ವಿಶ್ವ ಹಿಂದು ಪರಿಷತ್ ಬೆಳ್ತಂಗಡಿ ತಾಲೂಕು ಅಧ್ಯಕ್ಷ ಸುಬ್ರಹ್ಮಣ್ಯ ಕುಮಾರ್ ಅಗರ್ತ ಹೇಳಿದರು.ಅವರು ಜೂನ್ 15ರಂದು ಇಲ್ಲಿನ‌‌ ಪಿನಾಕಿ ಸಭಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.ಹಣ ತೆಗೆದುಕೊಂಡು ನಟಿಸುವ ಚೇತನ್ ತನ್ನ ಸ್ವಾರ್ಥಕ್ಕೊಸ್ಕರ ಹೀಯಾಳಿಸುವ ಕೆಲಸ ಮಾಡುತ್ತಿರುವುದು ಖಂಡನೀಯ. ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಮತ್ತು ಲಿಂಗ ಅಸಮಾನತೆಯ ವಿರುದ್ಧ ನಮ್ಮ ಹೋರಾಟ ಮುಂದುವರಿಯುತ್ತದೆ ಎಂಬ ಪ್ರಾರಂಭದ ನುಡಿಗಳೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಒಂದು ವೀಡಿಯೋ ಕ್ಲಿಪ್‌ನ್ನು ಹರಿಯಬಿಟ್ಟಿದ್ದು, ನಮ್ಮ ಸಮಾಜದ ಒಂದು ಅವಿಭಾಜ್ಯ ಅಂಗದ ವಿರುದ್ಧ ಅತ್ಯಂತ ಅವಹೇಳನಕಾರಿ ಮತ್ತು ದ್ವೇಷಭರಿತ ಕಾಲ್ಪನಿಕ ಮಾತುಗಳನ್ನು ಆಡಿದ್ದು, ಇದರ ಹಿಂದೆ ಹಿಂದೂ ಸಮಾಜವನ್ನು ಒಡೆಯುವ ಸ್ಪಷ್ಟ ಪ್ರಯತ್ನ ಕಂಡುಬರುತ್ತಿದೆ‌. ಹಿಂದೂ ಸಮಾಜದ ಭಾಗವಾದ ಬ್ರಾಹ್ಮಣರ ಚಟುವಟಿಕೆಗಳಿಗೆ ಆಧ್ಯಾತ್ಮಿಕ ಭಯೋತ್ಪಾದನೆ ಎಂಬ ಹೊಸ ನಾಮಕರಣವನ್ನು ಚೇತನ್‌ ಮಾಡಿದ್ದು, ಆ ಮೂಲಕ ಬ್ರಾಹ್ಮಣರನ್ನು ಭಯೋತ್ಪಾದಕರು ಎಂಬಂತೆ ಬಿಂಬಿಸುವ ಮೂಲಕ ಹಿಂದೂ ಸಮಾಜದ ಇತರರು ಬ್ರಾಹ್ಮಣರನ್ನು ದ್ವೇಷಿಸುವಂತೆ ಮಾಡುವ ಉದ್ದೇಶ ಇದರ ಹಿಂದೆ ಅಡಗಿರುತ್ತದೆ ಎಂಬುದು ಸ್ಪಷ್ಟ ಎಂದರು.ಪ್ರಸ್ತುತ ಬ್ರಾಹ್ಮಣ ಸಮಾಜವನ್ನು ಗುರಿಯಾಗಿಟ್ಟು ಮಾಡುತ್ತಿರುವ ಇಂತಹ ಪ್ರಯತ್ನಗಳು ಮುಂದೆ ಹಿಂದೂ ಸಮಾಜದ ಇತರ ವಿಭಾಗಗಳನ್ನು ಗುರಿಯಾಗಿಸಿಕೊಳ್ಳುವ ಎಲ್ಲಾ ಸಾಧ್ಯತೆಗಳೂ ಇರುತ್ತವೆ. ಹಿಂದೂ ಸಮಾಜದ ಯಾವುದೇ ವಿಭಾಗಗಳನ್ನು ಅವಹೇಳನ ಮಾಡುವ ಅಥವಾ ಪ್ರತ್ಯೇಕಿಸುವ ಯಾವುದೇ ಪ್ರಯತ್ನಗಳನ್ನೂ ವಿಶ್ವ ಹಿಂದೂ ಪರಿಷತ್ ಖಂಡಿಸುತ್ತದೆ. ಜಗತ್ತಿನ ಎಲ್ಲಾ ಧರ್ಮಗಳಲ್ಲಿಯೂ ಧರ್ಮದೊಳಗಿನ ಉಪವಿಭಾಗಗಳನ್ನು ನಾವು ಕಾಣುತ್ತೇವೆ. ಇದು ಎಲ್ಲಾ ಧರ್ಮಗಳೂ ರೂಪಿಸಿಕೊಂಡ ತಮ್ಮೊಳಗಿನ ಒಂದು ವ್ಯವಸ್ಥೆಯಾಗಿದ್ದು, ಹಿಂದೂ ಧರ್ಮದಲ್ಲಿ ಮಾತ್ರ ಕಂಡುಬರುವ ವಿಶೇಷತೆ ಅಲ್ಲ. ಆದರೆ ಹಿಂದೂ ಧರ್ಮವನ್ನು ಒಡೆಯುವ ದುರುದ್ದೇಶವನ್ನು ಹೊಂದಿರುವ ಕೆಲವು ಅನಿಷ್ಟ ಶಕ್ತಿಗಳು ಅದಕ್ಕಾಗಿ ಬೇರೆ ಬೇರೆ ವ್ಯಕ್ತಿಗಳನ್ನು ಬೇರೆ ಬೇರೆ ರೀತಿಯಲ್ಲಿ ಉಪಯೋಗಿಸಿಕೊಳ್ಳುತ್ತಿರುವುದು ಖಂಡನೀಯ. ಬಹುಷಃ ಹಣ ಪಡೆದು ನಟಿಸುವುದನ್ನೇ ತನ್ನ ವೃತ್ತಿಯಾಗಿಸಿಕೊಂಡಿರುವ ಚೇತನ್‌ರವರು ಈ ಸಂದರ್ಭದಲ್ಲಿಯೂ ಯಾವುದೋ ಲಾಭಕ್ಕಾಗಿ ತನ್ನ ನಟನೆಯನ್ನು ಇಲ್ಲಿಯೂ ಮಾಡಿದ್ದಾರೆ ಎಂಬುದು ವಿದಿತವಾಗುತ್ತಿದೆ.ತಮ್ಮ ಸ್ವಾರ್ಥ ಸಾಧನೆಗಾಗಿ ಹಿಂದೂ ಸಮಾಜದ ಯಾವುದೇ ವಿಭಾಗಗಳನ್ನು ಮತ್ತು ಅವುಗಳ ಆಚರಣೆಗಳು, ನಂಬಿಕೆಗಳು, ಜೀವನ ಪದ್ಧತಿಗಳು ಮುಂತಾದವುಗಳನ್ನು ಕೆಟ್ಟದಾಗಿ ಬಿಂಬಿಸುವ ಇಂತಹ ಪ್ರಯತ್ನಗಳನ್ನು ವಿಶ್ವ ಹಿಂದು ಪರಿಷತ್ ತೀವ್ರವಾಗಿ ವಿರೋಧಿಸುತ್ತದೆ ಮತ್ತು ಯಾವುದೋ ದುರ್ಲಾಭಕ್ಕಾಗಿ ಚೇತನ್ ಮತ್ತು ಅವರಂತವರು ಮಾಡುತ್ತಿರುವಂತಹ ಹಿಂದೂ ಸಮಾಜವನ್ನು ಒಡೆಯುವ ಇಂತಹ ಪ್ರಯತ್ನಗಳನ್ನು ವಿಶ್ವ ಹಿಂದೂ ಪರಿಷತ್ ತೀವ್ರವಾಗಿ ಖಂಡಿಸುತ್ತದೆ ಎಂದರು.ಪರಿಷತ್ ಜಿಲ್ಲಾ ಕಾರ್ಯಾಧ್ಯಕ್ಷ ಭಾಸ್ಕರ ಧರ್ಮಸ್ಥಳ ಅವರು ಹಿಂದೂ ಸಮಾಜವನ್ನು ಪ್ರತ್ಯೇಕಿಸುವಂತಹ ಮಾನಸಿಕತೆಯನ್ನು ಹೊಂದಿರುವವರಿಗೆ ನಾವು ಅವರನ್ನು ಎದುರಿಸಲು ನಮ್ಮದೇ ಆದ ರೀತಿಯಲ್ಲಿ ಸಿದ್ಧರಾಗಿದ್ದೇವೆ. ಅಥವಾ ಅಂತಹವರನ್ನು ಮಾನಸಿಕ‌ ಆಸ್ಪತ್ರೆಗೆ ದಾಖಲಿಸುವ ತಯಾರಿಯೂ ನಮ್ಮಲ್ಲಿದೆ ಎಂದರು.ಪರಿಷತ್ ಜಿಲ್ಲಾ ಸಹಕಾರ್ಯದರ್ಶಿ ನವೀನ್ ನೆರಿಯ ಅವರು ಕಮ್ಯೂನಿಸ್ಟ್ ಮಾನಸಿಕತೆಯನ್ನು ಹೊಂದಿರುವ ಚೇತನ್ ಕೆಟ್ಟ ಬುದ್ಧಿಯನ್ನು‌ ಬಿಡಬೇಕು ಎಂದರು.ಪರಿಷತ್ ಗೌರವಾಧ್ಯಕ್ಷ ಡಾl ಎಂ. ಎಂ. ದಯಾಕರ್ ಅವರು, ಸಮಸ್ತ ಹಿಂದು ಸಮಾಜ ಒಗ್ಗಟ್ಟಾಗಿ ಯಾವುದೇ ಸವಾಲನ್ನು ಎದುರಿಸಲು ‌ಸಿದ್ಧವಾಗಿದೆ. ಡೋಂಗಿ ‌ಜಾತ್ಯತೀತ ವಾದಿಗಳಿಗೆ ಇಲ್ಲಿ ಜಾಗವಿಲ್ಲಾ ಎಂದರು.ವಕೀಲ ಬಿ. ಕೆ. ಧನಂಜಯ ರಾವ್ ಅವರು, ಅಭಿವ್ಯಕ್ತಿ ಸ್ವಾತಂತ್ರ್ಯದಡಿ ನೋವಾಗುವಂತೆ ವರ್ತಿಸುವುದು ಖಂಡನೀಯ. ಸಾರ್ವಜನಿಕವಾಗಿ ಆಡಿದ ಮಾತಿನಿಂದ ಬ್ರಾಹ್ಮಣ ಪಂಗಡದವರಿಗೆ ನೋವಾಗಿದೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ವಿಶ್ವ ಹಿಂದು ಪರಿಷತ್ ತಾಲೂಕು ಕಾರ್ಯದರ್ಶಿ ಮೋಹನ್ ಬೆಳ್ತಂಗಡಿ, ಪ್ರಮುಖರಾದ ರಾಘವೇಂದ್ರ ಬೈಪಾಡಿತ್ತಾಯ, ಕೇಶವ ಭಟ್ ಅತ್ತಾಜೆ, ಗಿರೀಶ್ ಡೋಂಗ್ರೆ, ಗಣಪತಿ ಭಟ್, ವಿಶ್ವನಾಥ ಹೊಳ್ಳ ಇದ್ದರು.

Latest News

Related Posts